ಅಪರಾಧ Crime 
ದಾವಣಗೆರೆ

ದಿಟ್ಟಿಸಿ ನೋಡಿದ್ದಕ್ಕೆ ಚಾಕು ಇರಿತ

ಶೋಭಾ ಕೃಷ್ಣ ಗೌಡ

ಪ್ರಮುಖ ಮುಖ್ಯಾಂಶಗಳು

  • ಹಳೆಯ ದ್ವೇಷ ಕಾರಣ
  • ಘಟನೆಯಲ್ಲಿ ಐವರಿಗೆ ಗಾಯ
ಚನ್ನಗಿರಿ: ತನ್ನನ್ನು ದಿಟ್ಟಿಸಿದ ನೋಡಿದ ಎಂಬ ಕಾರಣಕ್ಕೆ ಇಬ್ಬರ ನಡುವೆ ಶುರುವಾದ ಜಗಳ ಚಾಕು ಇರಿತದಲ್ಲಿ ಅಂತ್ಯ ಕಂಡ ಘಟನೆ ಪಟ್ಟಣದಲ್ಲಿ ಸೋಮವಾರ ರಾತ್ರಿ ನಡೆದಿದೆ. ಇದೇ ವೇಳೆ ಜಗಳ ಬಿಡಿಸಲು ಹೋದ ಮೂವರು ಸೇರಿ ಐವರು ಗಾಯಗೊಂಡಿದ್ದಾರೆ.
ಪಟ್ಟಣದ ಸೈದರ್ ಮುಹಲ್ಲಾ ನಿವಾಸಿಗಳಾದ ನವಾಜ್, ಅಮಾನ್, ಅಯಾನ್, ರುಮಾಲ್ ಮತ್ತು ಜೈನುಲ್ಲಾ ಗಾಯಗೊಂಡವರು. ಇವರಿಗೆ ಚನ್ನಗಿರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಡೆದದ್ದೇನು?

ತನ್ನ ಪತ್ನಿಯೊಂದಿಗೆ ನವಾಜ್ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಚನ್ನಗಿರಿ ನಿವಾಸಿ ರುಮಾಲ್ ಶಂಕಿಸಿದ್ದ. ಇದೇ ಕಾರಣಕ್ಕೆ ಇಬ್ಬರ ನಡುವೆ ಅನೇಕ ಬಾರಿ ಜಗಳ ನಡೆದಿತ್ತು. ಸೋಮವಾರ ಸಂಜೆ ಪಟ್ಟಣದ ಸಂತೆ ಮೈದಾನದ ಬಳಿ ಇಬ್ಬರೂ ಮುಖಾಮುಖಿಯಾಗಿದ್ದರು. ವೇಳೆ ಒಬ್ಬರನ್ನೊಬ್ಬರು ದಿಟ್ಟಿಸಿ ನೋಡಿದರು ಎಂಬ ಕಾರಣಕ್ಕೆ ಮಾತಿನ ಚಕಮಕಿ ಶುರುವಾಗಿ ಇಬ್ಬರೂ ಪರಸ್ಪರ ಚಾಕುವಿನಿಂದ ಇರಿದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಜಗಳ ಬಿಡಿಸಲು ಬಂದ ಅವರ ಸ್ನೇಹಿತರಿಗೂ ಚಾಕು ತಗುಲಿ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.