ಹೊನ್ನಾಳಿ ಪಟ್ಟಣದ ಟಿ.ಬಿ. ವೃತ್ತದಲ್ಲಿರುವ ಸರ್ಕಾರಿ ಶಾಲೆಯ ಪುಸ್ತಕ ದಾಸ್ತಾನು ಕೇಂದ್ರಕ್ಕೆ ಬುಧವಾರ ಬಿಇಒ ನಿಂಗಪ್ಪ ಭೇಟಿ ನೀಡಿ ಪರಿಶೀಲಿಸಿದರು. ಸಿಆರ್‌ಪಿ ರಂಗನಾಥ್, ತಾಲೂಕು ದೈಹಿಕ ಶಿಕ್ಷಣ ನಿರ್ದೇಶಕರಿದ್ದರು.Textbook
- ಹೊನ್ನಾಳಿ ಬಿಇಒ ನಿಂಗಪ್ಪ ಮಾಹಿತಿ
- ಜಿಜೆಸಿ ಕಾಲೇಜಿನಲ್ಲಿ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ
ಹೊನ್ನಾಳಿ: ತಾಲೂಕಿನ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಿಗೆ ಮೇ 15ರಿಂದ ಪಠ್ಯಪುಸ್ತಕಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಟಿ. ನಿಂಗಪ್ಪ ತಿಳಿಸಿದರು.
ಬುಧವಾರ ಪಟ್ಟಣದ ಟಿ.ಬಿ. ವೃತ್ತದಲ್ಲಿರುವ ಸರ್ಕಾರಿ ಶಾಲೆಯ ಪುಸ್ತಕ ದಾಸ್ತಾನು ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿ, ತಾಲೂಕಿಗೆ ಒಟ್ಟು 3.57 ಲಕ್ಷ ಪಠ್ಯಪುಸ್ತಕಗಳ ಅವಶ್ಯಕತೆಯಿದ್ದು, ಈ ಪೈಕಿ ಈಗಾಗಲೇ 2.25 ಲಕ್ಷ ಪುಸ್ತಕಗಳು ಬಂದಿವೆ. ಬಾಕಿ ಇರುವ 1.32 ಲಕ್ಷ ಪುಸ್ತಕಗಳು ಶೀಘ್ರದಲ್ಲೇ ಬರಲಿವೆ. ಶಿಕ್ಷಕರು ಸಿಆರ್‌ಪಿ ರಂಗನಾಥ್ ಅವರಿಂದ ಮಾಹಿತಿ ಪಡೆದು, ಮೇ 15ರಿಂದಲೇ ಪುಸ್ತಕಗಳನ್ನು ಪಡೆದುಕೊಂಡು ವಿದ್ಯಾರ್ಥಿಗಳಿಗೆ ವಿತರಿಸಬೇಕು ಎಂದು ಸೂಚಿಸಿದರು.
ಮೇ 29ರಿಂದ ಶಾಲೆಗಳು ಪ್ರಾರಂಭವಾಗಲಿವೆ. ಇದಕ್ಕಾಗಿ ಕೊಠಡಿಗಳ ಸ್ವಚ್ಛತೆ ಹಾಗೂ ಪೂರ್ವಸಿದ್ಧತಾ ಸಭೆಗಳನ್ನು ನಡೆಸಲಾಗುವುದು. ಶಾಲಾ ಪ್ರಾರಂಭೋತ್ಸವದಂದು ವಿದ್ಯಾರ್ಥಿಗಳಿಗೆ ಗುಲಾಬಿ ಹೂವು ನೀಡಿ, ಶಾಲೆಯನ್ನು ತಳಿರು ತೋರಣಗಳಿಂದ ಅಲಂಕರಿಸಿ ಸ್ವಾಗತಿಸಲಾಗುವುದು ಎಂದರು.
ಹೊನ್ನಾಳಿ- ನ್ಯಾಮತಿ ತಾಲೂಕಿನಲ್ಲಿ ಒಟ್ಟು 80 ಶಾಲಾ ಕೊಠಡಿಗಳ ದುರಸ್ತಿ ಕಾರ್ಯ ಬಾಕಿಯಿದೆ. ಶಾಸಕರ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುದಾನ ಬಂದ ತಕ್ಷಣ ಮಳೆಗಾಲಕ್ಕೂ ಮುನ್ನ ದುರಸ್ತಿ ಮಾಡಿಸಲಾಗುವುದು. ಒಟ್ಟು 675 ಶಿಕ್ಷಕರ ಹುದ್ದೆಗಳ ಪೈಕಿ 99 ಹುದ್ದೆಗಳು ಖಾಲಿ ಇವೆ. ಈ ಬಗ್ಗೆ ಡಿಡಿಪಿಐ ಕಚೇರಿಗೆ ಮಾಹಿತಿ ನೀಡಲಾಗಿದ್ದು, ಶೀಘ್ರದಲ್ಲೇ ಭರ್ತಿಯಾಗಲಿವೆ ಎಂದು ಹೇಳಿದರು.
ಪೂರಕ ಪರೀಕ್ಷೆ: ಮೇ 18ರಿಂದ 23ರವರೆಗೆ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ನಡೆಯಲಿದ್ದು, ಒಟ್ಟು 371 ವಿದ್ಯಾರ್ಥಿಗಳು (140 ಪ್ರಸಕ್ತ ಸಾಲಿನವರು ಹಾಗೂ 231 ಹಳೆಯ ವಿದ್ಯಾರ್ಥಿಗಳು) ಪರೀಕ್ಷೆ ಬರೆಯಲಿದ್ದಾರೆ. ಹೊನ್ನಾಳಿ ಪಟ್ಟಣದ ಜಿಜೆಸಿ ಕಾಲೇಜನ್ನು ಪರೀಕ್ಷಾ ಕೇಂದ್ರವನ್ನಾಗಿ ಗುರುತಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಇಸಿಒ ಮುದ್ದನಗೌಡ, ಸಿಆರ್‌ಪಿ ರಂಗನಾಥ್, ತಾಲೂಕು ದೈಹಿಕ ಶಿಕ್ಷಣ ನಿರ್ದೇಶಕರು ಉಪಸ್ಥಿತರಿದ್ದರು.
ದಾಖಲಾತಿ ಆಂದೋಲನ
ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸಲು ಮೇ 25ರಿಂದ ಒಂದು ವಾರಗಳ ಕಾಲ ದಾಖಲಾತಿ ಆಂದೋಲನ ಹಮ್ಮಿಕೊಳ್ಳಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಈ ಬಾರಿ ಎಸ್‌ಎಸ್‌ಎಲ್‌ಸಿಯಲ್ಲಿ ತಾಲೂಕಿನ 11 ಸರ್ಕಾರಿ ಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆದಿರುವುದು ಇದಕ್ಕೆ ಸಾಕ್ಷಿ. ಪಾಲಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಬೇಕು ಎಂದು ಬಿಇಒ ಮನವಿ ಮಾಡಿದರು.