ಜಗಳೂರು ಪಟ್ಟಣದಲ್ಲಿ ಹಾದು ಹೋಗಿರುವ ಮಲ್ಪೆ- ಮೊಳಕಾಲ್ಮೂರು ರಾಜ್ಯ ಹೆದ್ದಾರಿಯನ್ನು 69 ಅಡಿ ಅಗಲೀಕರಣ ಮಾಡಲು ಅಧಿಕಾರಿಗಳು ನಿರ್ಲಕ್ಷೃ ತೋರಿರುವುದನ್ನು ವಿರೋಧಿಸಿ ಶನಿವಾರ ರಸ್ತೆ ಅಗಲೀಕರಣ ಹೋರಾಟ ಸಮಿತಿ ಪದಾಧಿಕಾರಿಗಳು ಬಾಯಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಮೌನ ಪ್ರತಿಭಟನೆ ನಡೆಸಿದರು. ಸಣ್ಣಓಬಯ್ಯ, ಟಿ. ಬಸವರಾಜ್, ಅನಂತ್, ಗೌರಿಪುರ ಸತ್ಯಮೂರ್ತಿ, ವಕೀಲ ರುದ್ರೇಶ್, ಎಸ್.ಆರ್. ಇಂದಿರಾ ಇತರರಿದ್ದರು. protest 
ದಾವಣಗೆರೆ

