ಸಂವಿಧಾನಬದ್ಧ ಶೇ.7ರ ಎಸ್ಟಿ ಮೀಸಲಾತಿ ಜಾರಿಯಾಗಲೇಬೇಕು ಎಂಬ ಹಕ್ಕೊತ್ತಾಯದ ಸಂಬಂಧ ದಾವಣಗೆರೆಯಲ್ಲಿ ಬಿಜೆಪಿ ಎಸ್ಟಿ ಮೋರ್ಚಾದಿಂದ ಭಾನುವಾರ ಹಮ್ಮಿಕೊಂಡಿದ್ದ ಸಾಮಾಜಿಕ ನ್ಯಾಯಕ್ಕಾಗಿ ಜಾಗೃತಿ ಸಮಾವೇಶದ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ರಮೇಶ್ ಜಾರಕಿಹೊಳಿ, ಮಾಜಿ ಸಚಿವ ಬಿ. ಶ್ರೀರಾಮುಲು, ರಾಜುಗೌಡ, ಬಂಗಾರು ಹನುಮಂತು, ಬಿ.ವಿ.ನಾಯಕ್, ಶಾಂತಾರಾಂ ಸಿದ್ದಿ, ಹೇಮಲತಾ ನಾಯಕ, ಎಸ್.ವಿ. ರಾಮಚಂದ್ರ ಇತರರಿದ್ದರು.  
ದಾವಣಗೆರೆ

ನಾಯಕರ ಮೀಸಲಿಗೆ ರಾಜ್ಯವ್ಯಾಪಿ ಹೋರಾಟ

ಡಿ. ಎಂ. ಮಹೇಶ್

ಪ್ರಮುಖ ಮುಖ್ಯಾಂಶಗಳು

  • ಜನರಲ್ಲಿ ಗೊಂದಲ ಮೂಡಿಸುತ್ತಿರುವ ರಾಜ್ಯ ಸರ್ಕಾರ
  • ಶಾಸಕ ರಮೇಶ್ ಜಾರಕಿಹೊಳಿ ಹೇಳಿಕೆ
  • ದಾವಣಗೆರೆಯಲ್ಲಿ ಬಿಜೆಪಿ ಎಸ್ಟಿ ಜಾಗೃತಿ ಸಮಾವೇಶ
ದಾವಣಗೆರೆ: ಕಾಂಗ್ರೆಸ್ ಸರ್ಕಾರ ವಾಲ್ಮೀಕಿ ಸಮಾಜಕ್ಕೆ ಶೇ.4ರಷ್ಟು ಮೀಸಲು ಕಡಿತಗೊಳಿಸಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಅನ್ಯಾಯ ಮಾಡಿದೆ. ಇದರ ವಿರುದ್ಧ ಬೀದರ್‌ನಿಂದ ಚಾಮರಾಜನಗರವರೆಗೂ ಹೋರಾಟ ರೂಪಿಸಲಾಗುವುದು ಎಂದು ಶಾಸಕ ರಮೇಶ್ ಜಾರಕಿಹೊಳಿ ಹೇಳಿದರು.
ಸಂವಿಧಾನಬದ್ಧ ಶೇ.7ರ ಎಸ್ಟಿ ಮೀಸಲಾತಿ ಜಾರಿಯಾಗಲೇಬೇಕು ಎಂಬ ಹಕ್ಕೊತ್ತಾಯದ ಸಂಬಂಧ ದಾವಣಗೆರೆಯಲ್ಲಿ ಬಿಜೆಪಿ ಎಸ್ಟಿ ಮೋರ್ಚಾದಿಂದ ಭಾನುವಾರ ಹಮ್ಮಿಕೊಂಡಿದ್ದ ಸಾಮಾಜಿಕ ನ್ಯಾಯಕ್ಕಾಗಿ ಜಾಗೃತಿ ಸಮಾವೇಶದಲ್ಲಿ ಮಾತನಾಡಿದರು.
ಮೀಸಲಾತಿ ಹೋರಾಟದ ಹಿನ್ನೆಲೆಯಲ್ಲಿ ನಾಯಕ ಸಮಾಜದ ಮುಖಂಡರು ಒಂದಾಗಿದ್ದೇವೆ. ರಾಜ್ಯಕ್ಕೆ ಈ ಒಗ್ಗಟ್ಟಿನ ಸಂದೇಶ ತಲುಪಿದೆ. ನಮ್ಮ ಹೋರಾಟ ಶಾಸಕ ಸ್ಥಾನ ದಕ್ಕಿಸಿಕೊಳ್ಳಲು ಸೀಮಿತ ಆಗದೆ ಸೋತಾಗ, ಗೆದ್ದಾಗ ಏಕತಾನತೆ ಕಾಪಾಡಿಕೊಳ್ಳಬೇಕು. ಸಮಾಜದ ಪರ ಹೋರಾಟಕ್ಕೆ ಸದಾ ಸಿದ್ಧರಿರಬೇಕು ಎಂದರು.
ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ನಾಯಕ ಸಮುದಾಯದ ಮೀಸಲಾತಿ ಪ್ರಮಾಣ ಶೇ.3ರಿಂದ ಶೇ.7ಕ್ಕೆ ಏರಿತ್ತು. ಆದರೆ ಈಗಿನ ಸರ್ಕಾರ ಸಮುದಾಯಕ್ಕೆ ಮಾಡುತ್ತಿರುವ ಅನ್ಯಾಯದ ಬಗ್ಗೆ ಜನರಿಗೆ ತಿಳಿಸಬೇಕಿದೆ. 9ನೇ ಷೆಡ್ಯೂಲ್‌ಗೂ ಮೀಸಲಾತಿಗೂ ಸಂಬಂಧವಿರದಿದ್ದರೂ ಜನರಿಗೆ ಸರ್ಕಾರ ತಪ್ಪು ಮಾಹಿತಿ ನೀಡುತ್ತಿದೆ. ಮೀಸಲಾತಿ ವಿಚಾರದಲ್ಲಿ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದವರ ಹಿಂದೆ ಯಾರಿದ್ದಾರೆ ಎಂಬ ಬಗ್ಗೆಯೂ ಸ್ಪಷ್ಟವಾಗಬೇಕಿದೆ ಎಂದರು.
ಸತೀಶ್ ಜಾರಕಿಹೊಳಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡದಿರುವುದು ಒಳ್ಳೆಯದೇ ಆಗಿದೆ. ಇನ್ನೆರಡು ವರ್ಷದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದ್ದು ಆಗ ಸತೀಶ್‌ಗೆ ಅವಮಾನ ಆಗುವುದು ತಪ್ಪಿದೆ ಎಂದ ಅವರು, ಸರ್ಕಾರವನ್ನು ನಾವು ಸದಾ ಹೆದರಿಸಬೇಕು. ಆಗ ದೇವರು ಸರ್ಕಾರಕ್ಕೆ ಉತ್ತರ ನೀಡಲಿದ್ದಾನೆ ಎಂದು ಹೇಳಿದರು.
ಮಾಜಿ ಸಚಿವ ರಾಜುಗೌಡ ಮಾತನಾಡಿ ಮೀಸಲಾತಿ ಜಾರಿಗಾಗಿ ಶ್ರೀರಾಮುಲು- ರಮೇಶ್ ಜಾರಕಿಹೊಳಿ ಜೋಡೆತ್ತು ಹೋರಾಟ ನಡೆಸಲಿವೆ ಎಂದ ಅವರು, ಮೀಸಲಾತಿಗಾಗಿ ಈ ಹಿಂದೆ ಧರಣಿ ಕೂತಿದ್ದ ವಾಲ್ಮೀಕಿ ಪೀಠದ ಪ್ರಸನ್ನಾನಂದ ಶ್ರೀಗಳು, ಸರ್ಕಾರ ಈಗ ಕರೆದರೆ ಒಬ್ಬರೇ ಹೋಗಬಾರದು. ಪಕ್ಷಾತೀತವಾಗಿ ಸಮುದಾಯದವರು ಸೇರಿ ಸಿಎಂಗೆ ಮನವಿ ಸಲ್ಲಿಸೋಣ ಎಂದೂ ಮನವಿ ಮಾಡಿದರು.
ಸತೀಶ್ ಜಾರಕಿಹೊಳಿ ಅವರಿಗೆ ಮತ್ತೆ ಲೋಕೋಪಯೋಗಿ ಸಚಿವ ಸ್ಥಾನ ನೀಡಲಾಗಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನವೂ ಸಿಗಲಿಲ್ಲ. ಮುಖ್ಯಮಂತ್ರಿ ಆಗುವ ಆಸೆಯಿಂದಾಗಿ ಶೇ.7ರ ಮೀಸಲಾತಿ ಬಗ್ಗೆ ಬಾಯಿ ಬಿಡಲಿಲ್ಲ. ಸಿದ್ದರಾಮಯ್ಯ ಹೇಳಿದ್ದಕ್ಕೆಲ್ಲ ಸುಮ್ಮನೆ ಹ್ಞೂಂ ಎಂದರು ಎಂದು ಟೀಕಿಸಿದರು.
ಮೀಸಲಾತಿ ಕಡಿತವಾದಾಗಲೇ ಸತೀಶ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದರೆ ಅವರ ಸ್ಥಾನವನ್ನು ಮುಟ್ಟುವ ತಾಕತ್ತು ಯಾರಿಗೂ ಇರುತ್ತಿರಲಿಲ್ಲ. ಅವರ ಜಾಗದಲ್ಲಿ ರಮೇಶ್ ಜಾರಕಿಹೊಳಿ ಇದ್ದಿದ್ದರೆ ಸುಮ್ಮನೆ ಬಿಡುತ್ತಿರಲಿಲ್ಲ ಎಂದೂ ಹೇಳಿದರು.
