ದಾವಣಗೆರೆಯಲ್ಲಿ ಹಮ್ಮಿಕೊಂಡಿದ್ದ, ಹಿರಿಯ ಸಾಹಿತಿ ದಿ.ಟಿ. ಗಿರಿಜಾ ಅವರ 12ನೇ ವರ್ಷದ ಸಂಸ್ಮರಣೆ ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ತೊಗಲೇರಿ, ಸಾಹಿತಿ ಬಾ.ಮ. ಬಸವರಾಜಯ್ಯ, ಬಿ. ದಿಳ್ಯೆಪ್ಪ, ಟಿ.ಎಸ್. ಶೈಲಜಾ, ಸತ್ಯಭಾಮಾ ಮಂಜುನಾಥ್, ಸುಮತಿ ಜಯಪ್ಪ ಇತರರಿದ್ದರು.  
ದಾವಣಗೆರೆ

ಬಂಡಾಯ ಹಣೆಪಟ್ಟಿಯಿಂದ ದೂರವಿದ್ದ ಟಿ. ಗಿರಿಜಾ

ಪ್ರಮುಖ ಮುಖ್ಯಾಂಶಗಳು

  • ಸ್ತ್ರೀ ಮೇಲಿನ ದೌರ್ಜನ್ಯಕ್ಕೆ ತೋರಿದ್ದ ಪ್ರತಿರೋಧ
  • ಸಾಹಿತಿ ಬಾ.ಮ. ಬಸವರಾಜಯ್ಯ ಅನಿಸಿಕೆ
  • ಹನ್ನೆರಡನೇ ವರ್ಷದ ಸಂಸ್ಮರಣೆ ಕಾರ್ಯಕ್ರಮ
ದಾವಣಗೆರೆ: ಅಂಗವೈಕಲ್ಯ ಮೆಟ್ಟಿ, ಬರವಣಿಗೆ ಮೂಲಕ ಹೆಣ್ಣಿನ ನೋವು-ಸಂವೇದನೆ ತೆರೆದಿಟ್ಟವರು ಸಾಹಿತಿ ದಿ.ಟಿ. ಗಿರಿಜಾ. ಬಂಡಾಯ ಹಣೆಪಟ್ಟಿ ಇಲ್ಲದೆ, ಹವಾನಿಯಂತ್ರಿತ ಕೊಠಡಿಯಲ್ಲಿ ಕೂರದೆ ಸಾಹಿತ್ಯದಲ್ಲಿ ತೊಡಗಿಸಿಕೊಂಡ ಅವರ ನಡೆ ಗಮನಾರ್ಹ ಎಂದು ಸಾಹಿತಿ ಬಾ.ಮ. ಬಸವರಾಜಯ್ಯ ಹೇಳಿದರು.
ವನಿತಾ ಸಾಹಿತ್ಯ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕ ಹಾಗೂ ಸಂಸ್ಕಾರ ಭಾರತೀ ಕರ್ನಾಟಕ ಸಹಯೋಗದಲ್ಲಿ ಇಲ್ಲಿನ ವನಿತಾ ಸಮಾಜದಲ್ಲಿ ಹಮ್ಮಿಕೊಂಡಿದ್ದ, ಹಿರಿಯ ಸಾಹಿತಿ ದಿ.ಟಿ. ಗಿರಿಜಾ ಅವರ 12ನೇ ವರ್ಷದ ಸಂಸ್ಮರಣೆ ಕಾರ್ಯಕ್ರಮದಲ್ಲಿ ದತ್ತಿ ಉಪನ್ಯಾಸ ನೀಡಿದರು.
ಬಹುತೇಕ ಸಾಹಿತಿಗಳು ಬಂಡಾಯ ಹಣೆಪಟ್ಟಿ ಹಚ್ಚಿಕೊಂಡು ಓಡಾಡುವ ಹಾಗೂ ಹವಾನಿಯಂತ್ರಿತ ಕೊಠಡಿಯಲ್ಲಿ ಕೂರುವವರೇ ಹೆಚ್ಚು. ಅದಕ್ಕೆ ವಿರುದ್ಧವಾಗಿ ಟಿ.ಗಿರಿಜಾ ಸಾಹಿತ್ಯದ ಬದುಕು ನಡೆಸಿದರು. ಲಲಿತಮ್ಮ ಡಾ. ಚಂದ್ರಶೇಖರ್, ಅರುಂಧತಿ ರಮೇಶ್, ಸಂಧ್ಯಾಸುರೇಶ್ ಸೇರಿ ಆ ಕಾಲಘಟ್ಟದ ಯುವ ಬರಹಗಾರ್ತಿಯರಿಗೆ ಸ್ಪೂರ್ತಿ ಆಗಿದ್ದರು ಎಂದರು.
ಗಿರಿಜಾ ಅವರ ಬರಹಗಳಲ್ಲಿ ಹೆಣ್ಣಿನ ಮೇಲಿನ ದೌರ್ಜನ್ಯಕ್ಕೆ ಪ್ರತಿರೋಧವಿತ್ತು. ಆರೋಗ್ಯ ಇಲಾಖೆಯಲ್ಲಿ ದುಡಿಯುತ್ತಲೇ ಅವಿಭಜಿತ ಚಿತ್ರದುರ್ಗ ಜಿಲ್ಲೆಯಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ಹೀಗಾಗಿ ಅವರಿಗೆ ಇತಿಹಾಸದ ಆಸಕ್ತಿ ಬೆಳೆಯಲು ಕಾರಣವಾಯಿತು. ಹಳ್ಳಿ-ಹಳ್ಳಿ ಸುತ್ತಿ ಅಲ್ಲಿನ ಸಾಮಾಜಿಕ, ಐತಿಹಾಸಿಕ ಸ್ಥಿತಿಗಳನ್ನು ದಾಖಲಿಸುತ್ತಿದ್ದರು ಎಂದು ಹೇಳಿದರು.
