ದಾವಣಗೆರೆಯಲ್ಲಿ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಮಹಿಳೆಯರು ದೇವಿಗೆ ಆರತಿ ಬೆಳಗಿ ಪೂಜೆ ಸಲ್ಲಿಸಿದರು. 
ದಾವಣಗೆರೆ

ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ

ರಮೇಶ ಜಹಗೀರದಾರ್

ಪ್ರಮುಖ ಮುಖ್ಯಾಂಶಗಳು

  • ವಿಶೇಷ ಅಲಂಕಾರ, ದೇವಿಗೆ ಪೂಜೆ
  • ಮನೆ ಮನೆಯಲ್ಲೂ ಹಬ್ಬದ ಸಡಗರ

ದಾವಣಗೆರೆ : ಬೇಡಿದ ಭಕ್ತರಿಗೆ ಎಲ್ಲ ಬಗೆಯ ಸಂಪತ್ತು ನೀಡುವ ವರಮಹಾಲಕ್ಷ್ಮಿಯನ್ನು ಆರಾಧಿಸುವ ಹಬ್ಬವನ್ನು ಜಿಲ್ಲೆಯಲ್ಲಿ ಶುಕ್ರವಾರ ಶ್ರದ್ಧೆ, ಭಕ್ತಿ, ಸಂಭ್ರಮದಿಂದ ಆಚರಿಸಲಾಯಿತು.

ಈ ಹಬ್ಬವನ್ನು ಶ್ರಾವಣ ಮಾಸದ ಎರಡನೇ ಶುಕ್ರವಾರ ಆಚರಿಸುವ ಸಂಪ್ರದಾಯವಿದೆ. ಮನೆ ಮನೆಯಲ್ಲೂ ಹಬ್ಬದ ಸಡಗರ ತುಂಬಿತ್ತು. ರಂಗೋಲಿ, ತೋರಣ, ಬಾಳೆ ಕಂಬಗಳಿಂದ ಹಬ್ಬದ ಕಳೆ ಆವರಿಸಿತ್ತು.
ಪೂಜಾ ಸ್ಥಳದಲ್ಲಿ ಕಲಶ, ಅದಕ್ಕೆ ದೇವಿಯ ಮುಖವಿಟ್ಟು ಸೀರೆ, ಆಭರಣ, ಬಗೆ ಬಗೆಯ ಹೂವುಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ದೀಪಗಳು, ಧನ-ಧಾನ್ಯಗಳನ್ನು ದೇವಿಯ ಸನ್ನಿಧಾನದಲ್ಲಿ ಇಡಲಾಗಿತ್ತು. 5 ಬಗೆಯ ಹಣ್ಣು, ಪಾಯಸವನ್ನು ನೈವೇದ್ಯ ಮಾಡಲಾಯಿತು.
ಲಕ್ಷ್ಮಿದೇವಿಗೆ ಶೋಡಶೋಪಚಾರ ಪೂಜೆ ನೆರವೇರಿಸಲಾಯಿತು. ಮಂಗಳಾರತಿ ಮಾಡಿ, ಮಂತ್ರಾಕ್ಷತೆ ಹಾಕಿ ಪ್ರದಕ್ಷಿಣೆ ನಮಸ್ಕಾರ ಮಾಡಿ ಪ್ರಾರ್ಥನೆ ಸಲ್ಲಿಸಲಾಯಿತು.
ಸಂಜೆ ಮುತ್ತೈದೆಯರನ್ನು ಮನೆಗೆ ಕರೆದು ಅರಿಷಿಣ, ಕುಂಕುಮ ನೀಡಿ ಉಡಿ ತುಂಬಲಾಯಿತು. ಮಹಿಳೆಯರು ಹೊಸ ಬಟ್ಟೆ ತೊಟ್ಟು ಸಂಭ್ರಮದಿಂದ ಆಚರಣೆಯಲ್ಲಿ ಭಾಗಿಯಾದರು.
‘ವರಮಹಾಲಕ್ಷ್ಮಿ ದೇವಿಯು ಧನ-ಧಾನ್ಯ ಅಷ್ಟೇ ಅಲ್ಲದೇ ಸಂತಾನ, ಜ್ಞಾನ ಸೇರಿ ಎಲ್ಲ ಬಗೆಯ ಸಂಪತ್ತು ನೀಡುತ್ತಾಳೆ. ನಾವು ಭಕ್ತಿಯಿಂದ ಪ್ರಾರ್ಥಿಸಬೇಕು. ಕುಟುಂಬದ ಬಂಧು-ಬಾಂಧವರೆಲ್ಲ ಒಟ್ಟಾಗಿ ಹಬ್ಬ ಆಚರಿಸುವುದರಿಂದ ಬಾಂಧವ್ಯದ ಬೆಸುಗೆ ಗಟ್ಟಿಯಾಗುತ್ತದೆ ಎಂದು, ಪಿಜೆ ಬಡಾವಣೆ ರಾಯರ ಮಠದ ಪ್ರಧಾನ ಅರ್ಚಕ ಕೃಷ್ಣಾಚಾರ್ಯ ಮಣ್ಣೂರ್ ತಿಳಿಸಿದರು.