ಮೀಸಲು ಕಡಿತದ ಬಗ್ಗೆ ಮಾತನಾಡದ ಕಾಂಗ್ರೆಸ್‌ನಲ್ಲಿನ ಸಮುದಾಯದ 15 ಶಾಸಕರು ಸಿಎಂ ಎದುರು ಕೈ ಕಟ್ಟಿ ನಿಂತಿದ್ದಾರೆ. ಟಾಂಗಾ ಕುದುರೆಗೆ ಹುಲ್ಲು ತೋರಿಸಿದಂತೆ ಪಕ್ಷ ಮಂತ್ರಿಗಿರಿಯ ಆಸೆ ತೋರಿಸುತ್ತಿದೆ ಎಂದು ಕಿಡಿ ಕಾರಿದರು.
ಕುರುಬರ ಬೆಂಬಲದಿಂದಾಗಿ ಸಿದ್ದರಾಮಯ್ಯ, ಲಿಂಗಾಯತ ಸಮುದಾಯ ಬೆನ್ನಿಗಿದ್ದರಿಂದ ಯಡಿಯೂರಪ್ಪ ಸಿಎಂ ಆದರು. ನಮ್ಮ ಸಮುದಾಯ ನಮ್ಮ ಹಿಂದಿದೆ ಎಂದು ಗೊತ್ತಾದಾಗ ಮಾತ್ರ ನಮಗೆ ಅಧಿಕಾರ ಸಿಗುತ್ತದೆ ಎಂದೂ ಸೂಚ್ಯವಾಗಿ ಹೇಳಿದರು.
ಮುಖಂಡ ಸೋಮಲಿಂಗಪ್ಪ ಮಾತನಾಡಿ ಮೀಸಲಾತಿ ಹೋರಾಟದ ಭಾಗವಾಗಿ ಬಳ್ಳಾರಿ, ರಾಯಚೂರು, ಬೆಳಗಾವಿ ಭಾಗದಲ್ಲಿ ಹೆದ್ದಾರಿ ಬಂದ್ ಮಾಡಿ 10 ಲಕ್ಷ ಜನರನ್ನು ಸೇರಿಸಬೇಕು ಎಂದು ಹೇಳಿದರು.
ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ ಕಾಂಗ್ರೆಸ್‌ನಿಂದ ಮೀಸಲಾತಿ ಜಾರಿಯಾಗುವುದು ಅನುಮಾನ. ಇದಕ್ಕಾಗಿ ಬಿಜೆಪಿ ಸರ್ಕಾರವೇ ಬರಬೇಕು ಎಂದರು.
ಎಂಎಲ್ಸಿ ಶಾಂತಾರಾಂ ಸಿದ್ದಿ ಮಾತನಾಡಿ ವಾಲ್ಮೀಕಿ ಸಮಾಜದ ಬಗ್ಗೆ ಉದಾಸೀನ ಮಾಡಿದ ಸರ್ಕಾರಕ್ಕೆ ನಮ್ಮ ಶಕ್ತಿ, ಒಗ್ಗಟ್ಟಿನ ಪ್ರದರ್ಶನ ಮಾಡಬೇಕಿದೆ ಎಂದರು.
ಬಿಜೆಪಿ ರಾಜ್ಯ ಎಸ್ಟಿ ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತು ಮಾತನಾಡಿ ಕಾಂಗ್ರೆಸ್ ಸರ್ಕಾರ ಸತೀಶ್ ಜಾರಕಿಹೊಳಿ ಅವರ ಮುಖ ತೋರಿಸಿ, ವಾಲ್ಮೀಕಿ ಸಮಾಜವನ್ನು ತುಳಿಯುವ ಕೆಲಸ ಮಾಡುತ್ತಿದೆ. ತುಮಕೂರಲ್ಲಿ ರಾಜಣ್ಣ ಅವರನ್ನು ತುಳಿಯಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ. ಶ್ರೀರಾಮುಲು, ಮಾಜಿ ಶಾಸಕ ಎಚ್.ಪಿ. ರಾಜೇಶ್, ಎಂಎಲ್ಸಿ ಹೇಮಲತಾ ನಾಯಕ, ಮೈಸೂರಿನ ಅಪ್ಪಣ್ಣ, ಡಿ.ಎಂ.ಸಾಲಿ, ಬಿ.ವಿ.ನಾಯಕ್ ಮಾತನಾಡಿದರು. ವಾದಿರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಾಜಿ ಶಾಸಕ ಸಿದ್ದರಾಜು, ಮಾಜಿ ಸಂಸದ ಸಣ್ಣ ಫಕೀರಪ್ಪ, ದೇವೇಂದ್ರಪ್ಪ, ತಿಪ್ಪರಾಜು, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರಪ್ಪ ನಾಗಪ್ಪ, ಶ್ರೀನಿವಾಸ ದಾಸಕರಿಯಪ್ಪ, ಪ್ರತಾಪ್‌ಗೌಡ ಪಾಟೀಲ್, ಸಿದ್ದಲಿಂಗಣ್ಣ, ತಿಪ್ಪೇಶ್, ಭರತ್, ಬಸವರಾಜ ಕುಂದುಗಿ, ಶಿವಕುಮಾರ್, ಶಿವಪ್ರಕಾಶ್ ಇತರರಿದ್ದರು.