ಶಾಮನೂರು ಶಿವಶಂಕರಪ್ಪ ಅವರ ದಾವಣಗೆರೆ ನಿವಾಸದಿಂದ ಹೊರಟ ಎಸ್ಸೆಸ್ ಅಂತಿಮಯಾತ್ರೆಯಲ್ಲಿ ಪಾಲ್ಗೊಂಡಿದ್ದ ಜನಸಮೂಹ.  
ದಾವಣಗೆರೆ

ದೇಗುಲಗಳ ಸಾಲಿನಲ್ಲಿ ದೈವೀಪುರುಷನ ಅಂತಿಮ ಯಾನ!

ಪ್ರಮುಖ ಮುಖ್ಯಾಂಶಗಳು

  • ದೇವರ ದರ್ಶಿಸಿದ ಎಸ್ಸೆಸ್ ಪಾರ್ಥಿವ ಶರೀರ
  • ಕಂಬನಿ ಮಿಡಿದ ಸಹಸ್ರಾರು ಅಭಿಮಾನಿಗಳು
  • ಅಭಿಮಾನಿಗಳತ್ತ ಕೈಬೀಸಿ ಧನ್ಯವಾದ ಹೇಳಿದ ಪುತ್ರ ಎಸ್ಸೆಸ್ಸೆಂ
ದಾವಣಗೆರೆ: ದೇವರು, ದೇವಸ್ಥಾನಗಳೆಂದರೆ ಶಾಸಕ, ದೈವೀಪುರುಷ ಡಾ. ಶಾಮನೂರು ಶಿವಶಂಕರಪ್ಪ ಅವರಿಗೆ ಅಚ್ಚುಮೆಚ್ಚು. ಹೀಗಾಗಿ ಅವರ ಪಾರ್ಥಿವ ಶರೀರ ಕೂಡ ಸೋಮವಾರ ದಾವಣಗೆರೆಯ ಹಳೇಭಾಗದ ದೇಗುಲಗಳನ್ನು ಸುತ್ತು ಹಾಕಿತು! ಅಂತಿಮ ನಮನ ಸಲ್ಲಿಸಿತು!
ಭಾನುವಾರ ನಿಧನರಾದ ದಾವಣಗೆರೆ ಯಜಮಾನ, ಹಿರಿಜೀವ ಶಾಮನೂರು ಶಿವಶಂಕರಪ್ಪ ಅವರ ಅಂತಿಮ ಯಾತ್ರೆ ಸೋಮವಾರ ಕಾಕತಾಳೀಯ ಎಂಬಂತೆ ದೇಗುಲಗಳ ಮಾರ್ಗದಲ್ಲೇ ಸಾಗಿತು.
ನಗರದೇವತೆ ದುರ್ಗಾಂಬಿಕಾ ದೇವಸ್ಥಾನದ ಧರ್ಮದರ್ಶಿ ಸಮಿತಿ ಗೌರವಾಧ್ಯಕ್ಷರೂ ಆಗಿದ್ದ ಶಿವಶಂಕರಪ್ಪ ಅವರ ಯಾತ್ರೆ ಅದೇ ದೇವಸ್ಥಾನ ಬಳಿ ಹಾದು ಹೋಯಿತು. ಅವರ ಪಾರ್ಥಿವ ಶರೀರಕ್ಕೆ ಸಮಿತಿಯ ಪದಾಧಿಕಾರಿಗಳು ಅಗರಬತ್ತಿ ಹೊತ್ತಿಸಿ ಬೆಳಗಿ, ಹೂಮಾಲೆ ಹಾಕಿ ಬೀಳ್ಕೊಟ್ಟರು.
ನಂತರ ಹಳೇಪೇಟೆಯ ವೀರಭದ್ರೇಶ್ವರ, ಕೊಟ್ಟೂರೇಶ್ವರ ದೇವಸ್ಥಾನ ಬಳಿಯೂ ಪೂಜಾರರು ಇದೇ ವಿಧಿವಿಧಾನ ನೆರವೇರಿಸಿದರು. ಅವರ ಆರಾಧ್ಯ ದೈವವೇ ಆಗಿದ್ದ ಚೌಕಿಪೇಟೆಯ ಗುರು ಬಕ್ಕೇಶ್ವರನ ದರ್ಶನವನ್ನು ಶಿವಶಂಕರಪ್ಪ ಅವರ ಪಾರ್ಥಿವ ಶರೀರ ದೂರದಿಂದಲೇ ಪಡೆದುಕೊಂಡಿತು.
