SUICIDE SUICIDE
ದಾವಣಗೆರೆ

ಚನ್ನಗಿರಿಯಲ್ಲಿ ಪೋಲಿ ಹುಡುಗನ ಜಾಲಿ ಆಟಕ್ಕೆ ಬಲಿಯಾದ ವಿದ್ಯಾರ್ಥಿ

ಕಾರಿನಲ್ಲಿ ಸುತ್ತಾಟದ ಶೋಕಿಯಿಂದ ಆರಂಭ

ಜಗದೀಶ್ ಟಿ.ಎನ್. ಚನ್ನಗಿರಿ

ತಾಯಿ ಮತ್ತು ಮಗ ಇಬ್ಬರೇ ಮನೆಯಲ್ಲಿ. ಸ್ವಲ್ಪ ಅಡಿಕೆ ತೋಟ ಇದೆ. ಮಗನ ಮೇಲಿನ ಪ್ರೀತಿಗೆ ತಾಯಿ ಕಾರು ಕೊಡಿಸಿದ್ದಾರೆ. ತಾಯಿ ಪ್ರೀತಿಯನ್ನು ಅರ್ಥ ಮಾಡಿಕೊಳ್ಳದ ಈ 21 ವರ್ಷದ ಮಗ, ಊರಿನ ನಾಲ್ವರು ಅಪ್ರಾಪ್ತ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ತನ್ನ ಕಾರಿನಲ್ಲಿ ಸುತ್ತಾಡಲು ಆರಂಭಿಸುತ್ತಾನೆ. ಕಾರಿನಲ್ಲೇ ಕುಳಿತು ಮೊಬೈಲ್‌ನಲ್ಲಿ ಗೇಮ್ ಆಡುತ್ತಾರೆ.

ಈ ಹವ್ಯಾಸ ಆನ್‌ಲೈನ್ ಗೇಮ್‌ವರೆಗೆ ಕರೆದುಕೊಂಡು ಹೋಗುತ್ತದೆ. ದುಡ್ಡು ಬೇಕಾದಾಗ ಒಬ್ಬ ವಿದ್ಯಾರ್ಥಿಗೆ ದುಡ್ಡು ತರಲು ಒತ್ತಡ ಹಾಕುತ್ತಾರೆ. ಆಗ ಅವನು ಮನೆಯಲ್ಲಿ ಕಳ್ಳತನ ಆರಂಭಿಸುತ್ತಾನೆ. ಹಣ ಸುಲಭವಾಗಿ ಸಿಗತೊಡಗಿದಾಗ ಇತರ ನಾಲ್ವರು ಮತ್ತೆ ಮತ್ತೆ ದುಡ್ಡಿಗೆ ಬ್ಲಾೃಕ್‌ಮೇಲ್ ಮಾಡಲು ಆರಂಭಿಸುತ್ತಾನೆ. ಕಡೆಗೆ ದುಡ್ಡು ಹೊಂದಿಸಲಾಗದೆ ಭಯದಿಂದ ವಿದ್ಯಾರ್ಥಿ ನೇಣಿಗೆ ಶರಣಾಗುತ್ತಾನೆ... ಜಿಲ್ಲೆಯಲ್ಲಿ ಮೂರು ದಿನಗಳ ಹಿಂದೆ ನಡೆದ ಘಟನೆ ಇದು. ಆನ್‌ಲೈನ್ ಗೇಮಿನ ಗೀಳಿಗೆ ಬಿದ್ದ ಐವರ ತಂಡದಲ್ಲಿ 21 ವರ್ಷದ ಯುವಕನೇ ಖಳನಾಯಕ. ಇತರ ನಾಲ್ವರು ಪ್ರಾಥಮಿಕ ಹಂತದವರೆಗೆ ಒಂದೇ ಶಾಲೆಯಲ್ಲಿ ಓದಿದವರು. ನಂತರದ ಶಿಕ್ಷಣಕ್ಕೆ ಒಬ್ಬ ತಾಲೂಕು ಕೇಂದ್ರದ ಶಾಲೆಗೆ ಹೋದರೆ ಉಳಿದ ಮೂವರು ತಮ್ಮ ಊರಿನ ಶಾಲೆಯಲ್ಲಿ ಓದುತ್ತಿದ್ದರು.

