ಎನ್.ಡಿ. ಶಾಂತಕುಮಾರ ದಾವಣಗೆರೆ
ಮುಂಗಾರು ಮಳೆ ವೈಫಲ್ಯದಿಂದ ಭದ್ರಾ ಜಲಾಶಯ ಭರ್ತಿಯಾಗದ ಕಾರಣ ಅಚ್ಚುಕಟ್ಟು ರೈತರು ಮುಂಗಾರು ಭತ್ತದ ಬೆಳೆಯನ್ನು ಒಲ್ಲದ ಮನಸ್ಸಿನಿಂದಲೇ ತ್ಯಾಗ ಮಾಡಿದ್ದಾರೆ. ಹಿಂಗಾರು ಮಳೆ ಕೂಡ ಕೈಕೊಟ್ಟಿದ್ದು, ಅಲ್ಪಸ್ವಲ್ಪ ಹಿಂಗಾರು ಬೆಳೆ ಕೂಡ ಕೈಗೆ ಸಿಗುತ್ತಿಲ್ಲ. ಜಲಾಶಯದಲ್ಲಿ ನೀರಿನ ಕೊರತೆ ಇದೆ ಎಂಬ ಕಾರಣಕ್ಕೆ ಅಚ್ಚುಕಟ್ಟು ರೈತರಿಗೆ ಮುಂಗಾರು ಕೃಷಿ ಮಾಡಬೇಡಿ ಎಂದು ಸರ್ಕಾರ ಮಾಡಿಕೊಂಡ ಮನವಿಗೆ ಅಚ್ಚುಕಟ್ಟು ರೈತರು ಸ್ಪಂದಿಸಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಯ ಪ್ರಾಯೋಗಿಕ ಪರೀಕ್ಷೆಗೆ ಭದ್ರಾ ಜಲಾಶಯದಿಂದ ಎರಡು ಬಾರಿ ಒಟ್ಟು 4 ಟಿಎಂಸಿ ನೀರು ಹರಿಸಲಾಗಿದೆ. ಬೇಸಿಗೆಯಲ್ಲಿ ಮತ್ತೆ ಕುಡಿಯುವ ನೀರಿಗಾಗಿ ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಹರಿಸಬೇಕು ಎಂಬ ಬೇಡಿಕೆ ಬರಬಹುದು. ಬಂದರೆ ಈ ಬೇಡಿಕೆ ನ್ಯಾಯಸಮ್ಮತವಲ್ಲ ಎಂದು ಹೇಳಲಾಗದು.
ಮುಂದಿನ ಆಗಸ್ಟ್ವರೆಗೆ ಕುಡಿಯುವ ನೀರಿಗಾಗಿ ಅಗತ್ಯ ಪ್ರಮಾಣದ ನೀರನ್ನು ಜಲಾಶಯದಲ್ಲಿ ಕಾಯ್ದಿಟ್ಟುಕೊಳ್ಳಬೇಕು ಎಂದು ಸರ್ಕಾರ ನಿರ್ದೇಶನ ನೀಡಿದೆ. ಹೀಗಾಗಿ ಭದ್ರಾ ಅಚ್ಚುಕಟ್ಟು ರೈತರನ್ನು ಕಾಡುತ್ತಿರುವ ಪ್ರಶ್ನೆ ಎಂದರೆ, ಮುಂಗಾರು ಬೆಳೆ ಕೈ ಬಿಟ್ಟಾಗಿದೆ. ಹಿಂಗಾರು ಭತ್ತದ ಬೆಳೆಗೆ ನೀರು ಸಿಗಲಿದೆಯೇ? ಸಿಗದಿದ್ದರೆ ಮುಂದೇನು? ಎಂಬುದು. ಭದ್ರಾ ಯೋಜನೆ ವ್ಯಾಪ್ತಿಯಲ್ಲಿ ಚಿಕ್ಕಮಗಳೂರು (ತರೀಕೆರೆ) ವಿಜಯನಗರ (ಹರಪನಹಳ್ಳಿ), ಶಿವಮೊಗ್ಗ (ಭಾಗಶಃ) ಮತ್ತು ದಾವಣಗೆರೆ ಜಿಲ್ಲೆ (ಜಗಳೂರು ಹೊರತುಪಡಿಸಿ) ಬರುತ್ತವೆ. ಆದರೆ ಈ ಯೋಜನೆಯಲ್ಲಿ ಅತಿ ಹೆಚ್ಚು ಭೂಮಿ ನೀರಾವರಿಗೊಳಪಟ್ಟಿರುವುದು ದಾವಣಗೆರೆ ಜಿಲ್ಲೆ. ಜಿಲ್ಲೆಯ ಭತ್ತ ಬೆಳೆಗಾರರು ಮುಂಗಾರು ಬೆಳೆ ಬೆಳೆ ತ್ಯಾಗ ಮಾಡಿದ್ದಾರೆ. ಒಂದು ವೇಳೆ ಬೇಸಿಗೆ ಬೆಳೆಗೂ ನೀರು ಸಿಗದಿದ್ದರೆ ಸಣ್ಣ ಮತ್ತು ಅತಿ ಸಣ್ಣ ರೈತರ ಬದುಕಿನ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ.
ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಹಂಚಿಕೆ ಮಾಡಿರುವ ಪ್ರಕಾರ ತುಂಗಾ ಜಲಾಶಯದಿಂದ ಭದ್ರಾ ಜಲಾಶಯಕ್ಕೆ 17.4 ಟಿಎಂಸಿ ನೀರು ಲಿಫ್ಟ್ ಮಾಡಬೇಕು. ನಂತರ ಭದ್ರಾ ಜಲಾಶಯದಿಂದ ಭದ್ರಾ ಮೇಲ್ದಂಡೆ ಯೋಜನೆಗೆ 29 ಟಿಎಂಸಿ ನೀರು ಹರಿಸಬೇಕು. ತುಂಗಾದಿಂದ ಭದ್ರಾ ಜಲಾಶಯಕ್ಕೆ ನೀರು ಲಿಫ್ಟ್ ಮಾಡುವ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ. ತುಂಗಾದಿಂದ ಭದ್ರಾಗೆ ನೀರು ಲಿಫ್ಟ್ ಮಾಡುವ ಪೂರ್ವದಲ್ಲೇ ಭದ್ರಾ ಜಲಾಶಯದಿಂದ ಈಗಾಗಲೇ 4 ಟಿಎಂಸಿ ನೀರನ್ನು (ಎರಡು ಹಂತದಲ್ಲಿ) ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಹರಿಸಲಾಗಿದೆ. ಬೇಸಿಗೆ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಸಹಜವಾಗಿ ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಯ ಜನರಿಂದ ಬೇಡಿಕೆ ಬರಲಿದೆ. ಇಂತಹ ಸ್ಥಿತಿಯಲ್ಲಿ ಭದ್ರಾ ಅಚ್ಚುಕಟ್ಟಿಗೆ ಬೇಸಿಗೆ ಬೆಳೆಗೆ ನೀರು ಕೊಡಲು ಸಾಧ್ಯವೇ? ಎಂಬ ಪ್ರಶ್ನೆ ಕಾಡುವುದು ಸಹಜ.
