ಹೊನ್ನಾಳಿ ಪಟ್ಟಣದ ಹೊರ ವಲಯದಲ್ಲಿರುವ ಮಲ್ಲದೇವರಕಟ್ಟೆಯ ಸರ್ಕಾರಿ ಜಮೀನಿನಲ್ಲಿ ವಸತಿ ರಹಿತರಿಗೆ ನಿವೇಶನ ನೀಡಲು ಸರ್ವೆ ನಡೆಸಲಾಯಿತು. ಎಸಿ ಎಚ್.ಬಿ. ಚನ್ನಪ್ಪ, ತಹಸೀಲ್ದಾರ್ ರಾಜೇಶ್‌ಕುಮಾರ್, ಪುರಸಭೆ ಮುಖ್ಯಾಧಿಕಾರಿ ಲೀಲಾವತಿ ಇತರರು ಇದ್ದರು.Survey
- ಉಪವಿಭಾಗಾಧಿಕಾರಿ ಎಚ್.ಬಿ. ಚನ್ನಪ್ಪ ನೇತೃತ್ವದಲ್ಲಿ ಸರ್ವೇ
- ವಸತಿ ರಹಿತರಿಗೆ ಸೂರು ಕಲ್ಪಿಸಿಕೊಡುವ ಉದ್ದೇಶ
ಹೊನ್ನಾಳಿ: ಪಟ್ಟಣದ ಪುರಸಭೆ ವ್ಯಾಪ್ತಿಯ ನಿವೇಶನ ರಹಿತರಿಗೆ ವಸತಿ ಕಲ್ಪಿಸಿಕೊಡುವ ಉದ್ದೇಶದಿಂದ ತಾಲೂಕಿನ ಸುಂಕದಕಟ್ಟೆ ಬಳಿಯ ಮಲ್ಲದೇವರ ಕಟ್ಟೆಯಲ್ಲಿ ಮರಗಳ ಸರ್ವೆ ಹಾಗೂ ಮಾರ್ಕ್ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಗುರುವಾರ ಬೆಳಗ್ಗೆ ಉಪವಿಭಾಗಾಧಿಕಾರಿ ಎಚ್.ಬಿ. ಚನ್ನಪ್ಪ ನೇತೃತ್ವದಲ್ಲಿ ತಹಸೀಲ್ದಾರ್ ರಾಜೇಶ್‌ಕುಮಾರ್, ಪುರಸಭೆ ಮುಖ್ಯಾಧಿಕಾರಿ ಲೀಲಾವತಿ ಹಾಗೂ ಅರಣ್ಯಾಧಿಕಾರಿ ಕಿಶೋರ್‌ನಾಯ್ಕ ಸಮ್ಮುಖದಲ್ಲಿ ಸರ್ವೆ ಆರಂಭವಾಯಿತು.
ನಂತರ ಉಪವಿಭಾಗಾಧಿಕಾರಿ ಎಚ್.ಬಿ. ಚನ್ನಪ್ಪ ಮಾತನಾಡಿ, ಸರ್ಕಾರದ ನಿರ್ದೇಶನದಂತೆ ಸರ್ವೆ ನಂ 4ರ 29.17ಎಕರೆಯಲ್ಲಿ ಯಾವ ಜಾತಿಯ ಹಾಗೂ ಎಷ್ಟು ಮರಗಳಿವೆ ಎಂದು ಮಾರ್ಕ್ ಮಾಡಲಾಗುವುದು. ನಂತರ ಅರಣ್ಯ ಇಲಾಖೆ ಸಹಕಾರದಿಂದ ಅವುಗಳನ್ನು ತೆರವು ಮಾಡಲಾಗುವುದು ಎಂದರು.
ಈಗಾಗಲೇ 20.17ಎಕರೆಯಲ್ಲಿ ನಿವೇಶನ ರಹಿತರಿಗೆ ವಸತಿ ಕಲ್ಪಿಸಿಕೊಡಲು ಮಂಜೂರಾದ ಈ ಜಮೀನಿನಲ್ಲಿ ಬಡಾವಣೆ ನಿರ್ಮಾಣಕ್ಕಾಗಿ ಸರ್ಕಾರ 20 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದೆ. ಅದರಲ್ಲಿ ಚರಂಡಿ, ರಸ್ತೆ ನಿರ್ಮಾಣ ಮಾಡಲಾಗುವುದು ಎಂದರು.