ಬಾಯಿಗೆ ಕಪ್ಪು ಬಟ್ಟೆ ಕಟ್ಟಿ ಮೌನ ಪ್ರತಿಭಟನೆ

ಪ್ರಮುಖ ಮುಖ್ಯಾಂಶಗಳು

  • 69 ಅಡಿ ವಿಸ್ತರಣೆಗೆ ಒತ್ತಾಯ
  • ಡಾ. ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ
ಜಗಳೂರು: ಪಟ್ಟಣದಲ್ಲಿ ಹಾದು ಹೋಗಿರುವ ಮಲ್ಪೆ- ಮೊಳಕಾಲ್ಮೂರು ರಾಜ್ಯ ಹೆದ್ದಾರಿಯನ್ನು 69 ಅಡಿ ಅಗಲೀಕರಣ ಮಾಡಲು ಅಧಿಕಾರಿಗಳು ನಿರ್ಲಕ್ಷೃ ತೋರಿರುವುದನ್ನು ವಿರೋಧಿಸಿ ಶನಿವಾರ ರಸ್ತೆ ಅಗಲೀಕರಣ ಹೋರಾಟ ಸಮಿತಿ ಪದಾಧಿಕಾರಿಗಳು ಬಾಯಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಮೌನ ಪ್ರತಿಭಟನೆ ನಡೆಸಿದರು.
ಪಟ್ಟಣದ ಬಯಲು ರಂಗಮಂದಿರದಿಂದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ ಮೌನ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಹೊಸ ಬಸ್ ನಿಲ್ದಾಣದಲ್ಲಿ ನಡೆಯುತ್ತಿರುವ ಕಾಮಗಾರಿ ಬಳಿ ಕುಳಿತು ಮೌನ ಪ್ರತಿಭಟನೆ ನಡೆಸಿ ತಾಲೂಕು ಆಡಳಿತದ ಕ್ರಮವನ್ನು ಖಂಡಿಸಿದರು.
ನೂರಾರು ವರ್ಷಗಳ ನಂತರ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಿಂದ ಚಳ್ಳಕೆರೆ ಬೈಪಾಸ್ ರಸ್ತೆಯವರೆಗೂ 69 ಅಡಿ ವಿಸ್ತರಣೆಗೊಳಿಸಲು ಅಧಿಕಾರಿಗಳು ಮುಂದಾಗಿದ್ದರಿಂದ ಕ್ಷೇತ್ರದ ಮತದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಒಂದು ವರ್ಷದಿಂದ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದು ಬೇಸರ ಸಂಗತಿ. ಗುತ್ತಿಗೆದಾರ ಬೇಜಬ್ದಾರಿತನದಿಂದ ಕೆಲಸ ಮಾಡಿಸುತ್ತಿದ್ದಾರೆ. ಮುಖ್ಯರಸ್ತೆಯ ಎರಡು ಭಾಗಗಳಲ್ಲೂ ಅಪೂರ್ಣಗೊಂಡಿದೆ. ಇದರಿಂದ ಸಾರ್ವಜನಿಕರು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ ಎಂದು ದೂರಿದರು.
ಹೋರಾಟ ಸಮಿತಿ ಅಧ್ಯಕ್ಷ ಸಣ್ಣ ಓಬಯ್ಯ ಮಾತನಾಡಿ, ಆರಂಭದಲ್ಲಿ 69 ಅಡಿಗೆ ವಿಸ್ತರಣೆ ಮಾಡುವುದಾಗಿ ಹೇಳಿದ ಅಧಿಕಾರಿಗಳು ತದ ನಂತರ ವರ್ತಕರಿಗೆ ತೊಂದರೆ ತಪ್ಪಿಸಲು 50 ಅಡಿಗೆ ಸೀಮಿತಗೊಳಿಸಲಾಯಿತು. ಆದರೆ ಕೆಲವು ಕಡೆ 40 ಅಡಿ, 35 ಅಡಿಯಷ್ಟು ಮಾತ್ರ ತೆರವುಗೊಳಿಸಿ ಚರಂಡಿ ನಿರ್ಮಿಸಲು ಮುಂದಾಗಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಗುತ್ತಿಗೆದಾರ ಹೋರಾಟಗಾರರನ್ನು ದಿಕ್ಕು ತಪ್ಪಿಸಲು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹಾಗಾದರೆ ಅನ್ಯಾಯದ ವಿರುದ್ಧ ಹೋರಾಟ ಮಾಡುವುದು ತಪ್ಪಾ ಎಂದು ಪ್ರಶ್ನಿಸಿದರು.
ವಕೀಲರ ಸಂಘದ ಅಧ್ಯಕ್ಷ ಟಿ. ಬಸವರಾಜ್ ಮಾತನಾಡಿ, 69 ಅಡಿ ಕಡ್ಡಾಯವಾಗಿ ತೆರವುಗೊಳಿಸಲು ಹೋರಾಟ ನಡೆಸಿದಾಗ ಸ್ಥಳಕ್ಕಾಗಮಿಸಿದ್ದ ಶಾಸಕರು, ಜಿಲ್ಲಾಧಿಕಾರಿಗಳು, ಸ್ಥಳಿಯ ಅಧಿಕಾರಿಗಳು ಕಡ್ಡಾಯವಾಗಿ ತೆರವುಗೊಳಿಸುವುದಾಗಿ ಭರವಸೆ ನೀಡಿ ಪ್ರತಿಭಟನೆ ಹಿಂಪಡೆಯುವಂತೆ ಮಾಡಿದ್ದರು. ಆದರೆ ಈವರೆಗೂ ಭರವಸೆ ಈಡೇರಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದರು.
ಸ್ಥಳಕ್ಕಾಗಮಿಸಿದ ಗ್ರೇಡ್-2 ತಹಸೀಲ್ದಾರ್ ಮಂಜಾನಂದ ಅವರಿಗೆ ಹೋರಾಟ ಸಮಿತಿ ಮನವಿ ಸಲ್ಲಿಸಿತು. ಹೋರಾಟ ಸಮಿತಿಯ ಅನಂತ್, ಗೌರಿಪುರ ಸತ್ಯಮೂರ್ತಿ, ವಕೀಲ ರುದ್ರೇಶ್, ಎಸ್.ಆರ್. ಇಂದಿರಾ, ತಿಪ್ಪೇಸ್ವಾಮಿ ಮತ್ತಿತರರಿದ್ದರು.