ದಾವಣಗೆರೆ ಮಹಾನಗರ ಪಾಲಿಕೆ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಸ್ವಯಂ ಘೋಷಿತ ಆಸ್ತಿ ತೆರಿಗೆಯಲ್ಲಿ ಹೆಚ್ಚಿನ ವಸೂಲಾತಿ ಮತ್ತು ಪ್ರಗತಿ ಸಾಧಿಸಿರುವ ಅಧಿಕಾರಿಗಳು, ನೌಕರರಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು. ಡಾ.ಪ್ರಭಾ ಮಲ್ಲಿಕಾರ್ಜುನ್, ಡಾ. ಎನ್. ಮಹಾಂತೇಶ್, ಉದಯ್, ರೇಣುಕಾ, ಜಿ.ಟಿ. ವೀರೇಶ್ ಕುಮಾರ್, ಸಿದ್ದಲಿಂಗೇಶ್ ಇದ್ದರು. 
ದಾವಣಗೆರೆ

ಅಭಿವೃದ್ಧಿಗೆ ತೆರಿಗೆ ವಸೂಲಾತಿ ಅಗತ್ಯ

ಪ್ರಮುಖ ಮುಖ್ಯಾಂಶಗಳು

  • ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿಕೆ
  • ಅಧಿಕಾರಿ, ನೌಕರರಿಗೆ ಪ್ರಶಂಸನಾ ಪತ್ರ
ದಾವಣಗೆರೆ : ನಗರದ ಅಭಿವೃದ್ಧಿಗೆ ಮೂಲಸೌಕರ್ಯ, ಹಸಿರೀಕರಣ ಹಾಗೂ ಸ್ವಚ್ಛತೆ ಮುಖ್ಯವಾಗಿದ್ದು, ಇದಕ್ಕೆ ತೆರಿಗೆ ವಸೂಲಾತಿ ಅತ್ಯಗತ್ಯವಾಗಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ಜಿಲ್ಲಾಡಳಿತ ಮತ್ತು ಜಿಲ್ಲಾ ನಗರಾಭಿವೃದ್ಧಿ ಕೋಶದ ವತಿಯಿಂದ ಮಹಾನಗರ ಪಾಲಿಕೆ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ, ಪ್ರಸಕ್ತ ಸಾಲಿನ (ಏಪ್ರಿಲ್ ಮಾಹೆಯಲ್ಲಿ) ಸ್ವಯಂ ಘೋಷಿತ ಆಸ್ತಿ ತೆರಿಗೆಯಲ್ಲಿ ಹೆಚ್ಚಿನ ವಸೂಲಾತಿ ಮತ್ತು ಪ್ರಗತಿ ಸಾಧಿಸಿರುವ ಅಧಿಕಾರಿಗಳು, ನೌಕರರಿಗೆ ಪ್ರಶಂಸನಾ ಪತ್ರ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಏಪ್ರಿಲ್ ಮತ್ತು ಮೇ ತಿಂಗಳ ಅವಧಿಯಲ್ಲಿ ಶೇ. 50ಕ್ಕೂ ಹೆಚ್ಚು ತೆರಿಗೆ ವಸೂಲಾತಿಯಾಗಿ ಗಣನೀಯ ಸಾಧನೆಯಾಗಿದೆ. ತೆರಿಗೆ ಸಂಗ್ರಹದಲ್ಲಿ ಹರಿಹರ ತಾಲೂಕು ಶೇ. 46, ಚನ್ನಗಿರಿ ಶೇ. 56ರಷ್ಟು ಪ್ರಗತಿ ಸಾಧಿಸಿದ್ದು, ಜಗಳೂರು ಮತ್ತು ಮಲೇಬೆನ್ನೂರು ಭಾಗದಲ್ಲಿ ಪ್ರಗತಿ ಕೊಂಚ ಕುಂಠಿತವಾಗಿದೆ. ಬಾಕಿ ಇರುವ ತೆರಿಗೆಯನ್ನು ಶೀಘ್ರ ವಸೂಲಿ ಮಾಡಲು ಕ್ರಮ ವಹಿಸಿ ಎಂದು ಸೂಚಿಸಿದರು.
