ಚನ್ನಗಿರಿ: ಚನ್ನಗಿರಿ ತಾಲೂಕಿನ, ವಿಶೇಷವಾಗಿ ಚನ್ನಗಿರಿ ಪಟ್ಟಣದ ಜನರಿಗೆ ಇದು ಖುಷಿಯ ಸುದ್ದಿ. ಕಳೆದ ತಿಂಗಳು ಜಿಲ್ಲೆಯಾದ್ಯಂತ ಚರ್ಚೆಗೆ ಕಾರಣವಾಗಿದ್ದ ‘ಚನ್ನಗಿರಿಯಲ್ಲಿ ದೆವ್ವದ ದಾಳಿ’ ಎಂಬ ಸುದ್ದಿ ಕಿಡಿಗೇಡಿಗಳು ಸೃಷ್ಟಿಸಿರುವ ಕಟ್ಟುಕತೆ ಎಂಬುದು ಸ್ಪಷ್ಟವಾಗಿದೆ. ಎಐ ಮೂಲಕ ದೆವ್ವ ಸೃಷ್ಟಿ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಕಿಡಿಗೇಡಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದು, ಒಂದು ಹಂತದ ಯಶಸ್ಸು ಸಾಧಿಸಿದ್ದಾರೆ.
ಎಐ ಮೂಲಕ ದೆವ್ವದ ಹಾಗೂ ಗಾಯಾಳು ವಿನ ಫೋಟೋ ಸೃಷ್ಟಿ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿರುವುದು ಖಚಿತವಾಗಿದೆ. ಆದರೆ ವೈಜ್ಞಾನಿಕವಾಗಿ ದೃಢಪಡಿಸಿಕೊಳ್ಳುವ ಉದ್ದೇಶದಿಂದ ಎಲ್ಲ ಚಿತ್ರಗಳು ಹಾಗೂ ಸಂಬಂಧಿಸಿದ ಮಾಹಿತಿಯನ್ನು ಇಲಾಖೆಯಿಂದ ಪೂರೈಕೆ ಮಾಡಲಾಗಿದೆ. ಎಐ ಚಿತ್ರಗಳು ಎಂಬ ವರದಿ ಬಂದ ನಂತರ ಆರೋಪಿಗಳ ಬಂಧನ ಪ್ರಕ್ರಿಯೆಗೆ ಚಾಲನೆ ಸಿಗಲಿದೆ.
ಬೈಪಾಸ್ ರಸ್ತೆ ಕಾಮಗಾರಿ ಸ್ಥಳದಲ್ಲಿ ದೆವ್ವ ಕಾಣಿಸಿಕೊಂಡಿದೆ. ಜೆಸಿಬಿಯಿಂದ ಕೆಲಸ ಮಾಡುತ್ತಿದ್ದ ಮೂವರ ಮೇಲೆ ದಾಳಿ ಮಾಡಿದ್ದು, ಅವರ ಬೆನ್ನ ಮೇಲೆ ಗಾಯಗಳಾಗಿವೆ. ಜೆಸಿಬಿ ಚಾಲಕನಿಗೆ ಯಾವುದೇ ಅಪಾಯವಾಗಿಲ್ಲ. ಆದರೆ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ದಾಳಿ ಮಾಡಿದೆ ಎಂಬ ಮಾಹಿತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಲಾಗಿತ್ತು. ಈ ಸುದ್ದಿಯನ್ನು ಖಚಿತಪಡಿಸಲು ಗಾಯಗೊಂಡ ವ್ಯಕ್ತಿಯ ಬೆನ್ನು ಕಾಣುವಂತಹ ಫೋಟೊಗಳನ್ನು ಅಪ್ಲೋಡ್ ಮಾಡಲಾಗಿತ್ತು. ಕತೆಗಳಲ್ಲಿ ಬರುವ ದೆವ್ವದ ಚಿತ್ರದ ಮಾದರಿಯ ಬಿಳಿ ಬಟ್ಟೆ ಧರಿಸಿದ್ದ ಫೋಟೋಗಳನ್ನು ಮತ್ತು ದೆವ್ವದ ದಾಳಿಯಿಂದ ಗಾಯಗೊಂಡಿರುವ ವ್ಯಕ್ತಿ ಎಂದು ಬಿಂಬಿಸಲಾಗಿದ್ದ ವ್ಯಕ್ತಿಯ ಜೊತೆಗೆ ಪೋಸ್ಟ್ ಮಾಡಲಾಗಿತ್ತು. ಕೆಲ ದಿನ ಈ ಸುದ್ದಿ ಚನ್ನಗಿರಿಯಲ್ಲಿ ಭೀತಿಯ ವಾತಾವರಣ ಸೃಷ್ಟಿ ಮಾಡಿತ್ತು. ಕೆಲವರು ಈ ರಸ್ತೆಯ ಕಡೆ ಹೋಗುವುದನ್ನೇ ಬಿಟ್ಟಿದ್ದರು.