ಜಿಲ್ಲೆಯ ಭದ್ರಾ ಅಚ್ಚುಕಟ್ಟು ಭಾಗದ ರೈತ ಮುಖಂಡರಲ್ಲಿ ಒಗ್ಗಟ್ಟಿನ ಕೊರತೆ ಕಾರಣ ಯಾವುದೇ ವಿಚಾರದಲ್ಲಿ ಸ್ಪಷ್ಟ ನಿಲುವು ತೆಗೆದು ಕೊಳ್ಳಲು ಸಾಧ್ಯವಾಗುತ್ತಿಲ್ಲ. ಮುಖಂಡರ ನಡು ವಿನ ಸಮನ್ವಯತೆ ಕೊರತೆಯಿಂದ ಅಚ್ಚುಕಟ್ಟು ರೈತರು ಸಮಸ್ಯೆ ಎದುರಿಸಬೇಕಾಗಿದೆ. ಮುಂಗಾರು ಹಂಗಾಮಿನ ಬೆಳೆಗೆ ನೀರು ಕೊಡುವ ವಿಚಾರದಲ್ಲೇ ಒಮ್ಮತ ಮೂಡಲಿಲ್ಲ. ಭಾರತೀಯ ರೈತ ಒಕ್ಕೂಟ ಜಿಲ್ಲಾ ಸಮಿತಿ ಮುಂಗಾರು ಭತ್ತದ ಬೆಳೆಗೆ ನೀರು ಕೊಡಬೇಕು ಎಂದು ಪ್ರತಿಪಾದಿಸಿತು. ಅಚ್ಚುಕಟ್ಟು ಕೊನೆಯ ಭಾಗದ ರೈತ ಮುಖಂಡರ ಗುಂಪು ಮುಂಗಾರು ಬೆಳೆಗೆ ನೀರು ಬೇಡ, ಈಗಾಗಲೇ ಮುಂಗಾರು ಹಂಗಾಮಿನ ಭತ್ತ ನಾಟಿ ಸಮಯ ಮುಗಿದಿದೆ. ಈ ಹಂತದಲ್ಲಿ ನೀರು ಕೊಟ್ಟರೆ ಭತ್ತ ನಾಟಿ ವಿಳಂಬವಾಗಿ ರೋಗಭೀತಿ ಎದುರಾಗಲಿದೆ. ಇಳುವರಿಯೂ ಬರುವುದಿಲ್ಲ. ಈ ನೀರು ವ್ಯರ್ಥವಾದರೆ ಬೇಸಿಗೆ ಬೆಳೆಗೂ ನೀರು ಸಿಗುವುದಿಲ್ಲ. ಹೀಗಾಗಿ ಬೇಸಿಗೆ ಬೆಳೆಗೆ ಸತತವಾಗಿ ನೀರು ಕೊಡಿ ಎಂದು ಪ್ರತಿಪಾದಿಸಿತು. ಅಚ್ಚುಕಟ್ಟು ರೈತರ ನಡುವಿನ ಈ ಗೊಂದಲ ಸರ್ಕಾರಕ್ಕೆ ವರವಾಗಿ ಪರಿಣಮಿಸಿತು.
ಭದ್ರಾ ಅಚ್ಚುಕಟ್ಟು ಬೇಸಿಗೆ ಬೆಳೆಗೆ ನೀರು ಕೊಡಬೇಕಾದರೆ ಜಲಾಶಯದಲ್ಲಿ ಕನಿಷ್ಠ 55 ಟಿಎಂಸಿ ನೀರು ಸಂಗ್ರಹ ಇರಲೇಬೇಕು. ಇದು ಕುಡಿಯುವ ನೀರಿನ ಬೇಡಿಕೆಯಾಗಿರುವ 7 ಟಿಎಂಸಿ ನೀರನ್ನು ಒಳಗೊಂಡಿದೆ. ಡೆಡ್ ಸ್ಟೋರೇಜ್ 13.8 ಟಿಎಂಸಿಗಳಾಗಿದ್ದು, ಈ ನೀರು ಬಳಕೆ ಮಾಡಲು ಸಾಧ್ಯವಿಲ್ಲ. ಮೈಲಾರ ಜಾತ್ರೆ ಸೇರಿದಂತೆ ಕುಡಿಯುವ ನೀರಿಗಾಗಿ 7 ಟಿಎಂಸಿ ನೀರು ಮೀಸಲು ಇಡಲೇಬೇಕು. ಅಚ್ಚುಕಟ್ಟಿನ ಬೇಸಿಗೆ ಒಂದು ಅಂದಾಜಿನ ಪ್ರಕಾರ ಬೆಳೆಗೆ 32ರಿಂದ 35 ಟಿಎಂಸಿ ನೀರು ಬೇಕು. ಆಫ್ ಆ್ಯಂಡ್ ಆನ್ ಸಿಸ್ಟಮ್ನಲ್ಲಿ ನೀರು ಕೊಟ್ಟರೆ ಒಂದೆರಡು ಟಿಎಂಸಿ ನೀರು ಉಳಿಸಬಹುದು. ಶಿವರಾತ್ರಿ, ಯುಗಾದಿ ಸಮಯದಲ್ಲಿ ಅಲ್ಪಸ್ವಲ್ಪ ಮಳೆಯಾದರೆ ಅಲ್ಪ ಪ್ರಮಾಣದಲ್ಲಿ ನೀರಿನ ಬೇಡಿಕೆ ಕಡಿಮೆಯಾಗಬಹುದು. ಮುಂಗಾರಿನಲ್ಲೇ ಜಿಲ್ಲೆಯ ಹಲವೆಡೆ ನೀರಿನ ಸಮಸ್ಯೆ ಗಂಭೀರವಾಗಿದ್ದು, ಕೆಲವೆಡೆ ಟ್ಯಾಂಕರ್ಗಳ ಮೂಲಕ ನೀರು ಪೂರೈಕೆ ಮಾಡ ಲಾಗಿದೆ. ಇದನ್ನು ಗಮನಿಸಿದರೆ ಬೇಸಿಗೆ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗುವ ಎಲ್ಲ ಲಕ್ಷಣಗಳೂ ಇವೆ.
