ದಾವಣಗೆರೆಯಲ್ಲಿ ಶನಿವಾರ, ದಾವಣಗೆರೆ ದಕ್ಷಿಣ ಕ್ಷೇತ್ರದ ಮತದಾರರ ಯಾದಿ ಪರಿಷ್ಕರಣೆ ಸಂಬಂಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಸರ್ಕಾರದ ಕಾರ್ಯದರ್ಶಿ ಡಾ.ಶಮ್ಲಾ ಇಕ್ಬಾಲ್, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್, ಎಡಿಸಿ ಶೀಲವಂತ ಶಿವಕುಮಾರ, ಪಾಲಿಕೆ ಆಯುಕ್ತೆ ರೇಣುಕಾ ಇದ್ದರು.
- ರಾಜಕೀಯ ಪಕ್ಷಗಳಿಗೆ ವೀಕ್ಷಕಿ ಡಾ.ಶಮ್ಲಾ ಇಕ್ಬಾಲ್ ಸೂಚನೆ
- ದಾವಣಗೆರೆ ದಕ್ಷಿಣ ಮತದಾರರ ಯಾದಿ ಪರಿಷ್ಕರಣೆ ಸಭೆ
- ಫೆ.14ಕ್ಕೆ ಅಂತಿಮ ಪಟ್ಟಿ ಪ್ರಕಟಿಸುವ ಬಗ್ಗೆ ಮಾಹಿತಿ
ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಮತದಾರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಸಂಬಂಧ ರಾಜಕೀಯ ಪಕ್ಷಗಳು 24ರ ಒಳಗಾಗಿ ಹಕ್ಕು, ಆಕ್ಷೇಪಣೆ ಸಲ್ಲಿಸಬಹುದು ಎಂದು ಸರ್ಕಾರದ ಕಾರ್ಯದರ್ಶಿ ಹಾಗೂ ಮತದಾರರ ಪಟ್ಟಿ ವೀಕ್ಷಕಿ ಡಾ.ಶಮ್ಲಾ ಇಕ್ಬಾಲ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ, ಜಿಲ್ಲಾಧಿಕಾರಿ ಹಾಗೂ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.
ಜ.3 ರಂದು ಪ್ರಕಟಿಸಲಾದ ಸಮಗ್ರ ಕರಡು ಮತದಾರರ ಪಟ್ಟಿಯನ್ನು ರಾಜಕೀಯ ಪಕ್ಷಗಳಿಗೆ ನೀಡಲಾಗಿದೆ. ಜ.11ರ ವಿಶೇಷ ಅಭಿಯಾನದಲ್ಲಿ 85 ಅರ್ಜಿಗಳು ಸ್ವೀಕೃತವಾಗಿವೆ. ಮುಂದಿನ ಅಭಿಯಾನವು ಜ.18 ರಂದು ನಡೆಯಲಿದೆ. ಫೆ. 14 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ತಿಳಿಸಿದರು.
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಈ ಹಿಂದೆ 217 ಮತಗಟ್ಟೆಗಳಿದ್ದವು. ನಿಯಮದಂತೆ 1200 ಕ್ಕಿಂತ ಹೆಚ್ಚು ಮತದಾರರಿರುವ ಕಡೆ ಹೊಸ ಮತಗಟ್ಟೆಗಳನ್ನು ಸೃಜಿಸಲಾಗಿದ್ದು, ಈಗ ಒಟ್ಟು 284 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ 24 ಮತಗಟ್ಟೆಗಳ ಸ್ಥಳ ಬದಲಾವಣೆ ಮಾಡಲಾಗಿದ್ದು, ರ‌್ಯಾಂಪ್ ಇತರೆ ಮೂಲ ಸೌಕರ್ಯ ಒದಗಿಸಲು ಕ್ರಮ ವಹಿಸಲಾಗಿದೆ ಎಂದರು.
ಪ್ರತಿ ಮತಗಟ್ಟೆ ಮಟ್ಟದಲ್ಲಿ ರಾಜಕೀಯ ಪಕ್ಷಗಳು ತಮ್ಮ ಏಜೆಂಟರನ್ನು ನೇಮಕ ಮಾಡಿ ಪಟ್ಟಿ ನೀಡಬೇಕು. ಇದರಿಂದ ಮೃತ ಮತದಾರರ ಹೆಸರು ಕೈಬಿಡುವುದು ಮತ್ತು ವಿಳಾಸ ಬದಲಾವಣೆ ಕಾರ್ಯ ಸುಲಭವಾಗಲಿದೆ. ಹೆಸರು ಸೇರ್ಪಡೆಗೆ ಯುವ ಮತದಾರರು ಹಾಗೂ ಕೈಬಿಟ್ಟು ಹೋದ ಅರ್ಹ ಮತದಾರರ ಹೆಸರನ್ನು ಸೇರಿಸಲು ಸಹಕರಿಸಬೇಕು ಎಂದರು.
ಕರಡು ಪಟ್ಟಿಯಂತೆ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಒಟ್ಟು 2,31,158 ಮತದಾರರಿದ್ದು ಇದರಲ್ಲಿ 1,13,555 ಪುರುಷರು, 1,17,603 ಮಹಿಳಾ ಮತದಾರರಿದ್ದಾರೆ. ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಲಿಂಗ ಅನುಪಾತವು 1036 ಆಗಿದ್ದು, ಇದು ಜಿಲ್ಲೆಯ ಜನಗಣತಿ ಅನುಪಾತಕ್ಕಿಂತ 972 ಮತ್ತು ರಾಜ್ಯದ ಸರಾಸರಿಗಿಂತಲೂ ಹೆಚ್ಚಿದೆ. ಮತದಾರರ ಜನಸಂಖ್ಯೆ ಅನುಪಾತ ಶೇ. 83.62 ರಷ್ಟಿದೆ ಎಂದು ಮಾಹಿತಿ ನೀಡಿದರು.
ಕ್ಷೇತ್ರದಲ್ಲಿ 1692 ಯುವ ಮತದಾರರಿದ್ದು ಇದರಲ್ಲಿ 905 ಪುರುಷ, 787 ಮಹಿಳೆಯರು ನೋಂದಾಯಿಸಿಕೊಂಡಿದ್ದಾರೆ. 2,544 ವಿಕಲಾಂಗ ಮತದಾರರಿದ್ದಾರೆ. 60-69 ವರ್ಷದೊಳಗಿನ 21,314, 70-79 ವರ್ಷದೊಳಗಿನ 10,870, 80 ವರ್ಷ ಮೇಲ್ಪಟ್ಟವರು ಒಟ್ಟು 4,734 ಮತದಾರರಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ, ಪಾಲಿಕೆ ಆಯುಕ್ತೆ ರೇಣುಕಾ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ರಾಜಕೀಯ ಪಕ್ಷಗಳ ಮುಖಂಡರಿದ್ದರು.
ದಾವಣಗೆರೆಯಲ್ಲಿ ಶನಿವಾರ, ದಾವಣಗೆರೆ ದಕ್ಷಿಣ ಕ್ಷೇತ್ರದ ಮತದಾರರ ಯಾದಿ ಪರಿಷ್ಕರಣೆ ಸಂಬಂಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಸರ್ಕಾರದ ಕಾರ್ಯದರ್ಶಿ ಡಾ.ಶಮ್ಲಾ ಇಕ್ಬಾಲ್, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್, ಎಡಿಸಿ ಶೀಲವಂತ ಶಿವಕುಮಾರ, ಪಾಲಿಕೆ ಆಯುಕ್ತೆ ರೇಣುಕಾ ಇದ್ದರು.