ಡಾ. ಬಿ. ರಾಜಶೇಖರಪ್ಪ, ಡಾ. ಲಕ್ಷ್ಮ್ಮಣ ತೆಲಗಾವಿ ಮೊದಲಾದವರ ಒಡನಾಟದಿಂದ ಐತಿಹಾಸಿಕ ಬರಹಗಳ ಕಡೆ ಒಲವು ತೋರಿ, ದುರ್ಗದ ನಾಗತಿಯರು, ದುರ್ಗೋತ್ಸವ, ದುರ್ಗದ ದಿಗ್ವಿಜಯ ಮೊದಲಾದ ಕೃತಿಗಳನ್ನು ರಚಿಸಿದರು. ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲಾದರ್ಶಿನಿ, ಭಾರತದ ನದಿಗಳು ಹೀಗೆ ಮಹತ್ವದ ಗ್ರಂಥಗಳನ್ನೂ ಹೊರತಂದರು. ಬೆಂಕಿಗಿಟ್ಟ ಹೂವು, ದೇವರ ಬಸವಿ ಕಾದಂಬರಿಗಳಲ್ಲಿ ಪ್ರಸ್ತುತ ಸ್ವಾರ್ಥ ಸಮಾಜದ ವಿರುದ್ಧ ಕಿಡಿಕಾರಿದ್ದಾರೆ ಎಂದು ಸ್ಮರಿಸಿದರು.
ಗಿರಿಜಾ ಅಧ್ಯಯನಶೀಲತೆಗೆ ಒತ್ತು ನೀಡಿದ್ದರು. ತಮಗೆ ಅನಿಸಿದ ಅನಿಸಿಕೆಗಳನ್ನು ಸಾಹಿತ್ಯದಲ್ಲಿ ಸಾಕಾರಗೊಳಿಸುವ ಕಲೆಯಲ್ಲಿ ನಿಪುಣರಾಗಿದ್ದರು. ಇದನ್ನು ಈಗಿನ ಲೇಖಕ, ಲೇಖಕಿಯರು ಅರಿಯಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ತೊಗಲೇರಿ, ಟಿ. ಗಿರಿಜಾ ಅವರು ಮಾತೃಹೃದಯಿ ಆಗಿದ್ದರು. ಸಮಾಜದ ಕಷ್ಟ ಕಾರ್ಪಣ್ಯಗಳನ್ನು ತಮ ಬರಹದ ಮೂಲಕ ಹೊರತಂದಿದ್ದಾರೆ. ಅವರ ಸೊಸೆ ಶೈಲಜಾ ಅವರ ಬರಹಗಳನ್ನು ಮರು ಮುದ್ರಣ ಮಾಡುತ್ತಿರುವುದು ಸ್ತುತ್ಯಾರ್ಹ ಎಂದರು.
ಲೇಖಕಿ ಟಿ.ಎಸ್. ಶೈಲಜಾ ಮಾತನಾಡಿ ನೈಜವಾದ ಕತೆಗಳನ್ನು ಗಿರಿಜಾ ಅತ್ತೆ ಬರೆದಿದ್ದಾರೆ. ಇತಿಹಾಸಕಾರರ ಸಹವಾಸದಿಂದ ಇತಿಹಾಸದ ಲೇಖನಗಳನ್ನು ಬರೆಯುವ ತುಡಿತ ಅವರಲ್ಲಿ ಮೂಡಿತು. ಅವರಿಂದ ನಾನು ಬರೆಯುವುದನ್ನು ಕಲಿತೆ. ಅವರ ಋಣ ನನ್ನ ಮೇಲಿದೆ ಎಂದರು.
ಸಂಸ್ಕಾರ ಭಾರತೀ ಜಿಲ್ಲಾಧ್ಯಕ್ಷ ಬಿ. ದಿಳ್ಯೆಪ್ಪ ಮಾತನಾಡಿ ಸಾಮಾಜಿಕ ಜಾಲತಾಣಗಳಲ್ಲಿ ಗಿರಿಜಕ್ಕ ಸೇರಿ ಜಿಲ್ಲೆಯ ಎಲ್ಲಾ ಸಾಹಿತಿಗಳ ಕೃತಿ,
ವ್ಯಕ್ತಿಗತ ಪರಿಚಯ ಆಗಬೇಕು ಎಂದು ಹೇಳಿದರು.
ವನಿತಾ ಸಾಹಿತ್ಯ ವೇದಿಕೆ ಅಧ್ಯಕ್ಷೆ ಸತ್ಯಭಾಮಾ ಮಂಜುನಾಥ್,ಕಸಾಪ ತಾಲೂಕು ಅಧ್ಯಕ್ಷೆ ಸುಮತಿ ಜಯಪ್ಪ ಮಾತನಾಡಿದರು.
ಉಮಾ ಮಹದೇವ್ ಪ್ರಾರ್ಥಿಸಿದರು. ಎ.ಬಿ.ರುದ್ರಮ್ಮ ಸ್ವಾಗತಿಸಿದರು. ದೇವಿಕಾ ಸುನಿಲ್ ವಂದಿಸಿದರು. ಸಂಧ್ಯಾ ಸುರೇಶ್ ಕಾರ್ಯಕ್ರಮ ನಿರೂಪಿಸಿದರು.