ಜಗಳೂರಿನಲ್ಲಿ ಬುಧವಾರ ಮಾದಿಗ ಮಹಾಸಭಾ ಪದಾಧಿಕಾರಿಗಳ ಆಯ್ಕೆ ಹಾಗೂ ಒಳಮೀಸಲಾತಿ ವಿಜಯೋತ್ಸವ ಸನ್ಮಾನ ಕಾರ್ಯಕ್ರಮದಲ್ಲಿ ಹೋರಾಟಗಾರರನ್ನು ಸನ್ಮಾನಿಸಲಾಯಿತು. ಬಿ.ಎಚ್ ವೀರಭದ್ರಪ್ಪ, ಪ್ರೊ.ಎಚ್. ವಿಶ್ವನಾಥ್, ಜಿ.ಎಚ್. ಶಂಭುಲಿಂಗಪ್ಪ, ಹೆಗ್ಗೆರೆ ರಂಗಪ್ಪ ಇತರರಿದ್ದರು.
- ಜಿಲ್ಲಾಧ್ಯಕ್ಷ ಬಿ.ಎಚ್. ವೀರಭದ್ರಪ್ಪ ಘೋಷಣೆ
- ಒಳ ಮೀಸಲಾತಿ ವಿಜಯೋತ್ಸವ ಸನ್ಮಾನ ಕಾರ್ಯಕ್ರಮ
- ಮಾದಿಗ ಮಹಾಸಭಾ ಪದಾಧಿಕಾರಿಗಳ ಆಯ್ಕೆ
ಜಗಳೂರು: ಮಾದಿಗ ಸಮುದಾಯವನ್ನು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕವಾಗಿ ಸಬಲೀಕರಣ ಮಾಡುವುದು ಸಂಘದ ಉದ್ದೇಶವಾಗಿದೆ ಎಂದು ಮಾದಿಗ ಮಹಾಸಭಾ ಜಿಲ್ಲಾಧ್ಯಕ್ಷ ಬಿ.ಎಚ್. ವೀರಭದ್ರಪ್ಪ ಹೇಳಿದರು.
ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಬುಧವಾರ ಮಾದಿಗ ಮಹಾಸಭಾ ಪದಾಧಿಕಾರಿಗಳ ಆಯ್ಕೆ ಹಾಗೂ ಒಳ ಮೀಸಲಾತಿ ವಿಜಯೋತ್ಸವ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪರಿಶಿಷ್ಟ ಜಾತಿಯೊಳಗೆ ಒಳ ಮೀಸಲಾತಿ ಕಲ್ಪಿಸಬೇಕು ಎನ್ನುವ 35 ವರ್ಷಗಳ ಹೋರಾಟಕ್ಕೆ ಈಗ ಮನ್ನಣೆ ಸಿಕ್ಕಿದ್ದು, ಬಹುದಿನಗಳ ಬೇಡಿಕೆ ಈಡೇರಿದೆ. ಮಾಜಿ ಸಚಿವ ಎಚ್.ಆಂಜನೇಯ ಅಧಿಕಾರವಿಲ್ಲದಿದರೂ ಮಾದಿಗ ಸಮುದಾಯಕ್ಕೆ ಅನ್ಯಾಯವಾಗಬಾರದೆಂಬ ಉದ್ದೇಶದಿಂದ ನಿರಂತರ ಹೋರಾಟ ಮಾಡಿದರು. ಸರ್ಕಾರದ ಮಟ್ಟದಲ್ಲಿ ಮುನಿಯಪ್ಪ ಕೆಲಸ ಮಾಡಿದರು. ಇದರ ಬೆನ್ನಲ್ಲೇ ಸಿ.ಎಂ. ಸಿದ್ದರಾಮಯ್ಯ ಒಳ ಮೀಸಲಾತಿ ಜಾರಿಗೊಳಿಸಿದರು. ಆದ್ದರಿಂದ ಇಂತಹ ನಾಯಕರನ್ನು ಎಂದಿಗೂ ಮರೆಯಬಾರದು ಎಂದು ಹೇಳಿದರು.