ಸರ್ಕಾರಿ ಕಚೇರಿಗಳಿಗೆ ಬರುವ ಸಾರ್ವಜನಿಕರನ್ನು ಕೇವಲ ಅರ್ಜಿದಾರರನ್ನಾಗಿ ನೋಡದೆ, ಅವರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ ಸೂಕ್ತ ಪರಿಹಾರ ಕಲ್ಪಿಸುವುದು ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಇಂತಹ ಕಾರ್ಯಕ್ರಮಗಳಿಂದ ನೌಕರರಲ್ಲಿ ಉತ್ಸಾಹ ತುಂಬುತ್ತದೆ. ಯಾವುದೇ ಕೆಲಸ ಮಾಡುವಾಗ ಬೆನ್ನು ತಟ್ಟಿ ಪ್ರೋತ್ಸಾಹಿಸಿದರೆ, ಇನ್ನೂ ಹೆಚ್ಚಿನ ಉತ್ಸಾಹದಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ. ಅಧಿಕಾರಿಗಳು ನಮ್ಮ ಕೆಲಸವನ್ನು ಗುರುತಿಸುತ್ತಿದ್ದಾರೆ ಎಂಬ ಭಾವನೆ ನೌಕರರಲ್ಲಿ ಮೂಡುತ್ತದೆ. ಶಾಲಾ ಕಾಲೇಜುಗಳಲ್ಲಿ ಪ್ರಾವೀಣ್ಯತೆ ಪ್ರಮಾಣಪತ್ರ ನೀಡುವ ಮಾದರಿಯಲ್ಲಿಯೆ ಇಲ್ಲೂ ಗೌರವಿಸಲಾಗುತ್ತಿದೆ ಎಂದರು.
ಸಾರ್ವಜನಿಕರು ತಂದ ಸಮಸ್ಯೆಗಳು ತಮ್ಮ ಇಲಾಖೆಗೆ ಸಂಬಂಧಿಸಿಲ್ಲದಿದ್ದರೂ, ಅದು ಯಾವ ಇಲಾಖೆಗೆ ಸಂಬಂಧಿಸಿದೆ ಮತ್ತು ಆ ಕಚೇರಿ ಎಲ್ಲಿದೆ ಎಂಬ ಸಂಪೂರ್ಣ ಮಾಹಿತಿಯನ್ನು ನೀಡಿ ಮಾರ್ಗದರ್ಶನ ಮಾಡಬೇಕು ಎಂದು ತಿಳಿಸಿದರು.
ಪ್ರತಿ ಇಲಾಖೆಯಲ್ಲೂ ಪ್ರತಿ ತಿಂಗಳು ದಿಶಾ ಸಮಿತಿ ಹಾಗೂ ಕೆಡಿಪಿ ಮಾದರಿಯಲ್ಲಿ ಆಂತರಿಕ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸಬೇಕು. ಒಂದು ವೇಳೆ ಅರ್ಜಿದಾರರು ಯೋಜನೆಗಳಿಗೆ ಅರ್ಹರಿಲ್ಲದಿದ್ದರೆ ಅಥವಾ ದಾಖಲೆಗಳ ಕೊರತೆಯಿದ್ದರೆ, ಯಾವ ಕಾರಣಕ್ಕಾಗಿ ತಿರಸ್ಕರಿಸಲಾಗಿದೆ ಮತ್ತು ಅರ್ಹರಾಗಲು ಇನ್ನು ಏನೇನು ದಾಖಲೆಗಳು ಬೇಕು ಎಂಬುದನ್ನು ಸ್ಪಷ್ಟವಾಗಿ ತಿಳಿಸಬೇಕು ಎಂದು ಹೇಳಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಜನಕಲ್ಯಾಣ ಯೋಜನೆಗಳು, ಸಹಾಯವಾಣಿ ಸಂಖ್ಯೆಗಳು ಹಾಗೂ ಆಂಬುಲೆನ್ಸ್ ಸೇರಿ ತುರ್ತು ಸೇವೆಗಳ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರಿಗೆ ಕಾಣಿಸುವಂತೆ ಪ್ರತಿಯೊಂದು ಕಚೇರಿಯಲ್ಲೂ ಪ್ರದರ್ಶಿಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ, ತೆರಿಗೆ ವಸೂಲಾತಿಯಲ್ಲಿ ಉತ್ತಮ ಸಾಧನೆ ಮಾಡಿದ 18 ಮಂದಿ ನೌಕರರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಅರ್ಹ ಫಲಾನುಭವಿಗಳಿಗೆ, ಅಂಗವಿಕಲ ಮಕ್ಕಳಿಗೆ ಬ್ರೈಲ್ ಉಪಕರಣಗಳು, ಉದ್ಯೋಗಾವಕಾಶಕ್ಕಾಗಿ ಲ್ಯಾಪ್‌ಟಾಪ್‌ಗಳು, ಹೊಲಿಗೆ ಯಂತ್ರಗಳು ಹಾಗೂ ಚಲನವಲನದ ನೆರವಿಗಾಗಿ ವ್ಹೀಲ್ ಚೇರ್ ಮತ್ತು ವಿಶೇಷ ವಾಹನಗಳನ್ನು ವಿತರಿಸಿದರು.