ಕೆಲಸ ಇಲ್ಲದೆ ಪೋಲಿ ಅಲೆಯುತ್ತಿದ್ದ 21 ವರ್ಷದ ಯುವಕ, ಈ ನಾಲ್ವರು ಅಪ್ರಾಪ್ತ ವಿದ್ಯಾರ್ಥಿಗಳ ಸ್ನೇಹ ಸಂಪಾದಿಸಿ ತನ್ನ ಕಾರಿನಲ್ಲಿ ಸುತ್ತಾಡಲು ಕರೆದೊಯ್ಯುತ್ತಿದ್ದ. ಅವರಿಗೆ ಕಾರಿನಲ್ಲಿ ತಿರುಗುವ ಕ್ರೇಜ್ ಶುರುವಾಗಿತ್ತು. ಹೀಗಾಗಿ ಆ ಯುವಕ ಹೇಳಿದಂತೆ ಕೇಳಲು ಆರಂಭಿಸಿದ್ದರು.

ಕಾರಿನಲ್ಲೇ ಮೋಜಿನ ಗೇಮ್‌ಗಳನ್ನು ಆಡಲು ಶುರು ಮಾಡಿದ್ದರು. ಕ್ರಮೇಣ ಇದು ಹವ್ಯಾಸವಾಗಿ ಬದಲಾಗಿ ಓದಿನ ಕಡೆ ಗಮನ ಕಡಿಮೆಯಾಗಿತ್ತು. ಮೋಜಿನ ಗೇಮ್ ಕೊನೆಗೆ ಜೂಜು ರೀತಿಯ ಗೇಮ್ ಕಡೆ ತಿರುಗಿತ್ತು.

ತಾಲೂಕು ಕೇಂದ್ರದಲ್ಲಿ ಓದುತ್ತಿದ್ದ ವಿದ್ಯಾರ್ಥಿಯನ್ನು ಟಾರ್ಗೆಟ್ ಮಾಡಿಕೊಂಡ ಈ ನಾಲ್ವರು ಹಣ ತರುವಂತೆ ಒತ್ತಡ ಹಾಕಿದ್ದರು. ತಂದೆ ಕೃಷಿಕ ಜೊತೆಗೆ ಅಡಿಕೆ ಖೇಣಿದಾರ. ಹೀಗಾಗಿ ಮನೆಯಲ್ಲಿ ಹಣ ಇತ್ತು. ಸ್ನೇಹಿತರು ದುಡ್ಡಿಗೆ ಒತ್ತಡ ಹಾಕಿದಾಗ ಮನೆಯಿಂದ ಐದು ಸಾವಿರ, ಹತ್ತು ಸಾವಿರ.. ಹೀಗೆ ಕದ್ದು ಅವರಿಗೆ ಕೊಡಲು ಆರಂಭಿಸಿದ್ದ. ಹೀಗೆ ಕೊಟ್ಟ ಹಣ ನಾಲ್ಕು ಲಕ್ಷಕ್ಕೂ ಅಧಿಕ ಎಂದು ಹೇಳಲಾಗುತ್ತಿದೆ. ಆದರೆ ಸ್ಪಷ್ಟತೆ ಇಲ್ಲ. ಮತ್ತೆ ದುಡ್ಡಿಗೆ ಒತ್ತಡ ಬಂದಾಗ ವಿದ್ಯಾರ್ಥಿ ತನ್ನ ತಾಯಿಯ ಮೊಬೈಲ್‌ನಿಂದಲೇ ಹಣ ವರ್ಗಾವಣೆ ಮಾಡಿದ್ದ. ಹಣ ವರ್ಗಾವಣೆಯ ಮೆಸೇಜ್ ಮೊಬೈಲ್‌ಗೆ ಬಂದಾಗ ಗಮನಿಸಿ ಮಗನನ್ನು ಪ್ರಶ್ನೆ ಮಾಡಿದ್ದರು. ಆಗ ಏನಾಗುತ್ತಿದೆ. ಮಗ ಏನು ಮಾಡುತ್ತಿದ್ದಾನೆ ಎಂಬುದು ಬೆಳಕಿಗೆ ಬಂದಿತ್ತು. ತಾನು ದಾರಿ ತಪ್ಪಲು ಯಾರು ಕಾರಣ ಎಂಬ ಮಾಹಿತಿಯನ್ನು ಬಹಿರಂಗಪಡಿಸಿದ ನಂತರ ಪೊಲೀಸ್ ಠಾಣೆಗೆ ಹೋಗಿ ವಿದ್ಯಾರ್ಥಿಯ ತಂದೆ ದೂರು ದಾಖಲು ಮಾಡಿದ್ದರು.

