ದಾವಣಗೆರೆಯಲ್ಲಿ ಸೋಮವಾರ ನಡೆದ ಸಿದ್ಧರಾಮೇಶ್ವರ ದೇವರ 64ನೇ ರಥೋತ್ಸವದಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಪಾಲ್ಗೊಂಡರು. ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಸಮಾಜದ ಮುಖಂಡರು ಇದ್ದರು.
- ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಬಣ್ಣನೆ
- ವಿಜೃಂಭಣೆಯ 64ನೇ ರಥೋತ್ಸವ
ದಾವಣಗೆರೆ : ಸಿದ್ಧರಾಮೇಶ್ವರರು ಕೇವಲ ಹಠಯೋಗಿ ಮತ್ತು ಪವಾಡ ಪುರುಷರಾಗಿ ಕಾಣದೆ, ಜ್ಞಾನ-ಶಿವಯೋಗ-ಭಕ್ತಿಗಳ ತ್ರಿವೇಣಿ ಸಂಗಮವಾಗಿದ್ದಾರೆ ಎಂದು ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.
ನಗರದಲ್ಲಿ ಸೋಮವಾರ, ಸಿದ್ಧರಾಮೇಶ್ವರ ದೇವರ 64ನೇ ರಥೋತ್ಸವ ಹಾಗೂ ಲಿಂ. ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ ಅವರ 24ನೇ ಸಂಸ್ಮರಣೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಅಲ್ಲಮರ ಮಾರ್ಗದರ್ಶನ, ಬಸವಣ್ಣನ ವಾತ್ಸಲ್ಯ, ಚನ್ನಬಸವಣ್ಣನ ದೀಕ್ಷೆ, ಅಕ್ಕಮಹಾದೇವಿಯ ಗೌರವಕ್ಕೆ ಮತ್ತು ಶಿವಶರಣರ ಮನ್ನಣೆಗೆ ಪಾತ್ರರಾದ ಕಾರಣ ಸಿದ್ಧರಾಮರು ಶೂನ್ಯ ಪೀಠದ ಮೂರನೇ ಪೀಠಾಧ್ಯಕ್ಷರಾದರು. ಕರ್ಮಯೋಗದ ಮೂಲಕ ಶರಣ ಚಳವಳಿಗೆ ವಿಶಿಷ್ಟ ತೇಜಸ್ಸನ್ನು ನೀಡಿದ ಮಹಾ ಯೋಗಿ ಎಂದು ತಿಳಿಸಿದರು.
ಬಸವಣ್ಣ ಅವರು ಸಿದ್ಧರಾಮರ ಲೋಕಸೇವೆ ಹಾಗೂ ಸಾಧನೆಯನ್ನು ಗೌರವದಿಂದ ಕಂಡವರು. ಸಿದ್ಧರಾಮರ ಕಾಯಕ ನಿಷ್ಠೆ ಮತ್ತು ಶಿವಭಕ್ತಿಯನ್ನು ತಮ್ಮ ವಚನದಲ್ಲಿ ವಿವರಿಸಿದ್ದಾರೆ ಎಂದರು.
ಕುಂಚಿಟಿಗ ಗುರುಪೀಠದ ಶ್ರೀ ಡಾ. ಶಾಂತವೀರ ಸ್ವಾಮೀಜಿ ಮಾತನಾಡಿ, 12ನೇ ಶತಮಾನದ ಕಲ್ಯಾಣ ಕ್ರಾಂತಿಯ ಪ್ರಮುಖ ಶರಣ, ಮಹಾ ತಪಸ್ವಿ ಸಿದ್ಧರಾಮೇಶ್ವರರು ಕಾಯಕ ನಿಷ್ಠೆ ಮತ್ತು ಜಾಗೃತಿ ಸಾಧನೆಯ ಮೂಲಕ ಸಮಾಜಕ್ಕೆ ಹೊಸ ದಿಕ್ಕನ್ನು ತೋರಿಸಿದ ಅಪರೂಪದ ಯೋಗಿಯಾಗಿದ್ದಾರೆ ಎಂದು ತಿಳಿಸಿದರು.
ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಮಾತನಾಡಿ, ಕಾಯಕ ವರ್ಗದ ಹಾಗೂ ಶೋಷಿತ ಸಮುದಾಯಗಳ ಆತ್ಮಗೌರವದ ಸಂಕೇತವಾಗಿ ಹೊರಹೊಮ್ಮಿದವರು ಸೊನ್ನಲಾಪುರದ ಶಿವಯೋಗಿ ಸಿದ್ಧರಾಮೇಶ್ವರರು. ಸಮಾಜದ ಕೆಳವರ್ಗದ ಜನರ ಕಣ್ಣೀರು ಒರೆಸುವುದು, ಶ್ರಮಿಕರ ಶ್ರಮಕ್ಕೆ ಗೌರವ ತಂದುಕೊಡುವುದು ಮತ್ತು ಅಸಮಾನತೆಯ ವಿರುದ್ಧ ನಿಲ್ಲುವುದನ್ನೇ ತಮ್ಮ ಜೀವನದ ಮುಖ್ಯ ಉದ್ದೇಶವಾಗಿಸಿಕೊಂಡಿದ್ದರು ಎಂದು ಹೇಳಿದರು.
ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ, ಚಿಕ್ಕಮಗಳೂರು ಬಸವತತ್ವ ಪೀಠದ ಡಾ. ಬಸವ ಮರುಳಸಿದ್ಧ ಸ್ವಾಮೀಜಿ, ಭಗೀರಥ ಗುರುಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಮಡಿವಾಳ ಗುರುಪೀಠದ ಶ್ರೀ ಬಸವ ಮಾಚಿದೇವ ಸ್ವಾಮೀಜಿ ಮಾತನಾಡಿದರು. ವಿವಿಧ ಮಠಾಧೀಶರು ಭಾಗವಹಿಸಿದ್ದರು.
ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್, ಕೆ.ಎಸ್. ಬಸವಂತಪ್ಪ, ಶಾಸಕ ಸಮರ್ಥ ಶಾಮನೂರು, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಬಿಜೆಪಿ ಮುಖಂಡರಾದ ಜಿ.ಎಸ್. ಅನಿತ್, ಶ್ರೀನಿವಾಸ ದಾಸಕರಿಯಪ್ಪ, ವಿನಯ ಕುಮಾರ್, ರಾಮಚಂದ್ರಪ್ಪ, ಚಂದ್ರಶೇಖರ ಪೂಜಾರ, ಲೋಕಿಕೆರೆ ನಾಗರಾಜ, ಅಜಯ ಕುಮಾರ್, ಕೆಪಿಸಿಸಿ ವಕ್ತಾರ ಡಿ. ಬಸವರಾಜ, ಬಿ.ಟಿ. ಸಿದ್ದಪ್ಪ, ಜಿ.ಎಸ್. ಶ್ಯಾಮ್, ಎಚ್. ಜಯಣ್ಣ ಸೇರಿ ನಾಡಿನ ವಿವಿಧೆಡೆಯಿಂದ ಮುಖಂಡರು ರಥೋತ್ಸವದಲ್ಲಿ ಪಾಲ್ಗೊಂಡರು.
ರಥೋತ್ಸವದ ಮೆರವಣಿಗೆ ವೆಂಕಾಭೋವಿ ಕಾಲನಿಯ ಸಿದ್ದರಾಮೇಶ್ವರ ಮಠದಿಂದ ಪ್ರಾರಂಭವಾಗಿ ಅರಳಿಮರ ವೃತ್ತ, ಗಣೇಶ ದೇವಸ್ಥಾನ, ಕೆ.ಆರ್. ಮಾರ್ಕೆಟ್, ರಾಮ ಮಂದಿರ, ಗಡಿಯಾರ ಕಂಬ ವೃತ್ತ, ಬಕ್ಕೇಶ್ವರ ದೇವಸ್ಥಾನದ ಮೂಲಕ ಪುನಃ ಶ್ರೀಮಠ ತಲುಪಿತು.
