ದಾವಣಗೆರೆಯ ಜಿಎಂ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕುಲಪತಿ ಡಾ. ಎಸ್.ಆರ್. ಶಂಕಪಾಲ್ ಮಾತನಾಡಿದರು. ಡಾ. ಎಂ. ವೇಣುಗೋಪಾಲ ರಾವ್, ಡಾ. ಪ್ರವೀಣ್ ಜಿ, ಡಾ. ಶ್ರೀನಿವಾಸ್ ಸಿ.ವಿ, ಡಾ. ವೀರಗಂಗಾಧರ ಸ್ವಾಮಿ ಟಿ.ಎಂ, ಕೀರ್ತಿ ಪ್ರಸಾದ್ ಇದ್ದರು.
- ಜಿಎಂ ವಿವಿಯಲ್ಲಿ 21ರಂದು ಉದ್ಘಾಟನೆ
- ಕುಲಪತಿ ಡಾ. ಶಂಕಪಾಲ್ ಮಾಹಿತಿ
ದಾವಣಗೆರೆ : ನಗರದ ಜಿಎಂ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಂಶೋಧನಾ ಮನೋಭಾವ, ನವೀನ ಆವಿಷ್ಕಾರಗಳು ಹಾಗೂ ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ, ತಂತ್ರಜ್ಞಾನ ಆಧಾರಿತ ಯೋಜನೆಗಳನ್ನು ರೂಪಿಸಲು ಹೊಸದಾಗಿ ‘ಐಡಿಯಾ ಲ್ಯಾಬ್’ ಆರಂಭಿಸಲಾಗಿದೆ ಎಂದು ಕುಲಪತಿ ಡಾ. ಎಸ್.ಆರ್. ಶಂಕಪಾಲ್ ಹೇಳಿದರು.
ವಿವಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೇ 21ರಂದು ಈ ಲ್ಯಾಬ್‌ನ ಉದ್ಘಾಟನೆ ನಡೆಯಲಿದೆ. ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಕೌಶಲಗಳ ಜತೆಗೆ ಸಮಾಜಮುಖಿ ಚಿಂತನೆ ಬೆಳೆಸುವ ಉದ್ದೇಶದೊಂದಿಗೆ ಇದು ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆ, ರೋಬಾಟಿಕ್, ಆಟೋಮೇಶನ್, ಡಿಜಿಟಲ್ ಮೌಲ್ಯಮಾವನ, ಸ್ಮಾರ್ಟ್ ಅಗ್ರಿಕಲ್ಚರ್ ಹಾಗೂ ಶಿಕ್ಷಣ ವ್ಯವಸ್ಥೆಯ ಸುಧಾರಣೆ ಕುರಿತ ಅನೇಕ ನವೀನ ಯೋಜನೆಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಪದವಿ ಪೂರೈಸಿದ ನಂತರ ಶೇ. 70ರಷ್ಟು ವಿದ್ಯಾರ್ಥಿಗಳು ಉದ್ಯೋಗ ಹುಡುಕಾಟ ಮಾಡುತ್ತಾರೆ. ಶೇ. 10ರಷ್ಟು ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಹೋಗುತ್ತಾರೆ. ಶೇ. 10ರಷ್ಟು ವಿದ್ಯಾರ್ಥಿಗಳು ಸ್ವಂತ ಉದ್ಯಮ ಆರಂಭಿಸುತ್ತಾರೆ ಎಂದರು.
ಐಡಿಯಾ ಲ್ಯಾಬ್ ಮೂಲಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲಾಗುತ್ತದೆ. ಅವರಿಗೆ ಕಾರ್ಯಾಗಾರಗಳನ್ನು ಹಮ್ಮಿಕೊಂಡು, ತರಬೇತಿ ನೀಡಲಾಗುತ್ತದೆ. ಮೆಂಟರ್‌ಗಳ ಮಾರ್ಗದರ್ಶನ ಸಿಗಲಿದೆ. ಇದರೊಂದಿಗೆ ವಿದ್ಯಾರ್ಥಿಗಳು ಸ್ಟಾರ್ಟಪ್ ಆರಂಭಿಸಲು ಪೂರಕ ವಾತಾವರಣ ಸೃಷ್ಟಿಸಲಾಗುವುದು. ಈ ರೀತಿಯ ವ್ಯವಸ್ಥೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಎಲ್ಲೂ ಇಲ್ಲ ಎಂದು ವಿವರಿಸಿದರು.
ವಿಶ್ವವಿದ್ಯಾಲಯದ ಸಹ ಉಪಕುಲಪತಿ ಡಾ. ಎಂ. ವೇಣುಗೋಪಾಲ ರಾವ್, ಸ್ಕೂಲ್ ಆಫ್ ಇಂಜಿನಿಯರಿಂಗ್‌ನ ನಿರ್ದೇಶಕ ಡಾ. ಪ್ರವೀಣ್ ಜಿ, ಐಡಿಯಾ ಲ್ಯಾಬ್ ನಿರ್ದೇಶಕ ಡಾ. ಶ್ರೀನಿವಾಸ್ ಸಿ.ವಿ, ಮಾರ್ಕೆಟಿಂಗ್ ಮತ್ತು ಪ್ರಮೋಷನ್ ಡೀನ್ ಡಾ. ವೀರಗಂಗಾಧರ ಸ್ವಾಮಿ ಟಿ.ಎಂ, ಕೀರ್ತಿ ಪ್ರಸಾದ್ ಇದ್ದರು.