ದಾವಣಗೆರೆಯ ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ನಶಾಮುಕ್ತ ಯುವ ವಿಕಸಿತ ಭಾರತ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕಿರುನಾಟಕ ಪ್ರದರ್ಶಿಸಿಸಿದರು.  
ದಾವಣಗೆರೆ

ವ್ಯಸನಮುಕ್ತ ಯುವಕರಿಂದ ದೇಶಕ್ಕೆ ಬಲ

ಪ್ರಮುಖ ಮುಖ್ಯಾಂಶಗಳು

  • ಯುವಕರ ಸದೃಢತೆಗೆ ಕ್ರೀಡಾ ಸಚಿವಾಲಯ ಆಶಯ
  • ಎನ್ನೆಸ್ಸೆಸ್ ಅಧಿಕಾರಿ ಅಶೋಕ್ ಪಾಳೇದ್ ಅಭಿಮತ
  • ನಶಾಮುಕ್ತ ಯುವ ವಿಕಸಿತ ಭಾರತ ಕಾರ್ಯಕ್ರಮ

ದಾವಣಗೆರೆ: ಮಾದಕ ವ್ಯಸನಮುಕ್ತ ಯುವ ಸಮುದಾಯವುಳ್ಳ ದೇಶ ಅತ್ಯಂತ ಸದೃಢವಾಗಿರಲಿದೆ ಎಂದು ದಾವಣಗೆರೆ ವಿವಿ ಎನ್ನೆಸ್ಸೆಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಪ್ರೊ. ಅಶೋಕ್ ವಿ. ಪಾಳೇದ್ ತಿಳಿಸಿದರು.

ಮೈ ಭಾರತ್ ಕೇಂದ್ರ, ಯುವ ವ್ಯವಹಾರಗಳು ಹಾಗೂ ಕ್ರೀಡಾ ಸಚಿವಾಲಯದ ಸಹಯೋಗದಲ್ಲಿ ನಗರದ ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ನಶಾಮುಕ್ತ ಯುವ ವಿಕಸಿತ ಭಾರತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
1970-80ರ ದಶಕದಲ್ಲಿ ವಿಜಯ ಮಹಾಂತೇಶ ಸ್ವಾಮೀಜಿ ಅವರು ಜಗತ್ತಿನ ಸುಮಾರು 60 ದೇಶಗಳನ್ನು ಸುತ್ತಿ, ಜನರ ಆರೋಗ್ಯಪೂರ್ಣ ಬದುಕಿಗಾಗಿ ಅವರ ವ್ಯಸನಗಳನ್ನು ತಮ್ಮ ಜೋಳಿಗೆಗೆ ಹಾಕಿಸಿಕೊಂಡ ಮೂಲಕ ದೊಡ್ಡ ಕ್ರಾಂತಿ ಮಾಡಿದ್ದರು. ಅವರ ಜನ್ಮದಿನದ ಪ್ರಯುಕ್ತ ರಾಜ್ಯ ಸರ್ಕಾರ ನಶಾಮುಕ್ತ ನಾಡು ಕಟ್ಟಲು ಹೊಸ ಯೋಜನೆಗಳನ್ನು ರೂಪಿಸಿತು.
ಈಗ ಅದೇ ಮಾದರಿಯಲ್ಲಿ ಭಾರತ ಸರ್ಕಾರದ ಯುವ ವ್ಯವಹಾರಗಳು ಹಾಗೂ ಕ್ರೀಡಾ ಸಚಿವಾಲಯ ಈ ವರ್ಷ ನಶಾಮುಕ್ತ ಯುವ ವಿಕಸಿತ ಭಾರತ ಶೀರ್ಷಿಕೆಯಡಿ ಕಾರ್ಯಕ್ರಮ ನಡೆಸುತ್ತಿದೆ. ಅನೇಕ ಸ್ಪರ್ಧೆಗಳನ್ನು ಇಟ್ಟು, ಯುವಕರನ್ನು ಒಟ್ಟುಗೂಡಿಸಿ, ಮಾದಕ ವ್ಯಸನಗಳ ಬಗ್ಗೆ ಜಾಗೃತಿ ಮೂಡಿಸಿ ಸದೃಢರನ್ನಾಗಿಸುವ ಗುರಿ ಹೊಂದಿದೆ ಎಂದು ವಿವರಿಸಿದರು.
ಯುವಜನರು ಪೌಷ್ಟಿಕ ಆಹಾರ ಸೇವಿಸಿ, ಭೌತಿಕ ಮತ್ತು ಬೌದ್ಧಿಕವಾಗಿ ಸದೃಢರಾಗಬೇಕು. ನಶೆಯಲ್ಲಿ ಮುಳುಗಿದರೆ ಬದುಕು ಅತ್ಯಂತ ಹೀನ ಸ್ಥಿತಿಗೆ ತಲುಪುತ್ತದೆ. ಯುವಕರು ದೇಶದ ಪ್ರಗತಿಗಾಗಿ ವ್ಯಸನ ಬಿಡಬೇಕು. ದೇಶದ ಹಿತಾಸಕ್ತಿ ಕಾಪಾಡಬೇಕು ಎಂದು ಆಶಿಸಿದರು.
ಜಿಲ್ಲಾ ಯುವ ಅಧಿಕಾರಿ ಬಿ. ಶರಣ್ಯಾ ಮಾತನಾಡಿ ಪಠ್ಯ ಒಂದರಿಂದಲೇ ಬದುಕಿನಲ್ಲಿ ಯಶಸ್ಸು ಸಾಧಿಸಲು ಸಾಲದು. ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯವಾದಾಗ ಮಾನಸಿಕ ಮತ್ತು ಬೌದ್ಧಿಕ ಸ್ಥಿತಿ ಉತ್ತಮವಾಗಲಿದೆ ಎಂದರು.
ಎವಿಕೆ ಕಾಲೇಜಿನ ಪ್ರಾಚಾರ್ಯೆ ಪ್ರೊ.ಜೆ. ಅನಿತಾ ಕುಮಾರಿ ಮಾತನಾಡಿ ಮಾನಸಿಕವಾಗಿ ಖಿನ್ನತೆಗೆ ಒಳಗಾದವರು ಹೆಚ್ಚು ವ್ಯಸನಗಳಿಗೆ ಒಳಗಾಗುತ್ತಿದ್ದಾರೆ. ಹೀಗಾಗಿ ಸ್ಪರ್ಧೆಯಲ್ಲಿ ಭಾಗಿಯಾದರೆ ಸಾಲದು, ಅದರಾಚೆಗೆ ನೀವು ಮತ್ತು ನಿಮ್ಮ ಸುತ್ತಲಿನ ಸಮಾಜವನ್ನು ನಶಾಮುಕ್ತ ಗೊಳಿಸಲು ಶ್ರಮಿಸಬೇಕು ಎಂದರು. ಐಕ್ಯುಎಸಿ ಸಂಯೋಜಕ ಡಾ.ಬಿ.ಜೆ. ರುದ್ರೇಶ್ ಇದ್ದರು. ಡಾ.ಆರ್.ಜಿ. ಕವಿತಾ ಪ್ರಸ್ತಾವಿಕ ಮಾತನಾಡಿದರು. ಡಾ.ಎಚ್.ಎಂ. ಲೋಹಿತ್ ವಂದಿಸಿದರು. ದೀಕ್ಷಿತಾ , ಆರ್.ಆರ್. ವಿನೋದಾ ಕಾರ್ಯಕ್ರಮ ನಿರೂಪಿಸಿದರು.