ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ದ್ವಿತೀಯ ಪಪೂ ಪರೀಕ್ಷೆ ಸಂಬಂಧ ಸೋಮವಾರ ಹಮ್ಮಿಕೊಂಡಿದ್ದ ಪೂರ್ವಸಿದ್ಧ್ದತಾ ಸಭೆಯಲ್ಲಿ ಎಡಿಸಿ ಶೀಲವಂತ ಶಿವಕುಮಾರ, ಡಿಡಿಪಿಯು ಪಳನಿವೇಲು, ಸಂತೋಷ್‌ಕುಮಾರ್ ವಿವಿಧ ಕಾಲೇಜುಗಳ ಪ್ರಾಚಾರ್ಯರಿದ್ದರು.
- ಜಿಲ್ಲೆಯ 37 ಕೇಂದ್ರಗಳಲ್ಲಿ ಸೌಕರ್ಯ ಕಲ್ಪಿಸಿ
- ಸಿಸಿ ಕ್ಯಾಮರಾ ಅಳವಡಿಕೆ ಕಡ್ಡಾಯ
- ಎಡಿಸಿ ಶೀಲವಂತ ಶಿವಕುಮಾರ ಸೂಚನೆ
ದಾವಣಗೆರೆ: ಜಿಲ್ಲೆಯಲ್ಲಿ ಫೆ.28ರಿಂದ ಮಾರ್ಚ್ 17ರವರೆಗೆ ನಿಗದಿಯಾದ ದ್ವಿತೀಯ ಪಪೂ ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಬೇಕು. ಅಕ್ರಮಕ್ಕೆ ಅಸ್ಪದವಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ದ್ವಿತೀಯ ಪಪೂ ಪರೀಕ್ಷೆ ಸಂಬಂಧ ಸೋಮವಾರ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪೂರ್ವಸಿದ್ಧ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಂತಿಯುತವಾಗಿ ಪರೀಕ್ಷೆ ನಡೆಸುವುದು ಪವಿತ್ರವಾಗಿದೆ. ಇದರ ಪಾವಿತ್ರೃತೆ ಕಾಪಾಡಿ ಎಂದು ತಿಳಿಸಿದರು.
ದಾವಣಗೆರೆ ತಾಲೂಕಿನ 21, ಹರಿಹರ ಮತ್ತು ಚನ್ನಗಿರಿ ತಾಲೂಕಿನ ತಲಾ ಐದು, ಜಗಳೂರು ತಾಲೂಕಿನ 3, ಹೊನ್ನಾಳಿ ತಾಲೂಕಿನ 2, ನ್ಯಾಮತಿ ತಾಲೂಕಿನ ಒಂದು ಕೇಂದ್ರ ಸೇರಿ 37 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಸೂಕ್ತ ಪೀಠೋಪಕರಣ, ಆಸನಗಳು ಸೇರಿ ಮೂಲ ವ್ಯವಸ್ಥೆ ಕಲ್ಪಿಸಬೇಕು ಎಂದು ಹೇಳಿದರು.
ಪರೀಕ್ಷಾ ಕೇಂದ್ರಗಳಲ್ಲಿ ಪೊಲೀಸ್ ಬಂದೋಬಸ್ತ್ ಜತೆಗೆ, ಸುತ್ತಲಿನ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗುವುದು. ನೆರೆಹೊರೆಯ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಲು ಕ್ರಮ ವಹಿಸಲಾಗುವುದು. ಹಲವು ಕಾಲೇಜುಗಳಲ್ಲಿ ಈಗಾಗಲೇ ಸಿಸಿ ಕ್ಯಾಮರಾಗಳಿದ್ದು, ಈ ವ್ಯವಸ್ಥೆ ಇಲ್ಲದೆಡೆ ಅವಶ್ಯವಾಗಿ ಅಳವಡಿಸಬೇಕೆಂದರು.
ಜಿಲ್ಲೆಯಲ್ಲಿ ಒಟ್ಟು 21,329 ಪರೀಕ್ಷಾರ್ಥಿಗಳಿದ್ದು, ಈ ಪೈಕಿ 19445 ಹೊಸಬರು, 1742 ಪುನರಾವರ್ತಿತ , 142 ಖಾಸಗಿ ವಿದ್ಯಾರ್ಥಿಗಳಿದ್ದಾರೆ. ಪರೀಕ್ಷಾ ಕೊಠಡಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉಪನ್ಯಾಸಕರು, ಸಿಬ್ಬಂದಿ, ವಿದ್ಯಾರ್ಥಿಗಳು ಮೊಬೈಲ್ ಸೇರಿ ವಿದ್ಯುನ್ಮಾನ ಉಪಕರಣಗಳನ್ನು ತರುವಂತಿಲ್ಲ. ಪರೀಕ್ಷಾ ಕಾರ್ಯದ ಸಿಬ್ಬಂದಿ ಕಡ್ಡಾಯವಾಗಿ ಗುರುತಿನ ಚೀಟಿ ಧರಿಸಬೇಕು ಎಂದು ಹೇಳಿದರು.
ಪರೀಕ್ಷಾ ದಿನಾಂಕಗಂದು ಸಂಬಂಧಿಸಿದ ಖಜಾನೆಗಳಿಂದ ಪ್ರಶ್ನೆಪತ್ರಿಕೆ ಸ್ವೀಕೃತಿ ಹಾಗೂ ವಿತರಣೆ ಕುರಿತು ಖಜಾನಾಧಿಕಾರಿಗಳು, ತಹಸೀಲ್ದಾರ್, ಬಿಇಒ, ವಿಶೇಷ ಪ್ರಶ್ನೆಪತ್ರಿಕೆ ಪಾಲಕರು ಸಮಯಪಾಲನೆ ಮಾಡಿ ಸಹಕರಿಸಬೇಕು. ವಿಶೇಷ ಪ್ರಶ್ನೆಪತ್ರಿಕೆ ಪಾಲಕರಿಗೆ ನಿತ್ಯ ಪೊಲೀಸ್ ಬೆಂಗಾವಲು ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಡಿಡಿಪಿಯು ಪಳನಿವೇಲು, ಅಧಿಕಾರಿ ಸಂತೋಷ್‌ಕುಮಾರ್ ಹಾಗೂ ವಿವಿಧ ಕಾಲೇಜುಗಳ ಪ್ರಾಚಾರ್ಯರು ಇದ್ದರು.
ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ದ್ವಿತೀಯ ಪಪೂ ಪರೀಕ್ಷೆ ಸಂಬಂಧ ಸೋಮವಾರ ಹಮ್ಮಿಕೊಂಡಿದ್ದ ಪೂರ್ವಸಿದ್ಧ್ದತಾ ಸಭೆಯಲ್ಲಿ ಎಡಿಸಿ ಶೀಲವಂತ ಶಿವಕುಮಾರ, ಡಿಡಿಪಿಯು ಪಳನಿವೇಲು, ಸಂತೋಷ್‌ಕುಮಾರ್ ವಿವಿಧ ಕಾಲೇಜುಗಳ ಪ್ರಾಚಾರ್ಯರಿದ್ದರು.