ಹಗೇದಿಬ್ಬ ವೃತ್ತ ಸಮೀಪವೇ ಶಾಮನೂರು ಶಿವಶಂಕರಪ್ಪ ಅವರಿದ್ದ ಹಳೆ ಮನೆಯಿದ್ದ ಅನತಿ ದೂರದಲ್ಲಿ ಯಾತ್ರೆ ಸಾಗಿದಾಗ ಜನಸಂದಣಿ ತುಸು ಹೆಚ್ಚಿತ್ತು. ತಮಟೆ, ನಾದಸ್ವರದವರು ಕೂಡ ದಣಿವೇ ಇಲ್ಲದಂತೆ ಕೈ, ಬಾಯಿಗೆ ಕೆಲಸ ನೀಡಿದ್ದರು!
ಹಳೇಪೇಟೆಯತ್ತ ಯಾತ್ರೆ ಬಂದಾಗ ಬಸಾಪುರದ ಬಸವ ಕಲಾಲೋಕ ತಂಡವು ಎಸ್ಸೆಸ್ ಅವರ ಕುರಿತಾದ ಹಾಡಿಗೆ ಧ್ವನಿಯಾಗಿ ಗಮನ ಸೆಳೆದಿತ್ತು. ‘ನಾಲ್ಕು ಜನರ ಹೆಗಲಲ್ಲಿ, ದಾವಣಗೆರೆಯ ಪೇಟೆಯಲ್ಲಿ, ಯಾರದಪ್ಪ ಮೆರವಣಿಗೆ, ಶಾಮನೂರು ಶಿವಶಂಕರಪ್ಪಾಜಿ ಮೆರವಣಿಗೆ..’ ಎಂಬ ಹಾಡು ಅಲ್ಲಿದ್ದ ಅಭಿಮಾನಿಗಳ ಹೃದಯ ತಟ್ಟಿತು.
ರಾಜಕಾರಣದ ಒತ್ತಡದ ನಡುವೆಯೂ ಚೌಕಿಪೇಟೆಯ ತಮ್ಮದೇ ಆದ ಶಾಮನೂರು ಕಲ್ಲಪ್ಪ ಅಂಗಡಿಗೆ ಬಂದು ಕೂತು ತೊಗರಿಬೇಳೆ ಇತರೆ ಧಾನ್ಯಗಳ ದರವನ್ನು ಕೇಳುತ್ತಿದ್ದರು ಎಸ್ಸೆಸ್. ಅಂತಿಮ ಯಾತ್ರೆ ಹಿನ್ನೆಲೆಯಲ್ಲಿ ಶಟರ್ ಎಳೆದಿದ್ದ ಅಂಗಡಿಯತ್ತ ಅವರ ಕಳೇಬರ ದಿಟ್ಟಿಸಿದಂತಿತ್ತು!
ಅಪ್ಪನ ಯಾತ್ರೆಗೆ ಹೆಗಲಾದ ಮಕ್ಕಳು
ಎಸ್ಸೆಸ್ ಅವರ ಎಂಸಿಸಿ ಬಿ ಬ್ಲಾಕ್‌ನ ನಿವಾಸ ‘ಶಿವ-ಪಾರ್ವತಿ’ ಆವರಣದಿಂದ ಮಧ್ಯಾಹ್ನ 12-35ಕ್ಕೆ ಶಿವಶಂಕರಪ್ಪ ಅವರ ಅಂತಿಮ ಯಾತ್ರೆ ಶುರುವಾಯಿತು. ಎಸ್ಸೆಸ್ ಪಾರ್ಥಿವ ಶರೀರದ ಕೈವಲ್ಯಕ್ಕೆ ಪುತ್ರ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೆಗಲು ನೀಡಿದರು.
ಪಾರ್ಥಿವ ಶರೀರ ಇರಿಸಿದ್ದ, ಪುಷ್ಪಾಲಂಕೃತ ತೆರೆದ ವಾಹನ ನಗರಾದ್ಯಂತ ಸಂಚರಿಸಿತು. ಕಿತ್ತೂರು ಚನ್ನಮ್ಮ ವೃತ್ತ, ಮದಕರಿನಾಯಕ ವೃತ್ತ, ಹಳೇಪೇಟೆ, ಹಗೇದಿಬ್ಬ ವೃತ್ತ, ಕಾಳಿಕಾದೇವಿ ರಸ್ತೆ, ಚೌಕಿಪೇಟೆ, ವೆಂಕಾಭೋವಿ ವೃತ್ತದ ಮೂಲಕ ಕಲ್ಲೇಶ್ವರ ರೈಸ್‌ಮಿಲ್‌ವರೆಗೆ ಸುಮಾರು 4 ಕಿಮೀವರೆಗೆ ಯಾತ್ರೆ ಸಾಗಿತು. ಸಹಸ್ರಾರು ಜನರು ಇದಕ್ಕೆ ಸಾಕ್ಷಿಯಾದರು. ಮಾರ್ಗದುದ್ದಕ್ಕೂ ಸಾರ್ವಜನಿಕರು ಪಾರ್ಥಿವ ಶರೀರದತ್ತ ಹೂಮಳೆಗರೆದರು. ಎಸ್ಸೆಸ್ ಅವರ ಸಂಸ್ಥೆಗಳ ಕಾರ್ಮಿಕರು, ಸಹಾಯ ಪಡೆದವರು ಎಸ್ಸೆಸ್ ಅವರ ನಾನಾ ಗುಣಗಳ ಬಗ್ಗೆ ಮೆಲುಕು ಹಾಕಿದರು.