ಪಾಲಿಕೆ ಆಯುಕ್ತ ಡಾ. ಎನ್. ಮಹಾಂತೇಶ್, ಕಂದಾಯ ಆಯುಕ್ತ ಉದಯ್, ದೂಡಾ ಆಯುಕ್ತೆ ರೇಣುಕಾ, ಯೋಜನಾ ನಿರ್ದೇಶಕ ಜಿ.ಟಿ. ವೀರೇಶ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಸಿದ್ದಲಿಂಗೇಶ್ ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ಸ್ವಚ್ಛತಾ ಅಭಿಯಾನ

ನಮ್ಮ ಮನೆ, ಡ್ರಾಯಿಂಗ್ ರೂಮ್ ಸ್ವಚ್ಛವಾಗಿದ್ದರೆ ಸಾಲದು, ಇಡೀ ನಗರವೆ ನಮ್ಮ ಮನೆ ಎಂದು ಭಾವಿಸಬೇಕು ಎಂಬ ಉದ್ದೇಶದೊಂದಿಗೆ ಸಾರ್ವಜನಿಕರ ಸಹಭಾಗಿತ್ವದಲ್ಲಿ ಸ್ವಚ್ಛತಾ ಆಂದೋಲನವನ್ನು ಮುಂದುವರಿಸಲು ತೀರ್ಮಾನಿಸಲಾಗಿದೆ ಎಂದು ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ನಾಗರಿಕರಲ್ಲಿ ಜವಾಬ್ದಾರಿಯುತ ನಡವಳಿಕೆಯನ್ನು ಮೂಡಿಸಲು ಪ್ರತಿ ವಾರ್ಡ್‌ಗಳಲ್ಲೂ ಸಾರ್ವಜನಿಕರನ್ನು ಒಳಗೊಂಡ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಜೂನ್ 16ರಂದು ಹಸಿರೀಕರಣ ಮತ್ತು ಸ್ವಚ್ಛತೆಗೆ ಸಂಬಂಧಿಸಿದಂತೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮಹಾನಗರ ಪಾಲಿಕೆಯ ಆಯುಕ್ತರು ಹಾಗೂ ಅಧಿಕಾರಿಗಳೊಂದಿಗೆ ವಿಸ್ತೃತ ಕಾರ್ಯಸೂಚಿ ಸಿದ್ಧಪಡಿಸಲಾಗಿದೆ. ವಿದ್ಯಾರ್ಥಿಗಳ ಉದ್ಯೋಗ, ಸಾಲ ಸೌಲಭ್ಯ ಹಾಗೂ ತಂತ್ರಜ್ಞಾನದ ನೆರವಿಗಾಗಿ ಇಲಾಖೆಗಳು ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದರು.
ಸಾರ್ವಜನಿಕರಿಂದ ಮುಖ್ಯವಾಗಿ ಇ-ಸ್ವತ್ತು, ಖಾತಾ ಬದಲಾವಣೆ ಹಾಗೂ ತಿದ್ದುಪಡಿಗೆ ಸಂಬಂಧಿಸಿದಂತೆ ಹೆಚ್ಚಿನ ದೂರುಗಳು ಬರುತ್ತಿದ್ದು, ನಿಗದಿತ ಕಾಲಮಿತಿಯೊಳಗೆ ಅವುಗಳನ್ನು ಇತ್ಯರ್ಥಪಡಿಸಲು ಅಧಿಕಾರಿಗಳು ಮತ್ತು ಸಿಬ್ಬಂದಿ ಕ್ರಮ ವಹಿಸಬೇಕು ಎಂದು ತಾಕೀತು ಮಾಡಿದರು.