ಸುಣ್ಣ ಬಣ್ಣ ಕಾಣದೆ ಶಿಥಿಲಾವಸ್ಥೆ ತಲುಪಿರುವ ಮಾಯಕೊಂಡದ ಶ್ರೀರಾಮ ದೇಗುಲ.Temple 
ದಾವಣಗೆರೆ

ಅಭಿವೃದ್ಧಿ ಕಾಣದ ಶ್ರೀರಾಮ ದೇಗುಲ! Temple

ಪ್ರಮುಖ ಮುಖ್ಯಾಂಶಗಳು

  • ಕೋಟ್ಯಂತರ ಮೌಲ್ಯದ ಆಸ್ತಿ ಇದ್ದರೂ ಪ್ರಗತಿ ಶೂನ್ಯ
  • ಕುಸಿಯುವ ಸ್ಥಿತಿ ತಲುಪಿದ ಗುಡಿ
  • ಭಕ್ತರಿಂದ ತೀವ್ರ ಅಸಮಾಧಾನ
ಕೃಷ್ಣಮೂರ್ತಿ ಪಿ.ಎಚ್. ಮಾಯಕೊಂಡ
ಗ್ರಾಮದ ಹೃದಯ ಭಾಗದಲ್ಲಿರುವ ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀರಾಮ ದೇಗುಲವು ಕಳೆದ ಏಳೆಂಟು ದಶಕಗಳಿಂದ ಅಭಿವೃದ್ಧಿ ಕಾಣದೆ ಶಿಥಿಲಾವಸ್ಥೆ ತಲುಪಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನು ದೇಗುಲದ ಹೆಸರಿನಲ್ಲಿದ್ದರೂ, ನಿರ್ವಹಣೆಯಿಲ್ಲದೆ ಪಾಳುಬಿದ್ದಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಗ್ರಾಮದ ಬಸ್‌ಸ್ಟಾೃಂಡ್ ಸರ್ಕಲ್ ಸಮೀಪವೇ ಇರುವ ದೇಗುಲ ಇದಾಗಿದ್ದು, ಗರ್ಭಗುಡಿ, ಗೋಪುರ, ನವರಂಗ, ಮಹಾಮಂಟಪ ಹಾಗೂ ವಿಶಾಲವಾದ ಪ್ರಾಂಗಣ ಹೊಂದಿದೆ. ಇಲ್ಲಿ ಶ್ರೀರಾಮ, ಸೀತಾಮಾತೆ, ಲಕ್ಷ್ಮಣ ಹಾಗೂ ಆಂಜನೇಯ ದೇವರ ಕಪ್ಪು ಕಲ್ಲಿನ ಆಕರ್ಷಕ ವಿಗ್ರಹಗಳಿವೆ. ಆದರೆ, ಸರಿಯಾದ ಮೇಲ್ಛಾವಣಿ ನಿರ್ವಹಣೆ ಇಲ್ಲದೆ ಮಳೆ ನೀರು ಗೋಡೆಗಳಲ್ಲಿ ಇಳಿಯುತ್ತಿದ್ದು, ಕಟ್ಟಡವು ಯಾವುದೇ ಕ್ಷಣದಲ್ಲಿ ಕುಸಿಯುವ ಸ್ಥಿತಿಯಲ್ಲಿದೆ.
ಶ್ರೀರಾಮ ದೇವರ ಹೆಸರಿನಲ್ಲಿ ದೊಡ್ಡಮಾಗಡಿಯಲ್ಲಿ 10 ಎಕರೆ 8 ಗುಂಟೆ ಫಲವತ್ತಾದ ಜಮೀನಿದೆ. ಇಷ್ಟು ದೊಡ್ಡ ಪ್ರಮಾಣದ ಆಸ್ತಿ ದೇವಸ್ಥಾನದ ಹೆಸರಿನಲ್ಲಿದ್ದರೂ, ಅದನ್ನು ಅನುಭವಿಸುತ್ತಿರುವವರು ದೇಗುಲದ ಅಭಿವೃದ್ಧಿಗೆ ಕಿಂಚಿತ್ತೂ ಗಮನ ಹರಿಸಿಲ್ಲ ಎನ್ನುವುದು ಗ್ರಾಮಸ್ಥರ ಗಂಭೀರ ಆರೋಪವಾಗಿದೆ. ದೇಗುಲದ ಆವರಣದಲ್ಲಿರುವ ಪುರಾತನ ಛತ್ರ ಹಾಗೂ ಕಾಂಪೌಂಡ್ ಗೋಡೆಗಳು ಈಗಾಗಲೇ ಕುಸಿದು ಬಿದ್ದಿವೆ.

ಜಿಲ್ಲಾಧಿಕಾರಿಗೆ ಮನವಿ

ದೇಗುಲದ ಸಮಗ್ರ ಅಭಿವೃದ್ಧಿ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಮುಕ್ತ ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿ ರೈತ ಮುಖಂಡರು ಹಾಗೂ ಗ್ರಾಮಸ್ಥರು ಕಳೆದ ನವೆಂಬರ್ 26 ರಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಜತೆಗೆ ಧಾರ್ಮಿಕ ದತ್ತಿ ಇಲಾಖೆ ಹಾಗೂ ಕಂದಾಯ ಇಲಾಖೆ ಕೂಡಲೇ ಮಧ್ಯಪ್ರವೇಶಿಸಿ ಈ ಪುರಾತನ ದೇಗುಲವನ್ನು ಜೀರ್ಣೋದ್ಧಾರ ಮಾಡಬೇಕೆಂದು ಆಗ್ರಹಿಸಿದ್ದಾರೆ.

ದೇವಾಲಯದ ಆಸ್ತಿ ಪಹಣಿಯಲ್ಲಿ ಶ್ರೀರಾಮದೇವರ ಹೆಸರಿದೆ. ಆದರೆ ಯಾವುದೇ ಆಡಳಿತ ಮಂಡಳಿ ಇಲ್ಲದ ಕಾರಣ ಅಭಿವೃದ್ಧಿ ಕುಂಠಿತವಾಗಿದೆ. ಧಾರ್ಮಿಕ ದತ್ತಿ ಇಲಾಖೆ ಈ ಕೂಡಲೇ ದೇಗುಲವನ್ನು ವಶಕ್ಕೆ ಪಡೆದು ಮೂಲಸೌಕರ್ಯ ಕಲ್ಪಿಸಬೇಕು.

ಮಾಯಕೊಂಡ ಗ್ರಾಮದ ಮಧ್ಯಭಾಗದಲ್ಲಿರುವ ಈ ಐತಿಹಾಸಿಕ ದೇಗುಲ ಮತ್ತು ಛತ್ರ ಪಾಳು ಬಿದ್ದಿರುವುದು ವಿಷಾದನೀಯ. ಸರ್ಕಾರ ಕೂಡಲೇ ಇದನ್ನು ಅಭಿವೃದ್ಧಿಪಡಿಸಿ, ಹಬ್ಬ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಭಕ್ತರಿಗೆ ಮುಕ್ತ ಅವಕಾಶ ಮಾಡಿಕೊಡಬೇಕು.