ಭದ್ರಾ ನೀರಿನ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಜಾಣ ನಡೆ ಅನುಸರಿಸುತ್ತಿದ್ದಾರೆ. ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಸಮಸ್ಯೆಯಾಗಬಾರದು ಎಂಬುದೇ ಅವರ ಲೆಕ್ಕಾಚಾರ. ಭಾರತೀಯ ರೈತ ಒಕ್ಕೂಟ ಬಿಜೆಪಿ ಮುಖಂಡರ ಹಿಡಿತದಲ್ಲೇ ಇದೆ. ಆದರೆ ರೈತ ಒಕ್ಕೂಟದ ನಿರ್ಣಯ ಬಿಜೆಪಿಯ ಒಂದು ಗುಂಪಿನ ತೀರ್ಮಾನವಾಗಿರುತ್ತದೆ. ಮತ್ತೊಂದು ಬಿಜೆಪಿ ಗುಂಪಿನಲ್ಲಿರುವ ಮುಖಂಡರು ತಮ್ಮ ತಮ್ಮ ವಿಧಾನಸಭಾ ಕ್ಷೇತ್ರದಲ್ಲಿನ ಪರಿಸ್ಥಿತಿ ಆಧರಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅಡಿಕೆ ಬೆಳೆಗಾರರೂ ಬೇಕು, ಭತ್ತದ ಬೆಳೆಗಾರರೂ ಬೇಕು. ಯಾರನ್ನೂ ಎದುರು ಹಾಕಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಕಾಂಗ್ರೆಸ್ ಮುಖಂಡರು ರಾಜ್ಯ ಸರ್ಕಾರದ ವಿರುದ್ಧ ಹೋಗುತ್ತಿಲ್ಲ. ನಮಗೆ ಜಿಲ್ಲೆಯ ರೈತರ ಹಿತವೇ ಮುಖ್ಯ ಎಂದು ಸರ್ಕಾರವನ್ನು ಪ್ರಶ್ನೆ ಮಾಡುವಂತಹ ನಾಯಕತ್ವವೂ ಇಲ್ಲ.
ತುಂಗಾ ಜಲಾಶಯಿಂದ ಭದ್ರಾ ಜಲಾಶಯಕ್ಕೆ 17.4 ಟಿಎಂಸಿ ನೀರನ್ನು ಲಿಫ್ಟ್ ಮಾಡುವ ಯೋಜನೆ ಡಿಸೆಂಬರ್ ವೇಳೆಗೆ ಅನುಷ್ಠಾನಕ್ಕೆ ಬರಲಿದೆ ಎಂದು ಸರ್ಕಾರ ಭರವಸೆ ನೀಡಿದೆ. ಸರ್ಕಾರದ ಭರವಸೆಯಂತೆ ಡಿಸೆಂಬರ್ಗೆ ಪೂರ್ಣಗೊಂಡರೂ ಕೂಡ ತಕ್ಷಣ ತುಂಗಾ ಜಲಾಶಯದಿಂದ ಭದ್ರಾ ಜಲಾಶಯಕ್ಕೆ 17.5 ಟಿಎಂಸಿ ನೀರನ್ನು ಲಿಫ್ಟ್ ಮಾಡಲಾಗದು. ತುಂಗಾ ಜಲಾಶಯ ಭರ್ತಿಯಾಗುವವರೆಗೆ ಕಾಯಲೇಬೇಕು.
