ಚನ್ನಗಿರಿ ತಾಲೂಕಿನ ಹೊದಿಗೆರೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಷಹಾಜಿರಾಜೆ ಭೋಂಸ್ಲೆ ಹಾಗೂ ಛತ್ರಪತಿ ಸಂಭಾಜೀ ಮಹಾರಾಜರ ಜಯಂತ್ಯುತ್ಸವವನ್ನು ಮಂಜುನಾಥ ಸುರೇಶ ಭಾರತೀನಂದ ಸ್ವಾಮೀಜಿ ಉದ್ಘಾಟಿಸಿದರು. ಶ್ರೀ ದಾದಾ ಮಹಾರಾಜ್ ನಗರಕರ್, ಮಹಿಮಾ ಪಟೇಲ್, ಶಾರದಾ ಪೂರ್ಯನಾಯ್ಕ, ತೇಜಸ್ವಿ ಪಟೇಲ್ ಇತರರಿದ್ದರು.success
- ಮಂಜುನಾಥ ಸುರೇಶ ಭಾರತೀನಂದ ಸ್ವಾಮೀಜಿ ಅಭಿಪ್ರಾಯ
- ಷಹಜಿ ಜಯಂತಿ
- ಹೊದಿಗೆರೆ ಗ್ರಾಮದಲ್ಲಿ ಆಯೋಜನೆ
ಚನ್ನಗಿರಿ: ಜೀವನದಲ್ಲಿ ದೃಢ ಸಂಕಲ್ಪ ಹಾಗೂ ಗುರಿಯನ್ನು ಹೊಂದಿರುವವರು ಮಾತ್ರ ಯಶಸ್ಸಿನ ಶಿಖರ ಮುಟ್ಟುತ್ತಾರೆ. ಛತ್ರಪತಿ ಸಂಭಾಜಿ ಮಹಾರಾಜರು ತಮ್ಮ ತಂದೆ ಹಾಗೂ ಅಜ್ಜನಂತೆಯೇ ಹಿಂದೂ ಸಾಮ್ರಾಜ್ಯವನ್ನು ಉಳಿಸಿ ಬೆಳೆಸುವ ಛಲ ಹೊಂದಿದ್ದರಿಂದಲೇ ಇಂದಿಗೂ ಸನಾತನ ಧರ್ಮ ಶಾಶ್ವತವಾಗಿ ಉಳಿದಿದೆ ಎಂದು ಬೆಂಗಳೂರಿನ ಶ್ರೀ ಗೋಸಾಯಿ ಮಹಾಸಂಸ್ಥಾನಮಠ ಭವಾನಿಪೀಠದ ಮಂಜುನಾಥ ಸುರೇಶ ಭಾರತೀನಂದ ಸ್ವಾಮೀಜಿ ಹೇಳಿದರು. success
ತಾಲೂಕಿನ ಹೊದಿಗೆರೆ ಗ್ರಾಮದಲ್ಲಿ ಭಾನುವಾರ ಕರ್ನಾಟಕ ಕ್ಷತ್ರಿಯ ಮರಾಠ ಸ್ಮಾರಕಗಳ ಅಭಿವೃದ್ಧಿ ಒಕ್ಕೂಟದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶ್ರೀಮಂತ ಷಹಾಜಿರಾಜೆ ಭೋಂಸ್ಲೆ ಮಹಾರಾಜ ಮತ್ತು ಸ್ವರಾಜ್ ರಕ್ಷಕ ಛತ್ರಪತಿ ಸಂಭಾಜಿ ಮಹಾರಾಜರ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.
ಕ್ಷತ್ರಿಯ ಎನ್ನುವುದು ಕೇವಲ ಜಾತಿ ಸೂಚಕವಲ್ಲ. ಶಕ್ತಿ, ಅಧಿಕಾರ ಹಾಗೂ ಪ್ರಭುತ್ವವನ್ನು ಸಮಾನವಾಗಿ ಯಾರು ಮುನ್ನಡೆಸುತ್ತಾರೋ ಅವರೆಲ್ಲರೂ ಕ್ಷತ್ರಿಯರಾಗುತ್ತಾರೆ. ಸಾಮಾನ್ಯವಾಗಿ ರಾಜಮನೆತನದವರು ಕ್ಷತ್ರಿಯರಾಗಿದ್ದರು. ಛತ್ರಪತಿ ಶಿವಾಜಿ ಮಹಾರಾಜರ ಮನೆತನದವರು ಯಾವುದೇ ಜಾತಿ, ಧರ್ಮದ ಭೇದವಿಲ್ಲದೆ 18 ವಿವಿಧ ಪಂಗಡಗಳ ಜನರನ್ನು ರಕ್ಷಿಸಿದ್ದರು ಎಂದರು.
