ದಾವಣಗೆರೆಯ ಸರ್ವಜ್ಞಾಚಾರ್ಯ ಸೇವಾ ಸಂಘದಲ್ಲಿ ಭಾನುವಾರ, ಶ್ರೀ ಮಾಧ್ವ ಯುವಕ ಸಂಘದ 45ನೇ ವಾರ್ಷಿಕೋತ್ಸವ ಅಂಗವಾಗಿ ‘ಶ್ರೀ ಶ್ರೀನಿವಾಸ ಕಲ್ಯಾಣ’ ವಿಷಯದ ಪ್ರವಚನದ ಮಂಗಳ ಮಹೋತ್ಸವ ನಡೆಯಿತು. ವೇದ ಪಂಡಿತ ಆಯನೂರು ಮಧುಸೂದನಾಚಾರ್ಯ, ಕಂಪ್ಲಿ ಗುರುರಾಜಾಚಾರ್ಯ, ಗೋಪಾಲಾಚಾರ್ ಮಣ್ಣೂರ್, ರಾಜಣ್ಣ ಇದ್ದರು.
- ಆಯನೂರು ಮಧುಸೂದನಾಚಾರ್ಯ ಹೇಳಿಕೆ
- ಶ್ರೀನಿವಾಸ ಕಲ್ಯಾಣ ಪ್ರವಚನ ಮಂಗಳ
- ಮಾಧ್ವ ಯುವಕ ಸಂಘದ ವಾರ್ಷಿಕೋತ್ಸವ
ದಾವಣಗೆರೆ : ಜೀವನದಲ್ಲಿ ಬಯಸಿದಂತೆ ಆಗದೇ ಇರಬಹುದು. ದೇವರು ಕೊಟ್ಟಿದ್ದರಲ್ಲಿ ಸಂತೃಪ್ತಿ ಹೊಂದಬೇಕು. ಸಿಕ್ಕಿದ್ದರಲ್ಲೇ ಒಳ್ಳೆಯದನ್ನು ಕಾಣಬೇಕು ಎಂದು ಉಡುಪಿಯ ವೇದ ಪಂಡಿತ ಆಯನೂರು ಮಧುಸೂದನಾಚಾರ್ಯ ಹೇಳಿದರು.
ನಗರದ ಸರ್ವಜ್ಞಾಚಾರ್ಯ ಸೇವಾ ಸಂಘದಲ್ಲಿ ಭಾನುವಾರ, ಶ್ರೀ ಮಾಧ್ವ ಯುವಕ ಸಂಘದ 45ನೇ ವಾರ್ಷಿಕೋತ್ಸವ ಅಂಗವಾಗಿ ‘ಶ್ರೀ ಶ್ರೀನಿವಾಸ ಕಲ್ಯಾಣ’ ವಿಷಯದ ಕುರಿತು ಪ್ರವಚನ ಮಂಗಳ ಮಹೋತ್ಸವದಲ್ಲಿ ಮಾತನಾಡಿದರು.
ಬದುಕಿನಲ್ಲಿ ಇಂಥದ್ದೇ ಬೇಕು ಎನ್ನುವುದಕ್ಕಿಂತ ಬಂದಿದ್ದನ್ನು ಸ್ವೀಕರಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಬಂದದ್ದೆಲ್ಲ ಬರಲಿ, ಭಗವಂತನ ದಯೆ ಒಂದಿರಲಿ ಎನ್ನುವ ಸಮರ್ಪಣಾ ಭಾವ ನಮ್ಮಲ್ಲಿ ಮೂಡಬೇಕು ಎಂದರು.
ಪರಮಾತ್ಮನ ಬಗ್ಗೆ ಜ್ಞಾನ ಸಂಪಾದಿಸಬೇಕು, ಸದಾ ಆತನ ಸ್ಮರಣೆ ಮಾಡಬೇಕು. ನಾವು ಮಾಡುವ ಸೇವೆಯಿಂದ ಭಗವಂತ ಒಲಿಯುತ್ತಾನೆ, ನಮ್ಮನ್ನು ರಕ್ಷಣೆ ಮಾಡುತ್ತಾನೆ. ಪ್ರತಿಯೊಂದು ಕೆಲಸ ಮಾಡುವಾಗಲೂ ದೇವರ ಧ್ಯಾನ ಮಾಡಬೇಕು. ಜೀವನದಲ್ಲಿ ಒಳ್ಳೆಯ ನಡೆ-ನುಡಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಶ್ರೀನಿವಾಸ ದೇವರ ಕಲ್ಯಾಣದ ವೈಭವವನ್ನು ಅವರು ವಿವರಿಸಿದರು. ವಿಶ್ವಕರ್ಮಾಚಾರ್ಯರು ನಿರ್ಮಿಸಿದ ಮದುವೆ ಮಂಟಪ ವಿಸ್ತಾರವಾಗಿತ್ತು. ಅದಕ್ಕೆ ಸಾವಿರ ಕಂಬಗಳಿದ್ದವು. ಆ ಕಂಬಗಳಲ್ಲಿದ್ದ ಮಣಿಗಳು ಪ್ರಕಾಶವನ್ನು ಬೀರುತ್ತಿದ್ದವು. ವಶಿಷ್ಠ, ವಿಶ್ವಾಮಿತ್ರರು ಆ ಮದುವೆಗೆ ಪುರೋಹಿತರಾಗಿದ್ದರು ಎಂದು ತಿಳಿಸಿದರು.