ದಾವಣಗೆರೆ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಎಚ್. ವಿಶ್ವನಾಥ್ ಮಾತನಾಡಿ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಶಕ್ತಿ ತುಂಬಿದಾಗ ಮಾತ್ರ ಮಾದಿಗ ಸಮುದಾಯ ಅಭಿವೃದ್ಧಿ ಹೊಂದಲು ಸಾಧ್ಯ. ಅಲ್ಲಿಯತನಕ ಸಾಮಾಜಿಕ ನ್ಯಾಯ ಕೊಡಲು ಸಾಧ್ಯವಾಗುವುದಿಲ್ಲ ಎಂದರು.
ಮಾದಿಗ ಮಹಾಸಭಾ ತಾಲೂಕಾಧ್ಯಕ್ಷ ಜಿ.ಎಚ್. ಶಂಭುಲಿಂಗಪ್ಪ ಮಾತನಾಡಿ, ಮಾದಿಗ ಸಮುದಾಯದಲ್ಲಿ ಅಸಹಿಷ್ಣುತೆ ಇರುವವರೆಗೂ ಸಮುದಾಯ ಪ್ರಗತಿ ಅಸಾಧ್ಯ. ಎಲ್ಲ ಪಕ್ಷ ಭೇದ ಮರೆತು ಎಲ್ಲರೂ ಒಂದಾಗಿ ಹೋರಾಡಿದಾಗ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯ ಎಂದರು.
ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಗೌರಿಪುರ ಕುಬೇರಪ್ಪ ಮಾತನಾಡಿ, ಒಳ ಮೀಸಲಾತಿಗೆ ಪಕ್ಷ ಮರೆತು ಹೋರಾಟ ಮಾಡಿದ ಹಿರಿಯರನ್ನು ಸ್ಮರಿಸಬೇಕು. ಮಾಜಿ ಸಚಿವ ಎಚ್. ಆಂಜನೇಯ, ಮಾಜಿ ಕೇಂದ್ರ ಸಚಿವ ನಾರಾಯಣಸ್ವಾಮಿ ಮಾದಿಗ ಸಮುದಾಯದ ಶಕ್ತಿಗಳಾಗಿದ್ದಾರೆ. ಮಂದಕೃಷ್ಣ ಮಾದಿಗ, ಶಂಕರಪ್ಪ ಇನ್ನೂ ಸಾಕಷ್ಟು ಜನರು ಸಮುದಾಯದ ನ್ಯಾಯಕ್ಕಾಗಿ ಹೋರಾಡಿದ್ದಾರೆ ಎಂದರು.
ಮಾದಿಗ ಮಹಾಸಭಾ ಪ್ರಧಾನ ಕಾರ್ಯದರ್ಶಿ ಹೆಗ್ಗೆರೆ ರಂಗಪ್ಪ, ತಾಲೂಕು ಗೌರವಾಧ್ಯಕ್ಷ ತಿಪ್ಪೇಸ್ವಾಮಿ, ಉಪಾಧ್ಯಕ್ಷ ಹಟ್ಟಿ ತಿಪ್ಪೇಸ್ವಾಮಿ, ಕಾರ್ಯಾಧ್ಯಕ್ಷ ಮಂಜುನಾಥ್, ಸಿ. ಬಸವರಾಜ್, ಹನುಮಂತಪ್ಪ, ಆದಿ ಜಾಂಬವ ಹರಿಜನ ವಿದ್ಯಾರ್ಥಿ ನಿಲಯದ ಅಧ್ಯಕ್ಷ ಎಚ್. ಹನುಮಂತಪ್ಪ, ಪಪಂ ಸದಸ್ಯ ದೇವರಾಜ್, ದಸಂಸ ಸಂಚಾಲಕರಾದ ಸತೀಶ್ ಮಾಚಿಕೆರೆ, ಕುಬೇಂದ್ರಪ್ಪ ಮತ್ತಿತರರಿದ್ದರು.