Yogaಹೊನ್ನಾಳಿಯ ಬಿವಿಎಸ್ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ವೈದ್ಯ ಡಾ. ರಾಜಕುಮಾರ್ ಉದ್ಘಾಟಿಸಿದರು. 
ದಾವಣಗೆರೆ

ಪ್ರತಿ ಮನೆಗೂ ಯೋಗ ತಲುಪಿಸುವ ಉದ್ದೇಶ Yoga

ಪ್ರಮುಖ ಮುಖ್ಯಾಂಶಗಳು

  • ತಾಲೂಕು ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಪ್ರಕಾಶ್ ಹೆಬ್ಬಾರ್ ಹೇಳಿಕೆ
  • ಶಿವಮೊಗ್ಗದ ಸುಬ್ಬಯ್ಯ ಆಸ್ಪತ್ರೆಯ 45 ನುರಿತ ವೈದ್ಯರ ತಂಡದಿಂದ ಆರೋಗ್ಯ ತಪಾಸಣೆ
  • ಆರ್ಥಿಕವಾಗಿ ಹಿಂದುಳಿದ ಬಡ ಜನರಿಗೆ ಸಂಜೀವಿನಿಯಾದ ಉಚಿತ ವೈದ್ಯಕೀಯ ಶಿಬಿರ
ಹೊನ್ನಾಳಿ: ದೈಹಿಕ ಹಾಗೂ ಮಾನಸಿಕ ಆರೋಗ್ಯಕೆ ಯೋಗ ಪ್ರಮುಖ ಸಾಧನ ಎಂದು ತಾಲೂಕು ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಪ್ರಕಾಶ್ ಹೆಬ್ಬಾರ್ ಹೇಳಿದ್ದಾರೆ.Yoga
ಪಟ್ಟಣದ ಬಿವಿಎಸ್ (ಭಾರತೀಯ ವಿದ್ಯಾಸಂಸ್ಥೆ) ಆವರಣದಲ್ಲಿ ಮಂಗಳವಾರ 'ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ'ದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿ ಮನೆಗೂ ಯೋಗವನ್ನು ತಲುಪಿಸುವ ಮೂಲಕ ಸ್ವಸ್ಥ ಸಮಾಜ ನಿರ್ಮಾಣ ಮಾಡುವುದೇ ಸಮಿತಿಯ ಮುಖ್ಯ ಉದ್ದೇಶ ಎಂದರು.
ಜಾಗತಿಕ ಮಟ್ಟದಲ್ಲಿ ಯೋಗಕ್ಕೆ ಮನ್ನಣೆ
"ಪ್ರತಿದಿನದ ಒತ್ತಡದ ಬದುಕಿನಲ್ಲಿ ಕೇವಲ ಒಂದು ಗಂಟೆಯ ಸಮಯವನ್ನು ಯೋಗಕ್ಕಾಗಿ ಮೀಸಲಿಟ್ಟರೆ, ಯಾವುದೇ ದುಬಾರಿ ಔಷಧಗಳಿಲ್ಲದೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. 'ಆರೋಗ್ಯವೇ ಭಾಗ್ಯ' ಎಂಬ ಉದಾತ್ತ ಧೇಯೋದ್ದೇಶದೊಂದಿಗೆ ಪತಂಜಲಿ ಸಂಸ್ಥೆಯು ಇಂದು ಭಾರತ ಮಾತ್ರವಲ್ಲದೆ ಜಗತ್ತಿನಾದ್ಯಂತ ಲಕ್ಷಾಂತರ ಜನರಿಗೆ ಯೋಗ ಶಿಕ್ಷಣ ನೀಡುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು" ಎಂದು ಕರೆ ನೀಡಿದರು.
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಪ್ರಸಿದ್ಧ ವೈದ್ಯ ಡಾ. ರಾಜಕುಮಾರ್, "ಇಂದಿನ ದಿನಗಳಲ್ಲಿ ವೈದ್ಯಕೀಯ ವೆಚ್ಚ ಗಗನಕ್ಕೇರಿದೆ. ಆರ್ಥಿಕ ತೊಂದರೆಯಿಂದಾಗಿ ಸಣ್ಣಪುಟ್ಟ ಕಾಯಿಲೆಗಳಿಗೂ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳಲಾಗದ ಸ್ಥಿತಿಯಲ್ಲಿ ಗ್ರಾಮೀಣ ಭಾಗದ ನೂರಾರು ಬಡ ಜನರಿದ್ದಾರೆ. ಅಂತಹ ದುರ್ಬಲ ವರ್ಗದ ಜನರಿಗೆ ಇಂತಹ ಉಚಿತ ಬೃಹತ್ ವೈದ್ಯಕೀಯ ಶಿಬಿರಗಳು ನಿಜಕ್ಕೂ ಸಂಜೀವಿನಿಯಾಗಿ ಪರಿಣಮಿಸುತ್ತವೆ" ಎಂದು ಶ್ಲಾಘಿಸಿದರು. ಸಮಿತಿಯ ಖಜಾಂಚಿ ಶ್ರೀಕಾಂತ್ ಕುರಂಡೇಕರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಒಂದೇ ಸೂರಿನಡಿ 45 ನುರಿತ ವೈದ್ಯರ ತಂಡ

