ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಲ್ಲಿ ಸೋಮವಾರ ಶಿವಸೇನಾ ಪಕ್ಷದ ಜಿಲ್ಲಾ ಪದಾಧಿಕಾರಿಗಳ ಹೆಸರು ಘೋಷಿಸಿದ ಸಂದರ್ಭದಲ್ಲಿ ಗಂಗಾಧರ ಕುಲಕರ್ಣಿ, ಅಮರನಾಥ್, ಎಂ.ಎಸ್. ಹರೀಶ್, ಅರುಣ್ ಕುಮಾರ್ ಜಡಿಮಠ್, ಎಸ್.ಜಿ. ಸೋಮಶೇಖರ್, ಜಿ.ಎಚ್. ನಾಗರಾಜಪ್ಪ, ನಾಗರಾಜಯ್ಯ ಬಿ.ಎಂ, ಸತೀಶ್ ಕುಮಾರ್ ಎನ್.ಎನ್. ಇದ್ದರು.
- ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ ಕುಲಕರ್ಣಿ ಹೇಳಿಕೆ
- ಕಾನೂನು, ಸುವ್ಯವಸ್ಥೆ ಹದಗೆಟ್ಟಿದೆ
ದಾವಣಗೆರೆ : ಮಹಾರಾಷ್ಟ್ರದ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಪಕ್ಷವನ್ನು ಕರ್ನಾಟಕದಲ್ಲಿ ಕಳೆದ 6 ತಿಂಗಳಿಂದ ಸಂಘಟನೆ ಮಾಡಲಾಗುತ್ತಿದೆ. ಮುಂಬರುವ ದಾವಣಗೆರೆ, ಬಾಗಲಕೋಟೆ ವಿಧಾನಸಭೆ ಉಪಚುನಾವಣೆ ಹಾಗೂ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧತೆ ನಡೆದಿದೆ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ ಕುಲಕರ್ಣಿ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಭ್ಯರ್ಥಿಗಳ ಆಯ್ಕೆಗಾಗಿ ಪ್ರವಾಸ ಮಾಡಲಾಗುತ್ತಿದೆ. ರಾಜ್ಯದ ಜನರು ಬದಲಾವಣೆ ಬಯಸುತ್ತಿದ್ದು ಹಿಂದುತ್ವ ಹಾಗೂ ಅಭಿವೃದ್ಧಿ ನಮ್ಮ ಪಕ್ಷದ ಕಾರ್ಯಸೂಚಿಯಾಗಿದೆ ಎಂದು ತಿಳಿಸಿದರು.
ಹಿಂದುತ್ವಕ್ಕಾಗಿ ಕೇಸ್ ಆಗಿರುವ, ಜೈಲಿಗೆ ಹೋದ ಹಿಂದೂ ಕಾರ್ಯಕರ್ತರಿಗೆ, ಯುವಕರಿಗೆ, ಮಹಿಳೆಯರಿಗೆ, ರೈತರಿಗೆ, ಕಾರ್ಮಿಕರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದರು.
ರಾಜ್ಯದ 13 ಜಿಲ್ಲೆಗಳಲ್ಲಿ ಪಕ್ಷವನ್ನು ಉದ್ಘಾಟನೆ ಮಾಡಲಾಗಿದೆ. ಬಾಗಲಕೋಟೆ ಕ್ಷೇತ್ರದಿಂದ ಸ್ಪರ್ಧಿಸಲು 2-3 ಆಕಾಂಕ್ಷಿಗಳಿದ್ದಾರೆ. ದಾವಣಗೆರೆ ಕ್ಷೇತ್ರದಲ್ಲೂ ಪ್ರಬಲ ಅಭ್ಯರ್ಥಿಯನ್ನು ಸ್ಪರ್ಧೆಗಿಳಿಸಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿದ ಅವರು, ಅಮೆರಿಕ, ಇಸ್ರೇಲ್ ದೇಶಗಳು ಇರಾನ್ ಮೇಲೆ ದಾಳಿ ಮಾಡಿದ್ದನ್ನು ಖಂಡಿಸಿ ರಾಜ್ಯದಲ್ಲಿ ಅನುಮತಿ ಇಲ್ಲದೇ ಪ್ರತಿಭಟನೆ, ಹೋರಾಟ ನಡೆಯುತ್ತಿರುವುದು ಅಪಾಯಕಾರಿ. ಸಂವಿಧಾನ, ಕಾನೂನು ಇವರಿಗೆ ಅನ್ವಯಿಸುವುದಿಲ್ಲವೆ. ಖಮೇನಿ ಸಾವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ. ಇದರಲ್ಲೂ ಓಲೈಕೆಯೆ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿನ ಬೆಳವಣಿಗೆಗಳ ಕುರಿತು ಮುಂದಿನ ವಾರ ಶಿವಸೇನಾ ಪಕ್ಷದಿಂದ ರಾಜ್ಯಪಾಲರಿಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಅಮರನಾಥ್, ರಾಜ್ಯ ಕಾರ್ಯದರ್ಶಿ ಎಂ.ಎಸ್. ಹರೀಶ್, ಜಿಲ್ಲಾಧ್ಯಕ್ಷ ಅರುಣ್ ಕುಮಾರ್ ಜಡಿಮಠ್, ಜಿಲ್ಲಾ ಗೌರವಾಧ್ಯಕ್ಷ ಎಸ್.ಜಿ. ಸೋಮಶೇಖರ್, ಪ್ರಧಾನ ಕಾರ್ಯದರ್ಶಿ ಜಿ.ಎಚ್. ನಾಗರಾಜಪ್ಪ, ಉಪಾಧ್ಯಕ್ಷ ನಾಗರಾಜಯ್ಯ ಬಿ.ಎಂ, ಸಂಘಟನಾ ಕಾರ್ಯದರ್ಶಿ ಸತೀಶ್ ಕುಮಾರ್ ಎನ್.ಎನ್. ಸುದ್ದಿಗೋಷ್ಠಿಯಲ್ಲಿದ್ದರು.