ಪುತ್ರರಾದ ಎಸ್.ಎಸ್.ಮಲ್ಲಿಕಾರ್ಜುನ್, ಎಸ್.ಎಸ್.ಬಕ್ಕೇಶ್, ಮೊಮ್ಮಗ ಸಮರ್ಥ ಮಲ್ಲಿಕಾರ್ಜುನ್ ತೆರೆದ ವಾಹನದಲ್ಲಿ ಸಾಗಿದ್ದಲ್ಲದೇ ಎಸ್ಸೆಸ್ ಅಭಿಮಾನಿಗಳತ್ತ ಕೈಬೀಸಿದರು. ಶಾಸಕ ಕೆ.ಎಸ್. ಬಸವಂತಪ್ಪ ಭಜನಾ ತಂಡದ ಜತೆಗಿದ್ದು ತಾಳ ಹಾಕಿದರು. ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ಕಾಳಿಕಾದೇವಿ ರಸ್ತೆ ಬಳಿ ಜವಳಿ ವರ್ತಕ ಬಿ.ಸಿ. ಉಮಾಪತಿ ಹಾಗೂ ಅವರ ಸಹೋದರರು ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿದರು.
ದಾರಿಯುದ್ದಕ್ಕೂ ಅಭಿಮಾನಿಗಳು, ಕಾರ್ಯಕರ್ತರು ಹೂಮಾಲೆ ಹಾಕಿ ನಮನ ಸಲ್ಲಿಸಿದರು. ಇದ್ದಲ್ಲಿಂದಲೇ ಕೈಮುಗಿದು ಅಂತಿಮ ವಿದಾಯ ಹೇಳಿದರು. ಕೆಲವರ ಕಣ್ಣಾಲಿ ತುಂಬಿ ಬಂದವು. ಅಲ್ಲಲ್ಲಿ ಸಿಡಿಮದ್ದು ಸಿಡಿಸಲಾಯಿತು. ಯಾತ್ರೆ ಮಾರ್ಗದಲ್ಲಿ ಅಲ್ಲಲ್ಲಿ ಜ್ಯುವೆಲರಿ, ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಎಸ್ಸೆಸ್ ಅವರ ನಿವಾಸ, ಹೈಸ್ಕೂಲ್ ಮೈದಾನ, ಕಲ್ಲೇಶ್ವರ ಮಿಲ್ ಮೂರೂ ಕಡೆಗಳಲ್ಲಿ ಪೊಲೀಸರು ಜನರನ್ನು ನಿಯಂತ್ರಿಸುವಲ್ಲಿ ಹರಸಾಹಸ ಪಟ್ಟರು.
ಗೃಹಕಚೇರಿಯಲ್ಲಿ ವಿಧ್ಯುಕ್ತ ಪೂಜೆ
ನಸುಕಿನ ಜಾವ ನಾಲ್ಕು ಗಂಟೆಗೆ ಹೊತ್ತಿಗೆ ಎಸ್ಸೆಸ್ ಅವರ ಶರೀರ ವಿಶೇಷ ವಾಹನದ ಮೂಲಕ ದಾವಣಗೆರೆಯ ಅವರ ಗೃಹ ಕಚೇರಿಗೆ ತಲುಪಿತು. ನಂತರ ಮಕ್ಕಳಾದ ಎಸ್.ಎಸ್.ಬಕ್ಕೇಶ್, ಎಸ್.ಎಸ್. ಗಣೇಶ್, ಎಸ್.ಎಸ್. ಮಲ್ಲಿಕಾರ್ಜುನ್ ಅವರ ಮನೆಗಳಲ್ಲಿ ವೀರಶೈವ ಲಿಂಗಾಯತ ಧರ್ಮದಂತೆ ಅಂತಿಮ ವಿಧಿಯ ಪೂಜೆ ನಡೆಸಲಾಯಿತು. ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಆವರಗೊಳ್ಳದ ಓಂಕಾರ ಶಿವಾಚಾರ್ಯ ಶ್ರೀಗಳು ಪೂಜಾ ವಿಧಿಗಳನ್ನು ನೆರವೇರಿಸಿದರು.