ಹೊನ್ನಾಳಿ ಪಟ್ಟಣದ ಹಿರೇಕಲ್ಮಠದ ಆವರಣದಲ್ಲಿ ಶುಕ್ರವಾರ ಕರ್ನಾಟಕ ಶೈಕ್ಷಣಿಕ ಪ್ರವಾಸಕ್ಕೆ ಬಯಲುಸೀಮೆ ನಿಗಮ ಮಂಡಳಿ ಅಧ್ಯಕ್ಷ ಎಚ್.ಬಿ.ಮಂಜಪ್ಪ ಹಸಿರು ನಿಶಾನೆ ತೋರಿಸಿದರು. ನಿಂಗಪ್ಪ, ಹನುಮಂತಪ್ಪ, ಚಂದ್ರಶೇಖರ್, ಕುಮಾರ್‌ನಾಯ್ಕ, ಸಚಿನ್ ಇತರರಿದ್ದರು.Tourism 
ದಾವಣಗೆರೆ

ಇತಿಹಾಸ ಅರಿಯಲು ಅಧ್ಯಯನ ಪ್ರವಾಸ ಅಗತ್ಯ

ಪ್ರಮುಖ ಮುಖ್ಯಾಂಶಗಳು

  • ಎಚ್.ಬಿ. ಮಂಜಪ್ಪ ಹೇಳಿಕೆ
  • ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ
ಹೊನ್ನಾಳಿ: ದೇಶ ಸುತ್ತಿ ಕೋಶ ಓದಿ ಎಂಬ ಮಾತಿದೆ. ಅದಕ್ಕಾಗಿಯೇ ಶತಮಾನಗಳ ಹಿಂದೆ ದೇಶದಿಂದ ದೇಶಕ್ಕೆ ಇತಿಹಾಸ ಅರಿಯಲು ಅಧ್ಯಯನ ಪ್ರವಾಸ ಕೈಗೊಳ್ಳುತ್ತಿದ್ದರು ಎಂದು ಬಯಲುಸೀಮೆ ನಿಗಮ ಮಂಡಳಿ ಅಧ್ಯಕ್ಷ ಎಚ್.ಬಿ. ಮಂಜಪ್ಪ ಹೇಳಿದರು.
ಪಟ್ಟಣದ ಹಿರೇಕಲ್ಮಠದ ಆವರಣದಲ್ಲಿ ಶುಕ್ರವಾರ ಕರ್ನಾಟಕ ಶೈಕ್ಷಣಿಕ ಪ್ರವಾಸಕ್ಕೆ ಹೊರಟ ವಿದ್ಯಾರ್ಥಿಗಳಿಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು.
ಚೀನಿ ಯಾತ್ರಿಕರು ನಮ್ಮ ದೇಶಕ್ಕೆ ಆಗಮಿಸಿ, ಇತಿಹಾಸ, ಸಂಸ್ಕೃತಿ, ಸಾಮಾಜಿಕ, ಆರ್ಥಿಕ ಸೇರಿ ಎಲ್ಲ ವಿಷಯಗಳ ಬಗ್ಗೆ ಅಧ್ಯಯನ ಮಾಡಿ, ಪುಸ್ತಕ ಬರೆಯುವ ಮೂಲಕ ಭಾರತದ ಇತಿಹಾಸವನ್ನು ಪರಿಚಯಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರಗಳು ಅಂದಿನಿಂದ ಇಂದಿನವರೆಗೂ ಆಯ್ದ ಕೆಲ ವಿದ್ಯಾರ್ಥಿಗಳಿಗೆ ಪ್ರವಾಸೋದ್ಯಮ ಇಲಾಖೆಯಿಂದ ಶೈಕ್ಷಣಿಕ ಪ್ರವಾಸ ಕೈಗೊಳ್ಳುತ್ತಿದೆ ಎಂದರು.
ವಿದ್ಯಾರ್ಥಿಗಳು ಓದಿನ ಜತೆಗೆ ನಾಡಿನ ಇತಿಹಾಸ ಹಿರಿಮೆ ಅರಿತರೆ ಶಿಕ್ಷಣಕ್ಕೆ ಹೆಚ್ಚು ಅನುಕೂಲವಾಗುತ್ತದೆ. ಆದ್ದರಿಂದ ನೋಡುವ ಹಾಗೂ ಕೇಳುವ ಎಲ್ಲ ವಿಚಾರಗಳನ್ನು ಮನನ ಮಾಡಿಕೊಳ್ಳಬೇಕು, ಆಗ ಮಾತ್ರ ಸರ್ಕಾರ ನಿಮಗಾಗಿ ಆಯೋಜಿಸುವ ಶೈಕ್ಷಣಿಕ ಪ್ರವಾಸ ಅರ್ಥಪೂರ್ಣವಾಗುತ್ತದೆ ಎಂದು ಹೇಳಿದರು.