ಐತಿಹಾಸಿಕ ಹಿನ್ನೆಲೆಯುಳ್ಳ ಹೊದಿಗೆರೆ ಗ್ರಾಮವನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವ ಕೆಲಸವಾಗಬೇಕು. ಈಗಾಗಲೇ ಗ್ರಾಮದ ಅಭಿವೃದ್ಧಿಗಾಗಿ 5 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ. ತಾಂತ್ರಿಕ ಕಾರಣಗಳಿಂದ ನಿಂತಿರುವ ಕೆಲಸಗಳನ್ನು ಸಮಾಜದ ಮುಖಂಡರು ಒಟ್ಟಾಗಿ ಬಗೆಹರಿಸಿಕೊಳ್ಳಬೇಕು, ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ 2 ಲಕ್ಷ ರೂ. ಪ್ರೋತ್ಸಾಹಧನ: ಮರಾಠ ಸಮಾಜದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಉತ್ತೇಜನ ನೀಡುವ ಸಲುವಾಗಿ ಈ ಸಾಲಿನಿಂದ 2 ಲಕ್ಷ ರೂ. ಪ್ರೋತ್ಸಾಹಧನ ನೀಡಲಾಗುವುದು. ನಿಗಮದ ವತಿಯಿಂದ ಇದುವರೆಗೆ ಕೃಷಿಕರಿಗೆ 4 ಸಾವಿರ ಕೊಳವೆಬಾವಿಗಳನ್ನು ಒದಗಿಸಲಾಗಿದೆ ಹಾಗೂ ಮಹಿಳೆಯರ ಸ್ವಾವಲಂಬನೆಗಾಗಿ 3,600 ಹೊಲಿಗೆ ಯಂತ್ರಗಳನ್ನು ವಿತರಿಸಲಾಗಿದೆ ಎಂದು ಕರ್ನಾಟಕ ಕ್ಷತ್ರಿಯ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಚ್. ಮರಿಯೋಜಿರಾವ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಮಹಾರಾಷ್ಟ್ರದ ಪುಣೆಯ ಶ್ರೀ ದಾದಾ ಮಹಾರಾಜ್ ನಗರಕರ್ ಸಾನ್ನಿಧ್ಯ ವಹಿಸಿದ್ದರು. ತುಮ್‌ಕೋಸ್ ಅಧ್ಯಕ್ಷ ಎಚ್.ಎಸ್. ಶಿವಕುಮಾರ್, ಮಾಜಿ ಶಾಸಕ ಮಹಿಮಾ ಪಟೇಲ್, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದಾ ಪೂರ್ಯನಾಯ್ಕ, ಜೀವವೈವಿಧ್ಯ ನಿಗಮದ ಅಧ್ಯಕ್ಷ ವಡ್ನಾಳ್ ಜಗದೀಶ್, ನೀರು ಬಳಕೆದಾರರ ಸಂಘದ ಅಧ್ಯಕ್ಷ ತೇಜಸ್ವಿ ಪಟೇಲ್, ಮರಾಠ ಸಮಾಜದ ತಾಲೂಕಾಧ್ಯಕ್ಷ ಎಂ.ಬಿ. ಶಿವಾಜಿರಾವ್, ಬ್ರಾಹ್ಮಣ ನಿಗಮ ಮಂಡಳಿ ಅಧ್ಯಕ್ಷ ಅಶೋಕ ಜಯಸಿಂಹ ಇತರರಿದ್ದರು.
ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ
ಛತ್ರಪತಿ ಶಿವಾಜಿ ಮಹಾರಾಜರ ಹೆಸರನ್ನು ಕೇಳಿದರೆ ಸಾಕು ಪ್ರತಿಯೊಬ್ಬ ಭಾರತೀಯನ ಮೈಯಲ್ಲೂ ರಕ್ತ ಸಂಚಲನವಾಗುತ್ತದೆ. ಸನಾತನ ಧರ್ಮ ಹಾಗೂ ಸಂಸ್ಕೃತಿಯನ್ನು ರಕ್ಷಿಸಿ ಜಗತ್ತಿಗೆ ಮಾದರಿಯಾಗಿಸಿದ ಕೀರ್ತಿ ಮರಾಠರಿಗೆ ಸಲ್ಲುತ್ತದೆ. ಸದ್ಯದ ದಿನಗಳಲ್ಲಿ ಮರಾಠ ಸಮುದಾಯದಲ್ಲಿ ಶಿಕ್ಷಣದ ಕೊರತೆ ಎದ್ದು ಕಾಣುತ್ತಿದ್ದು, ಪಾಲಕರು ಮಕ್ಕಳಿಗೆ ಹೋರಾಟದ ಮನೋಭಾವದ ಜತೆಗೆ ಅತ್ಯುತ್ತಮ ಶಿಕ್ಷಣ ಕೊಡಿಸಬೇಕು ಎಂದು ಶಾಸಕ ಬಿ.ಪಿ. ಹರೀಶ್ ಸಲಹೆ ನೀಡಿದರು.