ಹೊನ್ನಾಳಿಗೆ ಭಾನುವಾರ ಆಗಮಿಸಿದ ಸುತ್ತೂರು ಧರ್ಮ ಜಾಗೃತಿ ರಥವನ್ನು ಸ್ವಾಗತಿಸಲಾಯಿತು. ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಶ್ರೀಪತಿ ಪಂಡಿತಾರಾಧ್ಯ ಸ್ವಾಮೀಜಿ, ಕೆ.ಜಿ. ನಿಂಗಪ್ಪ, ಎಚ್.ಎ. ಉಮಾಪತಿ ಇತರರಿದ್ದರು.Rath Yatra
- ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀ ಹೇಳಿಕೆ
- ಧರ್ಮ ಜಾಗೃತಿ ರಥಕ್ಕೆ ಸ್ವಾಗತ
ಹೊನ್ನಾಳಿ: ಸುತ್ತೂರು ಮಠ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಸಮಾಜದ ಎಲ್ಲ ಬಡ ವರ್ಗಗಳಿಗೆ ಆಸರೆಯಾಗಿದೆ ಎಂದು ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಹೊನ್ನಾಳಿಗೆ ಭಾನುವಾರ ಆಗಮಿಸಿದ ಧರ್ಮ ಜಾಗೃತಿ ರಥವನ್ನು ಸ್ವಾಗತಿಸಿ, ಧರ್ಮಸಭೆಯಲ್ಲಿ ಮಾತನಾಡಿ, ಮಳವಳ್ಳಿಯಲ್ಲಿ ಜ.1 ರಿಂದ 20 ರವರೆಗೆ ಆದಿ ಜಗದ್ಗುರು ಶಿವರಾತ್ರಿ ಶಿವಯೊಗಿಗಳ 1066ನೇ ಜಯಂತಿ ಕಾರ್ಯಕ್ರಮದ ಅಂಗವಾಗಿ ನಡೆಯುವ ಜಾತ್ರಾ ಮಹೋತ್ಸವದ ನಿಮ್ಮಿತ್ತ ಪ್ರತಿವರ್ಷ ಜನರಲ್ಲಿ ಧಾರ್ಮಿಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಸುತ್ತೂರುಮಠ ನಾಡಿನ ಯಾವುದೇ ಭಾಗದಿಂದ ಬಂದ ಸಂತರಿಗೆ, ಭಕ್ತರಿಗೆ, ಆಶ್ರಯ ಅಥವಾ ಸಹಾಯ ಕೇಳಿಕೊಂಡು ಬಂದವರಿಗೆ ಆತ್ಮೀಯವಾಗಿ ಬರಮಾಡಿಕೊಂಡು ಅವರಿಗೆ ಸತ್ಕರಿಸಿದೆ ಎಂದು ನುಡಿದರು.
ಧರ್ಮದ ಆದಿಯಲ್ಲಿ ಬದುಕಿದ್ದರೆ ಮಾತ್ರ ಆತ ಸನ್ಮಾರ್ಗದಲ್ಲಿ ಮುನ್ನಡೆಯಲು ಸಾಧ್ಯ. ಅಧರ್ಮದಿಂದ ಹೋದರೆ ಮಾರ್ಗವೇ ದುರ್ಗಮವಾಗುತ್ತದೆ ಎಂದು ತಿಳಿಸಿದರು.
ಕೊಣಂದೂರು ಮಠದ ಶ್ರೀಪತಿ ಪಂಡಿತಾರಾಧ್ಯ ಸ್ವಾಮೀಜಿ ಮಾತನಾಡಿ, ನಾಡಿನ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಶಿಕ್ಷಣ ಸಂಸ್ಥೆಗಳನ್ನು ತೆಗೆದು ದೀನದಲಿತರಿಗೆ ಶಿಕ್ಷಣ ನೀಡುವಲ್ಲಿ ಸುತ್ತೂರುಮಠ ಮೊದಲಿಗೆ ನಿಲ್ಲುತ್ತದೆ ಎಂದು ಹೇಳಿದರು.
ಹೊನ್ನಾಳಿಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಸಂಚಾಲಕಿ ಜ್ಯೋತಿ ಅಕ್ಕ ಮಾತನಾಡಿ, ಜೀವನದಲ್ಲಿ ಯಾವಾಗಲೂ ಸದಾಚಾರಗಳನ್ನು ಅಳವಡಿಸಿಕೊಂಡು ತಮ್ಮ ಜೀವನ ಸಾಗಿಸಿದರೆ ನಮ್ಮ ಬದುಕು ಸದಾ ಸಂತೃಪ್ತಿಯಿಂದ ಕೂಡಿರುತ್ತದೆ ಎಂದರು.
ಶ್ರೀಮಠದ ಕೆ.ಜಿ. ನಿಂಗಪ್ಪ, ಕಾಂಗ್ರೆಸ್ ಮುಖಂಡ ಎಚ್.ಎ. ಉಮಾಪತಿ ಮಾತನಾಡಿದರು. ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆಗಮಿಸಿ ರಥಕ್ಕೆ ಮಾಲಾರ್ಪಣೆ ಮಾಡಿದರು.
ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಬೆನಕನಹಳ್ಳಿ ವೀರಣ್ಣ, ದೊಡ್ಡೇರಿ ರವಿಕುಮಾರ್, ಅರಕೆರೆ ಮಧುಗೌಡ, ಅರಕೆರೆ ಗ್ರಾಮಸ್ಥರು ಇತರರು ಇದ್ದರು