ಮಾರ್ಗದರ್ಶಿ ಶಿಕ್ಷಕರು ವಿದ್ಯಾರ್ಥಿಗಳನ್ನು ಜಾಗರೂಕತೆಯಿಂದ ನೋಡಿಕೊಂಡು ಸುರಕ್ಷಿತವಾಗಿ ಕರೆದುಕೊಂಡು ಬರಬೇಕು ಎಂದು ಸೂಚಿಸಿದರು.
ಬಿಇಒ ನಿಂಗಪ್ಪ ಮಾತನಾಡಿ, ಸರ್ಕಾರ ಪ್ರತಿವರ್ಷ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ಕೋಟ್ಯಂತರ ರೂ. ಖರ್ಚು ಮಾಡುತ್ತದೆ. ಅದರ ಯೋಜನೆ ಸಾಕಾರವಾಗಬೇಕಾದರೆ ಪ್ರವಾಸದ ಕಾಲದಲ್ಲಿ ಬೇರೆ ಕಡೆ ಗಮನ ಕೊಡದೆ ಎಲ್ಲವನ್ನು ಅಧ್ಯಯನ ಮಾಡಿ ಎಂದರು. ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ 88 ವಿದ್ಯಾರ್ಥಿಗಳಿಗೆ ಪ್ರವಾಸಕ್ಕೆ ಅನುಕೂಲ ಮಾಡಿಕೊಟ್ಟಿದೆ. ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಟ್ರಾವೆಲ್ ಕಿಟ್: ಶೈಕ್ಷಣಿಕ ಪ್ರವಾಸ ಕೈಗೊಂಡಿರುವ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಉತ್ತಮವಾದ ಬ್ಯಾಗ್, ಟಿ ಶರ್ಟ್, ಟೋಪಿ, ಪೆನ್,ಪುಸ್ತಕ ಹಾಗೂ ಬೆಳಗಿನ ನಿತ್ಯೋಪಯೋಗಿ ವಸ್ತುಗಳ ಸಮೇತ ಟ್ರಾವೆಲ್ ಬ್ಯಾಗನ್ನು ಪ್ರವಾಸೋದ್ಯಮ ಇಲಾಖೆಯಿಂದ ನೀಡಲಾಗಿದೆ ಎಂದು ತಿಳಿಸಿದರು. ಇಸಿಒ ಹನುಮಂತಪ್ಪ ಮಾತನಾಡಿ, ಹೊನ್ನಾಳಿಯಿಂದ ಜೋಗ ಜಲಪಾತ, ಮುರ್ಡೇಶ್ವರ, ಉಡುಪಿ, ಭಾಗಮಂಡಲ, ಮೈಸೂರು ಮುಂತಾದ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ ಎಂದರು. ಚಂದ್ರಶೇಖರ್, ಕುಮಾರ್‌ನಾಯ್ಕ, ಮಾರ್ಗದರ್ಶಿ ಸಚಿನ್, ಶಿಕ್ಷಕರಾದ ಶಿವಕಾಂತನಾಯ್ಕ, ಚಂದ್ರಪ್ಪ, ಸುನಿತಾ ಬಾರ್ಕಿ, ದೀಪಾ ಸೇರಿ ಶಿಕ್ಷಣ ಇಲಾಖೆ ಮತ್ತು ಪ್ರವಾಸೋದ್ಯ ಇಲಾಖೆಯ ಅಧಿಕಾರಿಗಳು ಇದ್ದರು.