ಹೊನ್ನಾಳಿಯ ಹಿರೇಕಲ್ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಸದ್ಗುರು ಶಿವಯೋಗಿ ಹಾಲಸ್ವಾಮೀಜಿ, ಎಂ.ಪಿ. ರೇಣುಕಾಚಾರ್ಯ ಇದ್ದರು. Panchacharya
- ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅಭಿಮತ
- ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಹೊನ್ನಾಳಿ: ಪಂಚಾಚಾರ್ಯರು ಮನುಕುಲದ ಏಳಿಗೆಗಾಗಿ ಹಾಗೂ ಧರ್ಮ, ಆಚಾರ, ವಿಚಾರ ಮತ್ತು ಮಾನವನ ಬದುಕಿನ ನಿಯಮಗಳ ಅನುಷ್ಠಾನಕ್ಕಾಗಿ ಉದ್ಭವಿಸಿದರು ಎಂದು ತಪೋಕ್ಷೇತ್ರ ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಹಿರೇಕಲ್ಮಠದಲ್ಲಿ ಭಾನುವಾರ ತಾಲೂಕು ಬೇಡ ಜಂಗಮ ಸಮಾಜ ಸೇವಾ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸಂಘದ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಂಭಾಪುರಿ, ಕಾಶಿ, ಉಜ್ಜಯಿನಿ, ಶ್ರೀಶೈಲ ಹಾಗೂ ಕೇದಾರದ ಪಂಚಪೀಠಾಧೀಶ್ವರರು ಲೋಕ ಕಲ್ಯಾಣಕ್ಕಾಗಿ ಧರ್ಮೋಪದೇಶ ಮಾಡಿದರೆ, ವೀರಮಹೇಶ್ವರರು ಪೂಜಾ ಕೈಂಕರ್ಯಗಳನ್ನು ನಡೆಸಿಕೊಂಡು ಭಕ್ತರ ಉದ್ಧಾರಕ್ಕಾಗಿ ಧಾರ್ಮಿಕ ಪುಣ್ಯದ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದರು.
ಬೇಡ ಜಂಗಮ ಸಮಾಜದಿಂದ ನೀಡಲಾಗುತ್ತಿರುವ ಪ್ರತಿಭಾ ಪುರಸ್ಕಾರಗಳು ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ದಾರಿ ಮಾಡಿಕೊಡುವುದಲ್ಲದೇ, ಹೆಚ್ಚಿನ ಜ್ಞಾನಾರ್ಜನೆಗೆ ಸಹಾಯಕವಾಗುತ್ತವೆ. ಇಂತಹ ಉತ್ತಮ ಕೆಲಸಗಳು ನಿರಂತರವಾಗಿ ನಡೆಯಬೇಕು ಎಂದು ಹೇಳಿದರು.
ಮಾನವನ ಜೀವಿತಾವಧಿಯಲ್ಲಿ ಜನನ, ಮರಣ ಮತ್ತು ಬದುಕು ಎಂಬ ಮೂರು ವಿಶಿಷ್ಟ ಅಂಶಗಳಿವೆ. ಜನನ ಆಕಸ್ಮಿಕವಾದರೆ, ಮರಣ ಅನಿವಾರ್ಯವಾಗಿದೆ. ಇವುಗಳ ಮಧ್ಯೆ ಬದುಕು ಕಟ್ಟಿಕೊಳ್ಳುವುದು ಮತ್ತು ಹೇಗೆ ಬಾಳಿದೆ ಎನ್ನುವುದು ಪ್ರಮುಖ ಘಟ್ಟವಾಗಿದೆ. ಇಂದಿನ ದಿನಗಳಲ್ಲಿ ತಾಯಂದಿರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಸಂಸ್ಕಾರದಿಂದಲೇ ವ್ಯಕ್ತಿ ಉತ್ತಮ ಜೀವನ ಸಾಗಿಸಲು ಸಾಧ್ಯ. ಲಭ್ಯವಿರುವ ದಿನದ 24 ಗಂಟೆಗಳನ್ನು ಸದ್ವಿನಿಯೋಗ ಮಾಡಿಕೊಳ್ಳುವುದು ಮುಖ್ಯ ಎಂದರು.
ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹಾಗೂ ಗೋವಿನಕೋವಿ ಬೃಹನ್ಮಠದ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಬೇಡ ಜಂಗಮ ಸಮಾಜ ಸೇವಾ ಸಂಘದ ತಾಲೂಕಾಧ್ಯಕ್ಷ ಎಂ. ಪಂಚಾಕ್ಷರಯ್ಯ ಇದ್ದರು.
ಪ್ರೀತಿ ಭರತ್ ಹಿರೇಮಠ ಸ್ವಾಗತಿಸಿದರು. ನಿವೃತ್ತ ಮುಖ್ಯಶಿಕ್ಷಕ ಎಂ. ರುದ್ರಯ್ಯ ಪ್ರಾಸ್ತಾವಿಕ ನುಡಿದರು. ವರ್ತಕ ಎಚ್.ಎಂ. ರುದ್ರೇಶ್ ವಂದಿಸಿದರು. ಶಿಕ್ಷಕ ಜಿ. ಕೊಟ್ರೇಶ್ ನಿರೂಪಿಸಿದರು.