ದಾವಣಗೆರೆಯ ಲಿಂಗೇಶ್ವರ ದೇವಸ್ಥಾನವನ್ನು ಚಂದ್ರ ಗ್ರಹಣ ಸಮಯದಲ್ಲಿ ಮಂಗಳವಾರ ಬಂದ್ ಮಾಡಲಾಗಿತ್ತು.
- ಸಂಜೆ ಮತ್ತೆ ದರ್ಶನಾವಕಾಶ
- ವಿಶೇಷ ಪೂಜೆ, ಭಕ್ತರಿಂದ ದಾನ
ದಾವಣಗೆರೆ : ಚಂದ್ರ ಗ್ರಹಣ ಹಿನ್ನೆಲೆಯಲ್ಲಿ ನಗರದ ವಿವಿಧ ದೇವಾಲಯಗಳನ್ನು ಮಂಗಳವಾರ ಬಂದ್ ಮಾಡಲಾಗಿತ್ತು.
ಬೆಳಗ್ಗೆಯಿಂದ ಪೂಜೆ, ದರ್ಶನ ಎಂದಿನಂತೆ ನಡೆದವು. ಮಧ್ಯಾಹ್ನ 12 ಗಂಟೆಯ ನಂತರ ದೇವಸ್ಥಾನಗಳ ಬಾಗಿಲು ಹಾಕಲಾಯಿತು. ನಂತರ ದೇವರ ದರ್ಶನ ಪಡೆಯಲು ಭಕ್ತರಿಗೆ ಅವಕಾಶ ಇರಲಿಲ್ಲ.
ಗ್ರಹಣ ಮೋಕ್ಷದ ನಂತರ ಸಂಜೆ 7 ಗಂಟೆಗೆ ದೇಗುಲ ಆವರಣ ಶುಚಿಗೊಳಿಸಿ, ದೇವರಿಗೆ ಅಭಿಷೇಕ, ಅಲಂಕಾರ ಮಾಡಿ ಮಂಗಳಾರತಿ ಮಾಡಲಾಯಿತು. ಸಂಜೆ ಮತ್ತೆ ಭಕ್ತರಿಗೆ ಪ್ರವೇಶ ನೀಡಲಾಯಿತು.
ಗ್ರಹಣ ಕಾಲ ಮುಗಿದ ನಂತರ ದೇವಸ್ಥಾನಗಳಿಗೆ ತೆರಳಿದ ಭಕ್ತರು ದರ್ಶನ ಪಡೆದರು. ಗ್ರಹಣ ದೋಷ ಮುಕ್ತಿಗಾಗಿ ಕೆಲವರು ಬಿಳಿ ಬಟ್ಟೆ, ಅಕ್ಕಿ ಮುಂತಾದ ವಸ್ತು, ಪದಾರ್ಥಗಳನ್ನು ದಾನ ಮಾಡಿದರು.
ಮಂಗಳವಾರ ಆಗಿದ್ದರಿಂದ ಹಾಗೂ ಜಾತ್ರೆ ಇರುವುದರಿಂದ ನಗರ ದೇವತೆ ದುರ್ಗಾಂಬಿಕಾ ದೇವಿಯ ದರ್ಶನಕ್ಕೆ ಬೆಳಗ್ಗೆ ಬಹಳಷ್ಟು ಭಕ್ತರು ಆಗಮಿಸಿದ್ದರು. ಮಧ್ಯಾಹ್ನ 12 ಗಂಟೆಯ ವರೆಗೆ ಅವರಿಗೆ ದರ್ಶನದ ಅವಕಾಶ ಮಾಡಿಕೊಡಲಾಯಿತು. ನಂತರ ದೇವಸ್ಥಾನದ ಬಾಗಿಲು ಹಾಕಲಾಯಿತು.
ಸಂಜೆ ಗ್ರಹಣ ಮುಗಿದ ನಂತರ ದೇಗುಲ ಆವರಣವನ್ನು ಶುಚಿಗೊಳಿಸಿ ದೇವಿಯ ಪೂಜೆ ನೆರವೇರಿಸಲಾಯಿತು. ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಲಿಂಗೇಶ್ವರ ದೇವಸ್ಥಾನ ಸೇರಿ ನಗರದ ಬಹಳಷ್ಟು ದೇಗುಲಗಳನ್ನು ಮಧ್ಯಾಹ್ನದಿಂದ ಸಂಜೆಯ ವರೆಗೆ ಬಂದ್ ಮಾಡಲಾಗಿತ್ತು.
ಇನ್ನೂ ಕೆಲವು ದೇವಸ್ಥಾನಗಳಲ್ಲಿ ಚಿತ್ರಣ ಎಂದಿನಂತಿತ್ತು. ದರ್ಶನಕ್ಕೆ ನಿರ್ಬಂಧ ಇರಲಿಲ್ಲ. ಗ್ರಹಣ ಗೋಚರಿಸುವ ಸಮಯ ಕಡಿಮೆ ಇದ್ದುದರಿಂದ ಜಪ, ತಪ ಮುಂತಾದ ವಿಶೇಷ ಕಾರ್ಯಕ್ರಮಗಳು ನಡೆಯಲಿಲ್ಲ. ಸಂಜೆ ಅಭಿಷೇಕ, ವಿಶೇಷ ಪೂಜಾದಿಗಳು ನಡೆದವು. ಭಕ್ತರು ಗ್ರಹಣ ದೋಷ ನಿವಾರಣೆಗಾಗಿ ದಾನ ಮಾಡಿದರು.