ಕುಡಿಯುವ ನೀರು ಪೂರೈಕೆ ಉದ್ದೇಶಕ್ಕೆ ಭದ್ರಾ ಮೇಲ್ದಂಡೆ ಯೋಜನೆಗೆ ಸರ್ಕಾರ ಭದ್ರಾ ಜಲಾಶಯದಿಂದ ಮೂರು ಟಿಎಂಸಿ ನೀರು ಬಿಡುಗಡೆ ಮಾಡುವ ನಿರ್ಧಾರ ಕೈಗೊಂಡಾಗ ದಾವಣಗೆರೆ ಜಿಲ್ಲೆಯ ಮುಖಂಡರು ನೀರು ಬಿಡುಗಡೆ ಮಾಡುವುದು ಬೇಡ ಎಂದು ವಿರೋಧ ವ್ಯಕ್ತಪಡಿಸಿದರೇ ಹೊರತು ಒಟ್ಟಾಗಿ ಸಿಎಂ ಬಳಿ ನಿಯೋಗ ತೆರಳಿ ತುಂಗಾ ಜಲಾಶಯದಿಂದ ಭದ್ರಾ ಜಲಾಶಯಕ್ಕೆ ನೀರು ಲಿಫ್ಟ್ ಮಾಡುವ ಯೋಜನೆಗೆ ಅಗತ್ಯ ಅನುದಾನ ಬಿಡುಗಡೆ ಮಾಡಿ ಎಂದು ಪಟ್ಟು ಹಿಡಿಯಲಿಲ್ಲ. ಅನುದಾನ ಬಿಡುಗಡೆ ಮಾಡಿ ಎಂದು ಸಿಎಂಗೆ ಮನವಿ ಸಲ್ಲಿಸಿ ಪತ್ರಿಕಾ ಹೇಳಿಕೆ ಬಿಡುಗಡೆಗೆ ಸೀಮಿತರಾದರೇ ಹೊರತು ಗಟ್ಟಿಯಾಗಿ ನಿಲ್ಲಲಿಲ್ಲ. ಮನವಿ ಸಲ್ಲಿಸಿದ ಮಾತ್ರಕ್ಕೆ ಸರ್ಕಾರಗಳು ಸ್ಪಂದಿಸುವ ಗುಣ ಬೆಳೆಸಿಕೊಂಡಿದ್ದರೆ ಯಾವ ಯೋಜನೆಗಳೂ ಅತಂತ್ರ ಸ್ಥಿತಿಯಲ್ಲಿ ಇರುತ್ತಿರಲಿಲ್ಲ.
ಜಲಾಶಯದ ಗರಿಷ್ಠ ಮಟ್ಟ 186 ಅಡಿ (71.535 ಟಿಎಂಸಿ)
ಇಂದಿನ ಮಟ್ಟ 172.3 ( 55 ಟಿಎಂಸಿ)
ಡೆಡ್ ಸ್ಟೋರೇಜ್ - 13.8 ಟಿಎಂಸಿ
ಕುಡಿಯುವ ನೀರಿಗೆ - 7 ಟಿಎಂಸಿ
ಮುಂಗಾರು ಬೆಳೆಗೆ 30 ಟಿಎಂಸಿ ಅಗತ್ಯ
ಬೇಸಿಗೆ ಬೆಳೆಗೆ 32ರಿಂದ 35 ಟಿಎಂಸಿ ಬೇಕು
ಒಟ್ಟು ಅಚ್ಚುಕಟ್ಟು ಪ್ರದೇಶ - 1,05,570 ಹೆಕ್ಟೇರ್
ಚಿಕ್ಕಮಗಳೂರು ಜಿಲ್ಲೆ (ತರೀಕೆರೆ ತಾಲೂಕು ಮಾತ್ರ)
ದಾವಣಗೆರೆ ಜಿಲ್ಲೆ : 41,701.72 ಹೆಕ್ಟೇರ್
ವಿಜಯನಗರ ಜಿಲ್ಲೆ (ಹರಪನಹಳ್ಳಿ ತಾ. ಮಾತ್ರ) - 3922.15 ಹೆಕ್ಟೇರ್