ನಕಲಿ ವೈದ್ಯರ ಪತ್ತೆ ಮತ್ತು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಸಂಬಂಧ, ದಾವಣಗೆರೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ಸಭೆಯಲ್ಲಿ ಉಪವಿಭಾಗಾಧಿಕಾರಿ ಸಂತೋಷ್‌ಕುಮಾರ್, ಡಾ.ಷಣ್ಮುಖಪ್ಪ, ಡಾ. ಮಂಜುನಾಥ ಪಾಟೀಲ್, ಡಾ.ಯೋಗೇಂದ್ರಕುಮಾರ್ ಇದ್ದರು.
- ದಾವಣಗೆರೆ ಜಿಲ್ಲೆಯಲ್ಲಿ 40 ನಕಲಿ ವೈದ್ಯರ ಪತ್ತೆ
- ಟಾಸ್ಕ್‌ಫೋರ್ಸ್ ತೀವ್ರ ಕಾರ್ಯಾಚರಣೆ ನಡೆಸಲಿ
- ಉಪವಿಭಾಗಾಧಿಕಾರಿ ಸಂತೋಷ್‌ಕುಮಾರ್ ಸೂಚನೆ
ದಾವಣಗೆರೆ: ಜಿಲ್ಲಾದ್ಯಂತ ಅನಧಿಕೃತ ಕ್ಲಿನಿಕ್‌ಗಳ ವಿರುದ್ಧ ಇನ್ನಷ್ಟು ಕಠಿಣ ಕಾನೂನುಕ್ರಮ ಕೈಗೊಳ್ಳುವ ಮೂಲಕ ನಕಲಿ ವೈದ್ಯಮುಕ್ತ ಜಿಲ್ಲೆಯಾಗಿಸಬೇಕು ಎಂದು ಉಪವಿಭಾಗಾಧಿಕಾರಿ ಸಂತೋಷ್‌ಕುಮಾರ್ ತಿಳಿಸಿದರು.
ನಕಲಿ ವೈದ್ಯರ ಪತ್ತೆ ಮತ್ತು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಸಂಬಂಧ, ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿಯೂ ಅಕ್ರಮ ಕ್ಲಿನಿಕ್‌ಗಳ ಹಾವಳಿ ತಡೆಯಬೇಕಿದೆ. ಜಿಲ್ಲಾ ಮಟ್ಟದ ಕಾರ್ಯಪಡೆ ಸಮಿತಿಯು ತೀವ್ರ ಸ್ವರೂಪದ ಕಾನೂನು ಕ್ರಮ ಕೈಗೊಂಡಲ್ಲಿ ಜಿಲ್ಲೆಯಲ್ಲಿ ನಕಲಿ ವೈದ್ಯರ ದಂಧೆಗೆ ಕಡಿವಾಣ ಹಾಕಬಹುದು ಎಂದರು.
ರಾಜ್ಯ ಗುಪ್ತಚರ ಇಲಾಖೆ ವರದಿ ಹಾಗೂ ಸಾರ್ವಜನಿಕರ ದೂರುಗಳನ್ನು ಆಧರಿಸಿ ಜಿಲ್ಲೆಯಲ್ಲಿ ಸದ್ಯ 40 ನಕಲಿ ವೈದ್ಯರನ್ನು ಪತ್ತೆ ಹಚ್ಚಲಾಗಿದೆ. ಆದರೆ ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ನಕಲಿ ವೈದ್ಯರಿದ್ದಾರೆ. ತಾಲೂಕು ವೈದ್ಯಾಧಿಕಾರಿ ಒಳಗೊಂಡ ತಂಡಗಳು ಹಲವೆಡೆ ದಾಳಿ ನಡೆಸಿ ನಕಲಿ ವೈದ್ಯರನ್ನು ಗುರುತಿಸಿ ವರದಿ ನೀಡಿವೆ ಎಂದೂ ತಿಳಿಸಿದರು.
2007ರಿಂದಲೇ ಸರ್ಕಾರವು ನಕಲಿ ವೈದ್ಯರ ಪತ್ತೆಗೆ ಸಂಬಂಧಿಸಿದಂತೆ ಹಲವಾರು ಸುತ್ತೋಲೆಗಳನ್ನು ಹೊರಡಿಸಿದೆ. ನಿಯಮಗಳ ಪ್ರಕಾರ, ಯಾವುದೇ ವ್ಯಕ್ತಿ ಖಾಸಗಿ ವೈದ್ಯಕೀಯ ವೃತ್ತಿ ನಡೆಸಬೇಕಾದರೆ ಕೆಪಿಎಂಇ ಕಾಯ್ದೆ 2007ರ ಸೆಕ್ಷನ್ 2(ಒ) ಅಡಿಯಲ್ಲಿ ಕನಿಷ್ಠ ಎಂಬಿಬಿಎಸ್ ಅಥವಾ ಮಾನ್ಯತೆ ಪಡೆದ ಆಯುರ್ವೇದ, ಸಿದ್ದ, ಯುನಾನಿ, ಹೋಮಿಯೋಪತಿ ಪದವಿ ಹೊಂದಿರಬೇಕು ಹಾಗೂ ಕಡ್ಡಾಯವಾಗಿ ನೋಂದಣಿ ಮಾಡಿಸಿರಬೇಕು.
ಆದರೆ, ನಕಲಿ ವೈದ್ಯರು ಆರು ತಿಂಗಳು, ಒಂದು ವರ್ಷ, ಎರಡು ವರ್ಷದ ತರಬೇತಿ ಪಡೆದು ಅನಧಿಕೃತ ಚಿಕಿತ್ಸಾಲಯಗಳನ್ನು ತೆರೆದು ಚುಚ್ಚುಮದ್ದು, ಸ್ಟಿರಾಯ್ಡಿ ಔಷಧವನ್ನು ನೀಡುತ್ತಿದ್ದಾರೆ. ಇವರು ಮಾನವೀಯತೆಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಾ ವೈದ್ಯ ವೃತ್ತಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ಅನಧಿಕೃತವಾಗಿ ವೈದ್ಯಕೀಯ ವೃತ್ತಿ ಕೈಗೊಳ್ಳುವವರ ವಿರುದ್ಧ ಕೆಪಿಎಂಇ ಕಾಯ್ದೆಯ ಸೆಕ್ಷನ್ 34 ಮತ್ತು 36ರ ಅಡಿಯಲ್ಲಿ ಕಠಿಣ ಕ್ರಮ ಜರುಗಿಸಲಾಗುತ್ತದೆ. ನಿಯಮ ಉಲ್ಲಂಘಿಸಿದ ನಕಲಿ ವೈದ್ಯರಿಗೆ 25,000 ರೂ.ನಿಂದ 1ಲಕ್ಷ ರೂ. ದಂಡ ಹಾಗೂ ಮೂರು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಷಣ್ಮುಖಪ್ಪ, ಡಾ. ಮಂಜುನಾಥ ಪಾಟೀಲ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಯೋಗೇಂದ್ರ ಕುಮಾರ್, ತಾಲೂಕು ವೈದ್ಯಾಧಿಕಾರಿಗಳಿದ್ದರು.