ಜಗಳೂರು ತಾಲೂಕಿನ ಮರಿಕಟ್ಟೆಯಲ್ಲಿ ಶನಿವಾರ ಶ್ರೀ ವೀರಾಂಜನೇಯಸ್ವಾಮಿ ಮತ್ತು ಶ್ರೀ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ದೇವಸ್ಥಾನಗಳ ಕಳಸಾರೋಹಣ, ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀ ರೇವಣಸಿದ್ದೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. Kalasarohana
- ಶ್ರೀ ರೇವಣಸಿದ್ದೇಶ್ವರ ಸ್ವಾಮೀಜಿ ಅನಿಸಿಕೆ
- ಮರಿಕಟ್ಟೆ ಗ್ರಾಮದ ದೇವಾಲಯದ ಕಳಸಾರೋಹಣ
ಜಗಳೂರು: ದೇವಾಲಯಗಳು ಶಾಂತಿ, ನೆಮ್ಮದಿಯ ಕೇಂದ್ರಗಳಾಗಿ ಜನರಿಗೆ ಸಂಸ್ಕಾರವನ್ನು ಧಾರೆ ಎರೆಯುವ ಕೇಂದ್ರಗಳಾಗಿವೆ ಎಂದು ರಾಮಘಟ್ಟ ಶ್ರೀ ರೇವಣಸಿದ್ದೇಶ್ವರ ಸ್ವಾಮೀಜಿ ಹೇಳಿದರು. Kalasarohana
ತಾಲೂಕಿನ ಮರಿಕಟ್ಟೆಯಲ್ಲಿ ಶನಿವಾರ ಶ್ರೀ ವೀರಾಂಜನೇಯಸ್ವಾಮಿ ಮತ್ತು ಶ್ರೀ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ದೇವಸ್ಥಾನಗಳ ಕಳಸಾರೋಹಣ, ಧಾರ್ಮಿಕ ಕೈಂಕರ್ಯ ಮತ್ತು ರಾಜವೀರ ಮದಕರಿ ನಾಯಕ ಪುತ್ಥಳಿ ಲೋಕಾರ್ಪಣೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.
ಜನ ಆಧುನಿಕ ಜಗತ್ತಿನ ಭರಾಟೆಯಲ್ಲಿ ದೇವಾಲಯಗಳ ಮಹತ್ವ ಮರೆಯುತ್ತಿದ್ದಾರೆ. ಜಂಜಾಟಗಳು, ಒತ್ತಡದಿಂದ ಮುಕ್ತರಾಗಲು ದೇವಾಲಯಗಳ ಆಶ್ರಯ ಬೇಕು. ಆಧುನಿಕತೆ ಎಷ್ಟೇ ಮುಂದುವರಿದರೂ ಅವರವರ ಧಾರ್ಮಿಕ ಭಾವನೆ ಜೀವಂತವಾಗಿದೆ. ಇಡೀ ದೇಶವೇ ಧಾರ್ಮಿಕ ನೆಲೆಗಟ್ಟಿನ ಮೇಲೆ ನಿಂತಿದೆ ಎಂದರು. ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ಯುವ ಪೀಳಿಗೆ ದೇಶದ ಶಕ್ತಿ ಮತ್ತು ಆಸ್ತಿ. ಈ ಶಕ್ತಿ ದೇಶದ ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸಲಿ. ದುಶ್ಚಟಗಳಿಂದ ದೂರ ಉಳಿದು ಕುಟುಂಬದ ನೆಮ್ಮದಿಗಾಗಿ ಬಾಳಬೇಕು ಎಂದರು.
