ಹೊನ್ನಾಳಿಯಲ್ಲಿ ಸೋಮವಾರ ಬಿಜೆಪಿಯ ವಿವಿಧ ಮೋರ್ಚಾಗಳ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಹೆಸರನ್ನು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹಾಗೂ ತಾಲೂಕು ಬಿಜೆಪಿ ಅಧ್ಯಕ್ಷ ಅರಕೆರೆ ನಾಗರಾಜ್ ಘೋಷಿಸಿದರು. ಮಾರುತಿನಾಯ್ಕ, ರಮೇಶ್‌ನಾಯ್ಕ, ರಂಗನಾಥ್ ಇತರರಿದ್ದರು. congress government
- ಮಾಜಿ ಸಚಿವ ರೇಣುಕಾಚಾರ್ಯ ಆಕ್ರೋಶ
- ವಿವಿಧ ಮೋರ್ಚಾಗಳ ಅಧ್ಯಕ್ಷರ ಹೆಸರು ಘೋಷಣೆ
ಹೊನ್ನಾಳಿ: ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದ್ದು, ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಆದರೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಇನ್ನೂ ಟೇಕಾಫ್ ಆಗಿಲ್ಲ. ಹೀಗಾದರೆ ರೈತರು ತಮ್ಮ ಸಮಸ್ಯೆಯನ್ನು ಯಾರ ಬಳಿ ಹೇಳಿಕೊಳ್ಳಬೇಕು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಸೋಮವಾರ ಪಕ್ಷದ ವಿವಿಧ ಮೋರ್ಚಾಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಹೆಸರು ಘೋಷಿಸಿ ಮಾತನಾಡಿದರು.
ಇಡೀ ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ಬೆಳೆಗಳು ಸರ್ವನಾಶವಾಗಿವೆ. ಆದರೂ ಸರ್ಕಾರದ ಯಾವೊಬ್ಬ ಸಚಿವರೂ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿಲ್ಲ, ರೈತರಿಗೆ ಆತ್ಮವಿಶ್ವಾಸ ತುಂಬುವ ಕೆಲಸವನ್ನೂ ಮಾಡಿಲ್ಲ. ಇಂತಹ ದುಸ್ಥಿತಿಯಲ್ಲಿ ರೈತರು ಏನು ಮಾಡಬೇಕು ಎಂದು ಪ್ರಶ್ನಿಸಿದರು.
ರೈತರ ಸಾಲ ಮನ್ನಾ ಮಾಡಿ: ಭೀಕರ ಬರಗಾಲದ ಹಿನ್ನೆಲೆಯಲ್ಲಿ ರೈತರು ಸಾಲ ಮಾಡಿ ಮಾಡಿದ ಬಿತ್ತನೆ ಸಂಪೂರ್ಣ ಹಾಳಾಗಿದೆ. ಬ್ಯಾಂಕ್ ಸಾಲದ ಬಡ್ಡಿ ಬೆಳೆಯುತ್ತಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಪರಿಸ್ಥಿತಿ ಸುಧಾರಿಸಲು ಸರ್ಕಾರ ತಕ್ಷಣವೇ ರೈತರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಎಲ್ಲ ಪಕ್ಷಗಳಿಗಿಂತ ಬಿಜೆಪಿಯಲ್ಲೇ ಅತಿ ಹೆಚ್ಚು ಯುವಕರಿದ್ದಾರೆ. ಎಲ್ಲ ಮೋರ್ಚಾಗಳಲ್ಲೂ ಯುವಕರಿಗೆ ಆದ್ಯತೆ ನೀಡಲಾಗಿದೆ. ನೂತನ ಪದಾಧಿಕಾರಿಗಳು ಪಕ್ಷ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಶೀಘ್ರದಲ್ಲೇ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಬರಲಿದ್ದು, ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಬೇಕು ಎಂದರು.
ವಿವಿಧ ಮೋರ್ಚಾಗಳ ನೂತನ ಅಧ್ಯಕ್ಷರು
ಒಬಿಸಿ ಮೋರ್ಚಾ ತಾಲೂಕಾಧ್ಯಕ್ಷ ರಘು, ಯುವಮೋರ್ಚಾ ಅಧ್ಯಕ್ಷ ಪುನಿತ್ ಬಣ್ಣಜ್ಜಿ, ಎಸ್ಸಿ ಮೋರ್ಚಾ ಅಧ್ಯಕ್ಷ ಹನುಮಂತಪ್ಪ ತ್ಯಾಗದಕಟ್ಟೆ, ರೈತ ಮೋರ್ಚಾ ಅಧ್ಯಕ್ಷ ರಮೇಶ್‌ಗೌಡ ತರಗನಹಳ್ಳಿ, ಮಹಿಳಾ ಮೋರ್ಚಾ ಅಧ್ಯಕ್ಷೆ ತಾರಮ್ಮ ಸುರಹೊನ್ನೆ, ಎಸ್ಟಿ ಮೋರ್ಚಾ ಅಧ್ಯಕ್ಷ ರುದ್ರೇಶ್ ಹಾಗೂ ಪದಾಧಿಕಾರಿಗಳನ್ನು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹಾಗೂ ತಾಲೂಕು ಬಿಜೆಪಿ ಅಧ್ಯಕ್ಷ ಅರಕೆರೆ ನಾಗರಾಜ್ ಘೋಷಿಸಿದರು.
ಬಿಜೆಪಿ ಮುಖಂಡರಾದ ಮಾರುತಿನಾಯ್ಕ, ರಮೇಶ್‌ನಾಯ್ಕ, ರಂಗನಾಥ್ ಇತರರಿದ್ದರು.