ಚನ್ನಗಿರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಶಾಸಕ ಬಸವರಾಜ್ ಶಿವಗಂಗಾ ಉದ್ಘಾಟಿಸಿದರು. ಕೋಗುಂಡಿ ಬಕ್ಕೇಶಪ್ಪ, ಜಿ.ಎನ್.ಸ್ವಾಮಿ, ಸಂತೋಷ್, ಎಚ್.ಕೆ. ಬಸಪ್ಪ, ತೇಜಸ್ವಿ ಪಟೇಲ್ ಇತರರು ಇದ್ದರು.
- ಶಾಸಕ ಬಸವರಾಜ್ ಶಿವಗಂಗಾ ಅಭಿಪ್ರಾಯ
- 72ನೇ ಅಖಿಲ ಭಾರತ ಸಹಕಾರ ಸಪ್ತಾಹ
- ಚನ್ನಗಿರಿ ತಾಲೂಕಿನಲ್ಲಿ 251 ಸಹಕಾರ ಸಂಘಗಳ ನೋಂದಣಿ
ಚನ್ನಗಿರಿ: ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಮಾಡುವ ಕೆಲಸ ಯಾರಿಂದಲೂ ಆಗಬಾರದು, ರಾಜಕೀಯ ನಡೆದರೆ ಸಹಕಾರ ಕ್ಷೇತ್ರದ ಉಳಿವು ಸಾಧ್ಯವಿಲ್ಲ ಎಂದು ಶಾಸಕ ಬಸವರಾಜ್ ಶಿವಗಂಗಾ ತಿಳಿಸಿದರು.
ಪಟ್ಟಣದ ಶ್ರೀ ಮೌದ್ಗಲ್ ಆಂಜನೇಯ ಸ್ವಾಮಿ ಸಮುದಾಯ ಭವನದಲ್ಲಿ ಸೋಮವಾರ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಸಹಕಾರ ಇಲಾಖೆ ದಾವಣಗೆರೆ, ಜಿಲ್ಲಾ ಸಹಕಾರ ಒಕ್ಕೂಟ, ಜಿಲ್ಲಾ ಕೇಂದ್ರ ಸಹಕಾರ ಇಲಾಖೆ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಸಹಕಾರ ಹಾಲು ಒಕ್ಕೂಟ, ತುಮ್ ಕೋಸ್, ಟಿಎಪಿಸಿಎಂಎಸ್, ಪಿಕಾರ್ಡ ಬ್ಯಾಂಕ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರೈತರ ಹಾಗೂ ದೇಶದ ಅಭಿವೃದ್ಧಿಗೆ ಸಹಕಾರ ಕ್ಷೇತ್ರ ಸಹಕಾರಿಯಾಗಿದೆ. ಸಹಕಾರ ರಂಗಕ್ಕೆ ಆಧುನಿಕತೆ ಸ್ಪರ್ಶವಾಗಬೇಕಿದೆ. ರಾಜಕೀಯ ಬೆರೆತಾಗ ಕ್ಷೇತ್ರ ಕಲುಷಿತವಾಗುತ್ತದೆ. ಚನ್ನಗಿರಿ ತಾಲೂಕಿನಲ್ಲಿ 251 ಸಹಕಾರ ಸಂಘಗಳು ನೋಂದಣಿಯಾಗಿವೆ. ಅದರಲ್ಲಿ 206 ಸಂಘಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ತುಮ್‌ಕೋಸ್ ಸಂಸ್ಥೆ ರೈತರಿಗೆ ನೀಡುವ ಸೇವೆಯಲ್ಲಿ ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪಡೆದಿದೆ ಎಂದರು.
ಈ ಕ್ಷೇತ್ರದಲ್ಲಿ ಅಕ್ರಮ, ಅನ್ಯಾಯ ನಡೆಯುತ್ತಿದೆ ಎಂದು ಸಾರ್ವಜನಿಕರಿಂದ ದೂರುಗಳು ಬಂದಿವೆ. ಇದನ್ನು ಪರಿಶೀಲನೆ ಮಾಡಿದರೆ ಸಾಕಷ್ಟು ಸಂಘಗಳು ಸೂಪರ್‌ಸೀಡ್ ಆಗುವುದರಲ್ಲಿ ಅನುಮಾನವಿಲ್ಲ. ತಾಲೂಕಿನ ನಲ್ಲೂರು ಸಹಕಾರ ಸಂಘದ ಚುನಾವಣೆಯಲ್ಲಿ ಅಕ್ರಮ ನಡೆದಿದ್ದು, ಅಲ್ಲಿನ ಕಾರ್ಯದರ್ಶಿಯನ್ನು ಅಮಾನತು ಮಾಡಲಾಗಿದೆ. ಆದರೂ ಈವರೆಗೆ ಇದರ ಬಗ್ಗೆ ತನಿಖೆ ನಡೆದಿಲ್ಲ ಮತ್ತು ಕ್ರಮ ಜರುಗಿಸಿಲ್ಲ ಎಂದರು.
ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ನಿರ್ದೇಶಕ ಜೆ.ಆರ್. ಷಣ್ಮುಖಪ್ಪ ಮಾತನಾಡಿ, ಡಿಸಿಸಿ ಬ್ಯಾಂಕ್ ಸ್ವಂತ ಕಟ್ಟಡ ಇರದೆ ಇರುವ ಕಾರಣ ರೈತರಿಂದ ಕಟ್ಟಡದ ದೇಣಿಗೆಯನ್ನು ಶೇ.2 ರಷ್ಟು ವಸೂಲಿ ಮಾಡಲಾಗಿದೆ. 5 ಕೋಟಿ ರೂ.ಗಳನ್ನು ಅಪೆಕ್ಸ್ ಬ್ಯಾಂಕ್‌ನಲ್ಲಿ ಡಿಪಾಸಿಟ್ ಮಾಡಲಾಗಿದೆ. ಸದ್ಯದಲ್ಲಿಯೇ ಕಟ್ಟಡ ನಿರ್ಮಾಣ ಮಾಡಲಾಗುತ್ತದೆ ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೋಗುಂಡಿ ಬಕ್ಕೇಶಪ್ಪ, ನಿರ್ದೇಶಕರಾದ ಜಿ.ಎನ್. ಸ್ವಾಮಿ, ಸಂತೋಷ್, ಜಿಲ್ಲಾ ಸಹಕಾರ ಹಾಲು ಒಕ್ಕೂಟದ ನಿರ್ದೇಶಕ ಎಚ್.ಕೆ. ಬಸಪ್ಪ, ನೀರು ಬಳಕೆದಾರರ ಸಂಘದ ಅಧ್ಯಕ್ಷ ತೇಜಸ್ವಿ ಪಟೇಲ್, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಸಿರಿಗೆರೆ ರಾಜಣ್ಣ, ಜಗದೀಶಪ್ಪ ಬಣಕಾರ್, ಬಿ.ಜಿ. ಬಸವರಾಜಪ್ಪ, ಎಚ್.ಜಿ. ಮಂಜುಳಾ, ಎಸ್.ಜಿ. ಸತೀಶ್ ಇದ್ದರು.