ನಡೆದಿದ್ದೇನು?

ಆನ್‌ಲೈನ್ ಗೇಮ್ ಗೀಳು ಬೆಳೆಸಿಕೊಂಡಿದ್ದ ತಾಲೂಕಿನ ಪಾಂಡೋಮಟ್ಟಿ ಗ್ರಾಮದ ಎಂಟನೇ ತರಗತಿ ವಿದ್ಯಾರ್ಥಿ ಮನೋಜ್, 4 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದು, ಪಾಲಕರಿಗೆ ವಿಷಯ ಗೊತ್ತಾದ ನಂತರ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕಿವಿಮಾತು ಕೇಳಲಿಲ್ಲ

ಮಗನ ದಾರಿ ತಪ್ಪಿಸಿದವರ ವಿರುದ್ಧ ಠಾಣೆಗೆ ದೂರು ಸಲ್ಲಿಸಲು ಹೋದಾಗ, ವಿದ್ಯಾರ್ಥಿಯನ್ನು ಗಮನಿಸಿದ ಪೊಲೀಸ್ ಅಧಿಕಾರಿ, ತಕ್ಷಣ ನಿಮ್ಮ ಮಗನನ್ನು ಮನೋವೈದ್ಯರ ಬಳಿ ಕರೆದುಕೊಂಡು ಹೋಗಿ ಎಂದು ಸಲಹೆ ಮಾಡಿದ್ದರು. ಆದರೆ ಅಧಿಕಾರಿಯ ಕಾಳಜಿ ಪಾಲಕರಿಗೆ ಬರಲಿಲ್ಲ. ಆಗಿದ್ದು ಆಯಿತು.. ಇನ್ನು ಮುಂದೆ ಬದಲಾಗು ಎಂದು ಮಗನಿಗೆ ತಂದೆ-ತಾಯಿ ಬುದ್ಧಿಮಾತು ಹೇಳಿ, ಮನೋವೈದ್ಯರ ಬಳಿ ಚಿಕಿತ್ಸೆ ಕೊಡಿಸುವ ಪ್ರಯತ್ನ ಮಾಡಿದ್ದರೆ ಅವನನ್ನು ಕಳೆದುಕೊಳ್ಳುವ ಪ್ರಸಂಗ ಬರುತ್ತಿರಲಿಲ್ಲ.

ಕೊಲೆ ಬೆದರಿಕೆ

ಕೇಳಿದಷ್ಟು ಹಣ ತಂದು ಕೊಡದಿದ್ದರೆ ನಿಮ್ಮ ಅಪ್ಪ-ಅಮ್ಮ, ಅಣ್ಣನನ್ನು ಕೊಲೆ ಮಾಡುತ್ತೇವೆ ಎಂದು ಜತೆಗಿದ್ದ ನಾಲ್ವರು ಬೆದರಿಕೆ ಹಾಕಿದ್ದರು. ಆನ್‌ಲೈನ್ ಗೇಮಿನ ವ್ಯಸನಕ್ಕೆ ಬಿದ್ದಿದ್ದ ಈ ವಿದ್ಯಾರ್ಥಿ ಹಿಂತಿರುಗಿ ಬರಲಾರದಷ್ಟು ದೂರಕ್ಕೆ ಹೋಗಿದ್ದ. ಒಂದು ಕಡೆ ದುಡ್ಡಿಗಾಗಿ ಸಹಪಾಠಿಗಳ ಒತ್ತಡ ಮತ್ತು ಕೊಲೆ ಬೆದರಿಕೆ. ಮತ್ತೊಂದು ಕಡೆ ದಾರಿ ತಪ್ಪಿದ್ದಕ್ಕಾಗಿ ಪಾಲಕರಿಂದ ದಂಡನೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ವಿದ್ಯಾರ್ಥಿ ಆಯ್ಕೆ ಮಾಡಿಕೊಂಡ ಪರಿಹಾರ ಆತ್ಮಹತ್ಯೆ.