ಆಕರ್ಷಿಸಿದ ಕಲಾ ತಂಡಗಳು
ರಥೋತ್ಸವದಲ್ಲಿ ಕಲಾ ತಂಡಗಳಾದ ನಂದಿಕೋಲು, ಡೊಳ್ಳು ಕುಣಿತ, ಗೊಂಬೆಗಳು, ಕೃತಕ ಆನೆ, ಮಹಿಳಾ ಡೊಳ್ಳು ಕುಣಿತ, ಕೋಲಾಟ, ವೀರಗಾಸೆ, ಕೀಲು ಕುದುರೆ ಗಮನ ಸೆಳೆದವು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗ ನೀಡಿತ್ತು.
ಬಸವಣ್ಣ, ನಾಲ್ವಡಿ ಕೃಷ್ಣರಾಜ ಒಡೆಯರ್, ಅಂಬೇಡ್ಕರ್, ಮಡಿವಾಳ ಮಾಚಿದೇವ, ಮೇದಾರ ಕೇತಯ್ಯ, ಅಕ್ಕಮಹಾದೇವಿ, ನುಲಿಯ ಚಂದಯ್ಯ, ಭಗೀರಥ ಮಹರ್ಷಿ, ಅಂಬಿಗರ ಚೌಡಯ್ಯ ಅವರ ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಸಾಗಿದವು. ಪೂರ್ಣ ಕುಂಭ ಹೊತ್ತ ಸುಮಂಗಲೆಯರು, ಸಮುದಾಯದ ಯುವಕರು, ಮಕ್ಕಳು ಸಂಭ್ರಮದಿಂದ ಪಾಲ್ಗೊಂಡರು.
ಹಲವು ಶರಣರು ತತ್ವ, ಸಂದೇಶಗಳನ್ನು ನುಡಿದರೆ ಸಿದ್ಧರಾಮೇಶ್ವರರು ಕಾಯಕ ಪ್ರಧಾನ ಸಮಾಜಕ್ಕೆ ಆದ್ಯತೆ ನೀಡಿದರು. ಇಂದು ಅದೆಷ್ಟೋ ಶ್ರಮಿಕ ವರ್ಗಗಳಿಗೆ ಶಿವಯೋಗಿ ಸಿದ್ಧರಾಮೇಶ್ವರರೇ ಪ್ರೇರಣೆ. ಅವರಿಂದ ಲೋಕೋದ್ಧಾರದ ಕಾರ್ಯಗಳು ನಡೆದಿದ್ದವು ಎನ್ನುವುದಕ್ಕೆ ನಾಡಿನಾದ್ಯಂತ ಅವರು ನಿರ್ಮಿಸಿರುವ ಕೆರೆ ಕಟ್ಟೆಗಳು ಇಂದಿಗೂ ಸುಸ್ಥಿತಿಯಲ್ಲಿದ್ದು ಸಾಕ್ಷಿ ನುಡಿಯುತ್ತಿವೆ. ಇಂದಿನ ಕೃಷಿ ಕಾಯಕ ಚಟುವಟಿಕೆಗಳಿಗೆ ಜೀವ ಜಲವೇ ಮೂಲಾಧಾರ. ಅದಕ್ಕೆ ಪ್ರೇರಣೆ ಹನ್ನೆರಡನೇ ಶತಮಾನದ ಸಿದ್ಧರಾಮೇಶ್ವರರು.
— ಡಾ. ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಮಾದಾರ ಚನ್ನಯ್ಯ ಗುರುಪೀಠ