ಪುರಸಭೆ ಮುಖ್ಯಾಧಿಕಾರಿ ಲೀಲಾವತಿ ಮಾತನಾಡಿ, 29.17ಎಕರೆಯಲ್ಲಿ 20್ಡ30 ಅಳತೆ ಗುರುತು ಮಾಡಲಾಗುವುದು. ಅರ್ಹರಿಗೆ ಮಾತ್ರ ನಿವೇಶನ ಹಂಚಿಕೆ ಮಾಡಲಾಗುತ್ತದೆ. ಈಗಾಗಲೇ ಅನೇಕ ಅರ್ಜಿಗಳು ಬಂದಿದ್ದು, ಅವುಗಳನ್ನೇ ಪರಿಗಣಿಸಬೇಕೇ ಅಥವಾ ಮತ್ತೊಮ್ಮೆ ಅರ್ಜಿ ಕರೆಯಬೇಕೇ ಎಂದು ಶಾಸಕರೊಂದಿಗೆ ಚರ್ಚಿಸಲಾಗುವುದು ಎಂದರು.
ಪುರಸಭೆ ವ್ಯಾಪ್ತಿಯ ನಿವೇಶನ ರಹಿತರಿಗೆ ನಿವೇಶನ ಒದಗಿಸಲು ಜಮೀನು ವಶಕ್ಕೆ ಪಡೆಯುವ ವೇಳೆ ಸುಂಕದಕಟ್ಟೆ ಗ್ರಾಮಸ್ಥರು ವಿರೋಧಿಸಿ ಪ್ರತಿಭಟನೆ ನಡೆಸಿದ್ದನ್ನು ಸ್ಮರಿಸಿದರು. ಇತ್ತ ಪುರಸಭೆಯ ವ್ಯಾಪ್ತಿಯ ಸಹಸ್ರಾರು ಜನರು ಅರ್ಜಿ ಸಲ್ಲಿಸಿ ಇಂದಲ್ಲ ನಾಳೆ ನಮಗೂ ನಿವೇಶನ ಸಿಗುತ್ತದೆ ಎಂದು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ ಎಂದರು.
ರಾಜಕೀಯ, ಪ್ರಭಾವಿಗಳ ಒತ್ತಡಕ್ಕೆ ಒಳಗಾಗದೇ ಅರ್ಹರಿಗೆ ನಿವೇಶನ ನೀಡಿದಲ್ಲಿ ಸರ್ಕಾರದ ಯೋಜನೆ ಸಾರ್ಥಕವಾಗುತ್ತದೆ ಎಂದು ವಸತಿ ರಹಿತರು ಹೇಳಿದರು.
ಸುಂಕದಕಟ್ಟೆ ಗ್ರಾಮದ ರೈತ ಮುಖಂಡ ಕರಿಬಸಪ್ಪ ಸ್ಥಳಕ್ಕೆ ದೌಡಾಯಿಸಿ, ಇದು ನಮ್ಮ ಗ್ರಾಮದ ಜಾನುವಾರುಗಳಿಗಾಗಿ ಮೀಸಲಿರಿಸಿದ ಜಾಗ, ಇಲ್ಲಿ ನಿವೇಶನ ಮಾಡುವುದನ್ನು ಹಿಂದಿನಿಂದಲೂ ವಿರೋಧಿಸುತ್ತ ಬಂದಿದ್ದೇವೆ. ಈಗಲೂ ವಿರೋಧಿಸುತ್ತೇವೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸಿ, ಸರ್ಕಾರದ ಆದೇಶವನ್ನು ನಾವು ಪಾಲಿಸುತ್ತಿದ್ದೇವೆ ಎಂದರು.
ತಹಸೀಲ್ದಾರ್ ರಾಜೇಶ್‌ಕುಮಾರ್, ಅರಣ್ಯ ಇಲಾಖೆಯ ಕಿಶೋರ್‌ನಾಯ್ಕ, ಸಹಾಯಕ ಸರ್ವೆ ಅಧಿಕಾರಿ ಮಲ್ಲಿಕಾರ್ಜುನ ಬಾನೆಸೂಡೆ, ತಾಲೂಕು ಸರ್ವೆಯರ್ ರಮೇಶ್, ಪುರಸಭೆ ಇಂಜಿನಿಯರ್ ದೇವರಾಜ್, ಶಿವಣ್ಣ, ರಾಜಸ್ವ ನಿರೀಕ್ಷಕ ರಮೇಶ್, ಜಯಪ್ರಕಾಶ್, ಪುನಿತ್, ಆಕಾಶ ಇತರರು ಇದ್ದರು.