ಚುನಾವಣಾ ಪ್ರಚಾರ ಸಭೆಯನ್ನು ಶಾಸಕ ಬಿ. ದೇವೇಂದ್ರಪ್ಪ ಉದ್ಘಾಟಿಸಿದರು. ಶಶಿ ಹುಲಿಕುಂಟೆ ಮಠ್, ಅಸಗೋಡು ಜಯಸಿಂಹ, ಇಬ್ರಾಹಿಂ ಖಲೀಲುಲ್ಲ, ಕೆ.ಪಿ ಪಾಲಯ್ಯ, ಕೀರ್ತಿಕುಮಾರ್ ಇತರರಿದ್ದರು. Meeting
ದಾವಣಗೆರೆ

ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಂಡಿತ

ಚುನಾವಣಾ ಪ್ರಚಾರ ಸಭೆಯಲ್ಲಿ ಶಾಸಕ ಬಿ. ದೇವೇಂದ್ರಪ್ಪ ಹೇಳಿಕೆ

ಜಗಳೂರು: ಈ ಬಾರಿ ನಮ್ಮ ಅಭ್ಯರ್ಥಿ ಗೆಲ್ಲುವುದು ಸತ್ಯ. ಜನರ ಆಶೀರ್ವಾದ ಇರುವವರೆಗೂ ಯಾರಿಗೂ ಜಗ್ಗುವುದಿಲ್ಲ ಎಂದು ಶಾಸಕ ಬಿ. ದೇವೇಂದ್ರಪ್ಪ ಹೇಳಿದರು.

ಪಟ್ಟಣದ ವೀರಶೈವ ಕಲ್ಯಾಣ ಮಂಟಪ್ಪದಲ್ಲಿ ಶನಿವಾರ ಆಗ್ನೇಯ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆ ಮಠ್ ಅವರ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಸ್ವಾತಂತ್ರ್ಯ ನಂತರ ಈವರೆಗೂ ನಡೆದ 16 ವಿಧಾನಸಭಾ ಕ್ಷೇತ್ರ, ಲೋಕಸಭಾ ಚುನಾವಣೆ, ಮೇಲ್ಮನೆ, ಸ್ಥಳೀಯ ಚುನಾವಣೆಗಳಲ್ಲಿ ಈ ಕ್ಷೇತ್ರದಲ್ಲಿ ಸಿಂಹಪಾಲು ಕಾಂಗ್ರೆಸ್ ಪಕ್ಷದ್ದು. ಅಶ್ವತ್‌ರೆಡ್ಡಿ ಅವರನ್ನು ಸೋಲಿಲ್ಲದ ಸರದಾರರನ್ನಾಗಿ ಮಾಡಿದೆ. ಒಂದು ಬಾರಿ ಸಚಿವ ಸ್ಥಾನಕೊಟ್ಟ ಕೀರ್ತಿ ಜಗಳೂರಿಗೆ ಇದೆ. ಎಂ. ಬಸಪ್ಪನವರು ಸೋತು ಸಣ್ಣಾಗಿದ್ದಾಗ ಕೆಸಿಪಿಯಿಂದ ಗೆದ್ದು ಒಮ್ಮೆ ಶಾಸಕರಾಗಿದ್ದರು. ಎಸ್ಸಿಗೆ ಮೀಸಲು ಕ್ಷೇತ್ರವಾದ ನಂತರ ಇಬ್ಬರು ಮಾಜಿ ಶಾಸಕರು ಕಾಂಗ್ರೆಸ್ ಪಕ್ಷದಿಂದ ಗೆಲುವು ಪಡೆದಿದ್ದಾರೆ. ಅದನ್ನು ಅವರು ಮರೆಯಬಾರದು ಎಂದರು.

ಬ್ರಾಹ್ಮಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ ಮಾತನಾಡಿ, ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಭದ್ರವಾಗಿದೆ. ಪದವೀಧರರ ಕ್ಷೇತ್ರದ ಅಭ್ಯರ್ಥಿ ಪಕ್ಷಕ್ಕಾಗಿ ದುಡಿದಿದ್ದಾರೆ. ಹಾಗಾಗಿ ಸಾಮಾಜಿಕ ನ್ಯಾಯದಡಿ ಟಿಕೆಟ್ ನೀಡಲಾಗಿದೆ ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಇಬ್ರಾಹೀಂ ಖಲಿಲುಲ್ಲ, ಕೆಪಿಸಿಸಿ ಎಸ್ಟಿ ಘಟಕದ ಮಾಜಿ ಅಧ್ಯಕ್ಷ ಕೆ.ಪಿ. ಪಾಲಯ್ಯ, ಕೆಪಿಸಿಸಿ ಎಸ್ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ ಕೀರ್ತಿಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮದ್, ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್‌ಪಟೇಲ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿಗೌಡ ಇತರರಿದ್ದರು.