ಕುಡಿಯುವ ನೀರಿನ ಸಮಸ್ಯೆ ಕುರಿತು ತಾಪಂ ಇಒ ಕೆಂಚಪ್ಪ ಅವರಿಗೆ ಮನವರಿಕೆ ಮಾಡುತ್ತಿರುವ ಗ್ರಾಮಸ್ಥರು. Protest
ದಾವಣಗೆರೆ

ಪಲ್ಲಾಗಟ್ಟೆ ಪಂಚಾಯಿತಿಗೆ ಮುತ್ತಿಗೆ

ಮೂಲ ಸೌಕರ್ಯ ಕಲ್ಪಿಸಲು ಆಗ್ರಹ

ಜಗಳೂರು: ಚರಂಡಿ ಸ್ವಚ್ಛತೆ, ವಿದ್ಯುತ್ ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವಿಕೆ, ಪ್ರತಿ ದಿನ ಕಸ ಸಂಗ್ರಹಣೆ ಸೇರಿ ವಿವಿಧ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ಗುರುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಗ್ರಾಮಸ್ಥರು ಪಲ್ಲಾಗಟ್ಟೆ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಬೆಳಗ್ಗೆ 10ಗಂಟೆಗೆ ಮಹಿಳೆಯರು, ಮಕ್ಕಳು ಸೇರಿ ನೂರಾರು ಜನರು ಪಂಚಾಯಿತಿ ಕಚೇರಿ ಗೇಟ್ ಹಾಕಿ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಘೋಷಣೆ ಕೂಗಿದರು. ಪಲ್ಲಾಗಟ್ಟೆ ಗ್ರಾಪಂ ಕೇಂದ್ರವಾಗಿದ್ದರೂ ಗ್ರಾಮದ ಪ್ರತಿ ಬೀದಿಗಳಲ್ಲಿನ ಚರಂಡಿಗಳು ಹೂಳು ತುಂಬಿ ದುರ್ವಾಸನೆ ಬೀರುತ್ತಿವೆ. ಗ್ರಾಮಗಳಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿವೆ. ಈ ವಿಚಾರ ಗ್ರಾಮ ಪಂಚಾಯಿತಿ ಗಮನದಲ್ಲಿದ್ದರೂ ಸ್ವಚ್ಛಗೊಳಿಸುವ ಕಾರ್ಯ ಆಗಿರುವುದಿಲ್ಲ ಎಂದು ಆರೋಪಿಸಿದರು. ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಬಿ.ಆರ್. ರವಿಚಂದ್ರ ಮಾತನಾಡಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಳವಡಿಸಿರುವ ಬೀದಿ ದೀಪಗಳು, ಹೈಮಾಸ್ಟ್ ದೀಪ ಕಳೆದ ಆರು ತಿಂಗಳಿಂದ ಹಾಳಾಗಿದೆ. ಸರ್ಕಾರದಿಂದ ಮೂಲ ಸೌಕರ್ಯಕ್ಕಾಗಿ ಬಿಡುಗಡೆಯಾಗುವ ಅನುದಾನ ವನ್ನು ದುರುಪಯೋಗಪಡಿಸಿಕೊಂಡು ಜನರನ್ನು ಕತ್ತಲೆಯ ಕೂಪಕ್ಕೆ ತಳ್ಳುತ್ತಿದ್ದಾರೆ ಎಂದರು.

ಸ್ಥಳಕ್ಕೆ ತಾಪಂ ಇಒ ಕೆಂಚಪ್ಪ ಭೇಟಿ ನೀಡಿ, ಪ್ರತಿಭಟನಾ ಕಾರರ ಬೇಡಿಕೆಗಳನ್ನು ಆಲಿಸಿ, ಹಂತ ಹಂತವಾಗಿ ಮೂಲಸೌರ್ಯ ಕಲ್ಪಿಸುವುದಾಗಿ ಭರವಸೆ ನೀಡಿದರು. ದಸಂಸ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಕಸವನಹಳ್ಳಿ, ಸಂಘಟನಾ ಸಂಚಾಲಕರಾದ ಹರೀಶ್ ಹನುಮಂತಾಪುರ, ಯೋಗೇಶ್, ಕಾರ್ಯಾಧ್ಯಕ್ಷ ಅಣ್ಣಪ್ಪ, ಜಿಲ್ಲಾ ಕಾರ್ಯಾಧ್ಯಕ್ಷ ಉಜ್ಜಪ್ಪವಡೆಯರಹಳ್ಳಿ ಸ್ವಾಮಿ, ಬಿ.ಎಚ್. ಗಣೇಶ್, ಡಿ.ಯು. ನಾಗರಾಜ್, ಪ್ರಕಾಶ್, ಮತ್ತಿತರರಿದ್ದರು.