ದೆವ್ವದ ಕತೆಯ ನೈಜತೆ ಅರಿಯಲು ಪೊಲೀಸರು ತನಿಖೆ ಆರಂಭಿಸಿದ್ದು, ದೆವ್ವದ ದಾಳಿಯಿಂದ ಗಾಯಗೊಂಡಿರುವ ಯಾವುದಾದರೂ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿದ್ದಾನೆಯೇ ಎಂಬ ಪರಿಶೀಲನೆ ಮಾಡಿದರು. ಘಟನೆ ನಡೆದಿದೆ ಎನ್ನಲಾದ ಸ್ಥಳಕ್ಕೂ ಭೇಟಿ ನೀಡಿ ಅಲ್ಲಿನ ಕಾರ್ಮಿಕರಿಂದ ಮಾಹಿತಿ ಪಡೆದಿದ್ದರು. ಆದರೆ ಗಾಯಗೊಂಡಿರುವ ಅಂತಹ ಯಾವುದೇ ವ್ಯಕ್ತಿಯ ಮಾಹಿತಿ ಅವರಿಗೆ ಲಭ್ಯವಾಗಲಿಲ್ಲ. ಆಗ ಅವರ ಅನುಮಾನ ನಿಜವಾಗಿದ್ದು, ಇದು ಕಿಡಿಗೇಡಿಗಳ ಕೃತ್ಯ ಎಂಬುದು ಮನವರಿಕೆಯಾದ ನಂತರ ಫೋಟೋಗಳ ಪರಿಶೀಲನೆ ಆರಂಭಿಸಿದರು. ಫೋಟೋಗಳು ಎಐ ಸೃಷ್ಟಿ ಎಂಬುದು ಖಚಿತವಾದ ನಂತರ ದೃಢೀಕರಣಕ್ಕಾಗಿ ಅವುಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬರುತ್ತಿದ್ದಂತೆ ಆರೋಪಿಯ ಹೆಡೆ ಮುರಿ ಕಟ್ಟಲು ಸಿದ್ಧರಾಗಿದ್ದಾರೆ. ಕೆಲವು ಕಿಡಿಗೇಡಿಗಳ ಮಾಹಿತಿ ಸಂಗ್ರಹ ಮಾಡಿದ್ದಾರೆ. ಈ ಗುಂಪಿನಲ್ಲಿರುವವರೇ ಮಾಡಿದ್ದಾರೆ ಎಂಬುದೂ ಖಚಿತವಾಗಿದೆ.
ದೆವ್ವ ದಾಳಿ ಮಾಡಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಚನ್ನಗಿರಿಯಲ್ಲಿ ಹಲವು ರೀತಿಯ ಚರ್ಚೆಗಳು ಆರಂಭವಾಗಿದ್ದವು. ದರೋಡೆ ಮಾಡಲು ಸೃಷ್ಟಿಸಿರುವ ಕತೆ ಇದು ಎಂಬುದು ಕೆಲವರ ವಾದವಾದರೆ ಮೂಢನಂಬಿಕೆಯಲ್ಲಿ ವಿಶ್ವಾಸವುಳ್ಳವರು ದೆವ್ವ ಇರುವುದು ನಿಜ ಎಂಬ ವಾದಕ್ಕೆ ಇಳಿದಿದ್ದರು. ಆದರೆ ಇದು ಕಿಡಿಗೇಡಿಗಳ ಕೃತ್ಯ ಎಂಬುದು ಆಗಲೇ ಬಹುತೇಕರಿಗೆ ಮನವರಿಕೆಯಾಗಿತ್ತು. ಘಟನೆ ಬಗ್ಗೆ ವರದಿ ಮಾಡಿದ್ದ ವಿಜಯವಾಣಿ ಪತ್ರಿಕೆ ಕೂಡ, ಇದು ಕಿಡಿಗೇಡಿಗಳ ಕೃತ್ಯವೇ ಎಂದು ಪ್ರತಿಪಾದನೆ ಮಾಡಿತ್ತು.
ಎಐ ದುರ್ಬಳಕೆ ಮಾಡಿಕೊಳ್ಳುವ ಪ್ರವೃತ್ತಿ ಜಿಲ್ಲೆಯಲ್ಲಿ ಹೆಚ್ಚಾಗತೊಡಗಿದೆ. ಚಿರತೆ ಕಾಣಿಸಿಕೊಂಡಿದೆ ಎಂದು ಮಲೆಬೆನ್ನೂರು ಭಾಗದಲ್ಲಿ ಯುವಕನೊಬ್ಬ ಮೊದಲೊಮ್ಮೆ ಎಐ ಬಳಸಿ ಚಿತ್ರ ಸೃಷ್ಟಿಸಿ ವೈರಲ್ ಮಾಡಿದ್ದ. ಅರಣ್ಯ ಇಲಾಖೆ ಮೇಲೆ ಒತ್ತಡ ಬಂದಾಗ ಅಧಿಕಾರಿಗಳು ಪರಿಶೀಲಿಸಿದಾಗ ಯಾವುದೇ ಚಿರತೆ ಇರಲಿಲ್ಲ. ಇದು ಎಐ ಸೃಷ್ಟಿ ಎಂಬುದು ಮನವರಿಕೆಯಾಗಿತ್ತು. ಆನಗೋಡು ತೋಟದ ಬಳಿ ಚಿರತೆ ಪತ್ತೆಯಾಗಿದ್ದು, ಈ ಭಾಗದಲ್ಲಿ ಸಂಚರಿಸುತ್ತಿರುವ ಚಿತ್ರ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂಬ ಫೋಟೋದ್ದೂ ಕೂಡ ಇದೇ ಕತೆ. ಎಐ ಚಿರತೆಗಳ ಕಾಟದಿಂದ ಬೇಸತ್ತ ಅರಣ್ಯ ಇಲಾಖೆ ಅಧಿಕಾರಿಗಳು ಕೇಸು ದಾಖಲು ಮಾಡುವ ಬೆದರಿಕೆ ಹಾಕಬೇಕಾಯಿತು. ನಂತರದ ದಿನಗಳಲ್ಲಿ ಚಿರತೆ ಕಾಣಿಸಿಕೊಂಡ ಸುದ್ದಿ ಎಲ್ಲಿಯೂ ಕೇಳಿ ಬರುತ್ತಿಲ್ಲ.