‘ಶ್ರೀನಿವಾಸ ಕಲ್ಯಾಣ’ದ ಕಥೆಯನ್ನು ಕೇಳಿದರೆ ಬ್ರಹ್ಮೋತ್ಸವದಲ್ಲಿ ಪಾಲ್ಗೊಂಡ ಪುಣ್ಯ ಬರುತ್ತದೆ. ಇಂಥ ಜ್ಞಾನ ಕಾರ್ಯವನ್ನು ಮಾಧ್ವ ಯುವಕ ಸಂಘ ಮತ್ತು ಸರ್ವಜ್ಞಾಚಾರ್ಯ ಸೇವಾ ಸಂಘದವರು ಆಯೋಜಿಸಿರುವುದು ಸ್ತುತ್ಯರ್ಹ ಎಂದು ಹೇಳಿದರು.
ಮಾಧ್ವ ಯುವಕ ಸಂಘದ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳ ಸಾಧಕರಾದ ಡಾ. ಮಾಧವ ಹೊನ್ನತ್ತಿ, ಡಾ. ವೆಂಕಟರಮಣ ಕಟ್ಟಿ (ನೇತ್ರ ತಜ್ಞರು), ಜಯತೀರ್ಥಾಚಾರ್ ವಡೇರ್, ಸುಬ್ಬಣ್ಣಾಚಾರ್ ವಡೇರ್ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ವೆಂಕಟರಮಣ ಕಟ್ಟಿ, ಆರ್ಥಿಕ ಪರಿಸ್ಥಿತಿಯ ಕಾರಣಕ್ಕೆ ಬಹಳಷ್ಟು ರೋಗಿಗಳು ಚಿಕಿತ್ಸೆ ಪಡೆಯಲು ವಿಳಂಬ ಮಾಡುತ್ತಾರೆ. ಅಂಥವರ ಅನುಕೂಲಕ್ಕಾಗಿ ದೃಷ್ಟಿ ಕೇಂದ್ರಗಳನ್ನು ತೆರೆದು ಕಡಿಮೆ ಶುಲ್ಕದಲ್ಲಿ ಚಿಕಿತ್ಸೆ ನೀಡುತ್ತಿದ್ದೇವೆ. ಗ್ರಾಮೀಣ ಪ್ರದೇಶಗಳಿಗೆ ತೆರಳಿ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಹಿರಿಯರಾದ ಸರಯೂ ಮುತಾಲಿಕ್ ಮಾತನಾಡಿ, ಪಾಲಕರು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು, ಅವರಲ್ಲಿ ಉತ್ತಮ ಸಂಸ್ಕೃತಿಯನ್ನು ಬೆಳೆಸಬೇಕು ಎಂದು ಹೇಳಿದರು.
ಗೋಪಾಲಾಚಾರ್ ಮಣ್ಣೂರ್, ಕೃಷ್ಣಾಚಾರ್ ಮಣ್ಣೂರ್, ಕಡೂರು ಪ್ರಾಣೇಶಾಚಾರ್ಯ, ವೆಂಕಟೇಶ ನವರತ್ನ, ರಾಜಣ್ಣ, ಸಂಪನ್ನ ಮುತಾಲಿಕ್, ಡಾ. ಶಶಿಕಾಂತ್, ಸತ್ಯನಾರಾಯಣ ರಾವ್, ನಾಗಭೂಷಣ ರಾವ್, ಗೋಪಾಲದಾಸ್, ಬಾಲಕೃಷ್ಣ ವೈದ್ಯ ಭಾಗವಹಿಸಿದ್ದರು.
ಕಂಪ್ಲಿ ಗುರುರಾಜಾಚಾರ್ಯ ಸ್ವಾಗತಿಸಿದರು. ಪ್ರಕಾಶ್ ಪಾಟೀಲ್ ಸಂಘದ ವರದಿ ವಾಚಿಸಿದರು. ಡಾ.ಸಿ.ಕೆ. ಆನಂದ ತೀರ್ಥಾಚಾರ್ ಕಾರ್ಯಕ್ರಮ ನಿರೂಪಿಸಿದರು. ವೇದಾ ವಾಚಸ್ಪತಿ ಪ್ರಾರ್ಥಿಸಿದರು.
ಬೆಳಗ್ಗೆ ಶ್ರೀ ಪವಮಾನ ಹೋಮ, ಧನ್ವಂತರಿ ಹೋಮ ನಡೆದವು. ಪೂರ್ಣಾಹುತಿಯ ನಂತರ ಶ್ರೀನಿವಾಸ ಕಲ್ಯಾಣ ಪ್ರವಚನ ಮಂಗಳ ಮಹೋತ್ಸವ ನಡೆಯಿತು. ತೀರ್ಥ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಭಕ್ತರು ಪಾಲ್ಗೊಂಡಿದ್ದರು.