ಕೆಪಿಸಿಸಿ ಎಸ್ಟಿ ಘಟಕದ ಮಾಜಿ ಅಧ್ಯಕ್ಷ ಕೆ.ಪಿ. ಪಾಲಯ್ಯ ಮಾತನಾಡಿ, ಅನಾದಿಕಾಲದಿಂದ ದೇವಾಲಯಗಳು ತಮ್ಮದೇ ಆದ ಸ್ಥಳ ವಿಶೇಷಗಳನ್ನು ಹೊಂದಿವೆ. ದೇವಸ್ಥಾನದ ನಿರ್ಮಾಣಕ್ಕೆ ಗ್ರಾಮಸ್ಥರೆಲ್ಲ ಒಟ್ಟಾಗಿ ಕೆಲಸ ಮಾಡಿದ್ದೀರಿ. ಮುಂದೆಯೂ ದೇವಾಲಯದ ಅಭಿವೃದ್ಧಿಗೆ ಕೆಲಸ ಮಾಡಿ. ಅಂಬೇಡ್ಕರ್ ಅವರು ಎಲ್ಲರೂ ಸಮಾನತೆಯಿಂದ ಬಾಳಲು ಅವಕಾಶ ಕಲ್ಪಿಸಿದ್ದಾರೆ ಎಂದರು.
ಕೆಪಿಸಿಸಿ ಎಸ್ಟಿ ಘಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ. ಕೀರ್ತಿಕುಮಾರ್, ಬಿಜೆಪಿ ಮುಖಂಡ ಬಿಸ್ತುವಳ್ಳಿ ಬಾಬು ಮಾತನಾಡಿದರು. ಕಾನಾಮಡುಗು ಶ್ರೀ ಬಸವೇಶ್ವರ ದಾಸೋಹ ಮಠದ ಧರ್ಮಾಧಿಕಾರಿ ಶ್ರೀ ದಾ.ಮ, ಇಮ್ಮಡಿ ಶರಣಾರ್ಯರು, ಚಂದ್ರಯ್ಯ ಸ್ವಾಮೀಜಿ, ಎಪಿಎಂಸಿ ಮಾಜಿ ಅಧ್ಯಕ್ಷ ಯು.ಜಿ. ಶಿವಕುಮಾರ್, ಧರ್ಮನಾಯ್ಕ, ಲ್ಯಾಬ್ ಶಿವು, ವಿಜಯ್‌ಕೆಂಚೋಳ್, ರೇವಣಸಿದ್ದಪ್ಪ, ಸುರೇಶ್ ಇತರರಿದ್ದರು.
ವಿಜೃಂಭಣೆಯ ಕಳಸಾರೋಹಣ: ಕಳಸಾರೋಹಣಕ್ಕೂ ಮುನ್ನ ದೇವಸ್ಥಾನದಲ್ಲಿ ಗಣಪತಿ ಪೂಜೆ, ಪುಣ್ಯಾಹ, ವಾಸ್ತು ಪೂಜೆ, ನವಗ್ರಹ ಹೋಮ ಮತ್ತು ಮಂಡಲ ಪೂಜೆ ನಡೆಸಲಾಯಿತು. ಕಳಸದೊಂದಿಗೆ ಇಡುವ ಮೂರ್ತಿಗಳನ್ನು ಧಾನ್ಯ, ನೀರಿನಲ್ಲಿ ಇಟ್ಟು ಶುದ್ಧೀಕರಿಸಲಾಯಿತು. ಕಳಸಗಳನ್ನು ಮೆರವಣಿಗೆ ಮಾಡಲಾಯಿತು. ವೇದಮಂತ್ರಗಳ ಮಧ್ಯೆ ದೇವಸ್ಥಾನದ ಮುಖ್ಯ ಗೋಪುರದ ಮೇಲೆ ಕಳಶ ಇರಿಸಿ ವಿಶೇಷ ಪೂಜೆ, ಮಹಾಮಂಗಳಾರತಿ ನೆರವೇರಿಸಲಾಯಿತು. ನಂತರ ವೀರಮದಕರಿನಾಯಕ ಪುತ್ಥಳಿಯನ್ನು ಅನಾವರಣಗೊಳಿಸಲಾಯಿತು.