ಈ ಬೃಹತ್ ಶಿಬಿರದಲ್ಲಿ ಶಿವಮೊಗ್ಗದ ಸುಬ್ಬಯ್ಯ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ವಿವಿಧ ವಿಭಾಗಗಳ 45ಕ್ಕೂ ಹೆಚ್ಚು ನುರಿತ ತಜ್ಞ ವೈದ್ಯರು ಮತ್ತು ಶುಶ್ರೂಷಕ ಸಿಬ್ಬಂದಿ ಪಾಲ್ಗೊಂಡಿದ್ದರು.
ಶಿಬಿರದದಲ್ಲಿ ಮಧುಮೇಹ , ರಕ್ತದೊತ್ತಡ, ಹೃದಯ ರೋಗ, ಮೂಳೆ ಮತ್ತು ಕೀಲು ನೋವು, ಕಿವಿ-ಮೂಗು-ಗಂಟಲು (ENT), ಕಣ್ಣು, ಚರ್ಮ ರೋಗ, ದಂತ ಚಿಕಿತ್ಸೆ ಹಾಗೂ ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಯಿತು, ಅತ್ಯಾಧುನಿಕ ಉಪಕರಣಗಳ ಮೂಲಕ ತಪಾಸಣೆ ನಡೆಸಿ ಸೂಕ್ತ ಸಲಹೆ ಹಾಗೂ ಔಷಧಗಳನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಮೂಳೆ ತಜ್ಞರಾದ ಡಾ. ಸುರೇಶ್, ಮಕ್ಕಳ ತಜ್ಞರಾದ ಡಾ. ವೇಣುಗೋಪಾಲ್, ಸ್ವರಾಜ್ ವಾಸವಿ ಅಂಬಾ ಟ್ರ್ಯಾಕ್ಟರ್ಸ್ ಡೀಲರ್ ಮಾಲೀಕರಾದ ವಿನಾಯಕ್ ಶಟ್ರು, ಪತಂಜಲಿ ಯೋಗ ಸಮಿತಿ ಉಪಾಧ್ಯಕ್ಷ ರಾಘವೇಂದ್ರ ವೈಶ್ಯರ್, ಸುಜಾತ ಬೆನ್ನೂರುಮಠ, ಕಾರ್ಯದರ್ಶಿ ಎಂ.ಬಿ. ರುದ್ರೇಶ್, ಜಗದೀಶ್ ಆಚಾರ್, ಸುರೇಶ್ ಕುಂಬಾರ್, ಜಕ್ಕಾಳಿ ಚನ್ನೇಶ್ ಇದ್ದರು.
ಬಿವಿಎಸ್ ನಿರ್ದೇಶಕರಾದ ಎಚ್.ಎಂ. ಅರುಣ್‌ಕುಮಾರ್, ಕುಂಕೋವ ಹಾವೇಶ್, ಅಂಬಿಕಾ ಹೆಬ್ಬಾರ್, ಪಂಕಜಾಕ್ಷಿ, ಸುಧಾ, ಶೀಲಾ, ವಿದ್ಯಾ ಸೇರಿದಂತೆ ಹಲವು ಗಣ್ಯರು ಹಾಗೂ ಯೋಗ ಬಂಧುಗಳು ಉಪಸ್ಥಿತರಿದ್ದರು.
ಶಿವಮೊಗ್ಗದ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯ, ಸ್ವರಾಜ್ ವಾಸವಿ ಅಂಬಾ ಟ್ರ್ಯಾಕ್ಟರ್ಸ್, ತಾಲೂಕು ಪತಂಜಲಿ ಯೋಗ ಸಮಿತಿ ಹಾಗೂ ವಿವಿಧ ಪ್ರಮುಖ ಸಂಸ್ಥೆಗಳ ಜಂಟಿ ಸಹಯೋಗದಲ್ಲಿ ಶಿಬಿರ ಆಯೋಜಿಸಲಾಗಿತ್ತು.