ಹರಿಹರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಸಮಾರೋಪ ಸಮಾರಂಭದಲ್ಲಿ ಬಿಎಸ್‌ಸಿ ಪದವಿಯಲ್ಲಿ 10ನೇ ರ‌್ಯಾಂಕ್ ಪಡೆದ ಮಾನಸ ಉತ್ತಿಗಿಗೆ ಶಾಸಕ ಬಿ.ಪಿ. ಹರೀಶ್ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು. ಡಾ. ರಮೇಶ್.ಎಂ.ಎನ್ ಇತರರು ಇದ್ದರು. ai
- ಶಾಸಕ ಬಿ.ಪಿ. ಹರೀಶ್ ಕಿವಿಮಾತು
- ಎಲ್ಲ ಕ್ಷೇತ್ರದಲ್ಲಿ ಎಐ ಪ್ರಭಾವ
ಹರಿಹರ: ವಿದ್ಯಾರ್ಥಿಗಳು ತಂತ್ರಜ್ಞಾನವನ್ನು ಸರಿಯಾಗಿ ಬಳಕೆ ಮಾಡಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಶಾಸಕ ಬಿ.ಪಿ. ಹರೀಶ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ai
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ 2025-26ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್, ಸ್ಕೌಟ್ ಮತ್ತು ಗೈಡ್ಸ್ ಹಾಗೂ ರೆಡ್‌ಕ್ರಾಸ್ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಎಲ್ಲ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ ಆವರಿಸಿಕೊಳ್ಳುತ್ತಿದೆ. ಇದರಿಂದಾಗಿ ಶಿಕ್ಷಣದ ಜತೆ ಕೌಶಲದ ಅವಶ್ಯಕತೆ ಇದೆ. ಉತ್ತಮ ಶಿಕ್ಷಣ ಪಡೆದರೆ ವಿದ್ಯಾರ್ಥಿಗಳಿಗೆ ಲಾಭವಾಗಲಿದೆ ಎಂದರು.
ವಿನ್ನರ್ಸ್ ಸಮೂಹ ಸಂಸ್ಥೆ ಸಂಸ್ಥಾಪಕ ಡಾ. ಶಿವರಾಜ್ ಕಬ್ಬೂರ್ ಮಾತನಾಡಿ, ಶ್ರದ್ಧೆ, ನಿಷ್ಠೆ, ತಾಳ್ಮೆ, ಬದ್ಧತೆ ಹಾಗೂ ಸಂಯಮ ಸಾಧನೆಗೆ ರಹದಾರಿ. ಶೈಕ್ಷಣಿಕ ವ್ಯವಸ್ಥೆಯಲ್ಲಿ ಎಲ್ಲ ಹಂತದಲ್ಲೂ ವಿದ್ಯಾಥಿಗಳು ವಿಭಿನ್ನ ಆಯಾಮಗಳಲ್ಲಿ ಜ್ಞಾನವನ್ನು ಪಡೆಯುತ್ತಾರೆ ಎಂದರು.
ಪದವಿ ಶಿಕ್ಷಣದ ವೇಳೆ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳು ಅರಳಲು, ಬೆಳವಣಿಗೆಗೆ ಹೊಂದಲು ಮತ್ತು ಬದುಕು ಕಟ್ಟಿಕೊಳ್ಳಲು ಇರುವ ಅವಕಾಶಗಳ ಬಗ್ಗೆ ತಿಳಿಸಿದರು.
2024-25ನೇ ಶೈಕ್ಷಣಿಕ ಸಾಲಿನ ಬಿಎಸ್ಸಿ ಪದವಿಯಲ್ಲಿ 10ನೇ ರ‌್ಯಾಂಕ್ ಪಡೆದ ಮಾನಸ ಉತ್ತಿಗಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಶಾಸಕ ಬಿ.ಪಿ. ಹರೀಶ್ ಕಾಲೇಜಿನ 2 ವರ್ಷದ ವಾರ್ಷಿಕ ವರದಿ ಬಿಡುಗಡೆಗೊಳಿಸಿದರು. ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ. ರಮೇಶ್ .ಎಂ.ಎನ್ ವಹಿಸಿದ್ದರು. ದೈಹಿಕಶಿಕ್ಷಣ ನಿರ್ದೇಶಕ ಡಾ. ಚಂದ್ರಶೇಖರ್.ಸಿ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಕೆ.ಜೆ. ಯೋಗೇಶ್, ಯುವ ರೆಡ್‌ಕ್ರಾಸ್ ಸಂಚಾಲಕ ಡಾ. ಗಂಗರಾಜು ಎಸ್., ಸ್ಕೌಟ್ಸ್ ಅಂಡ್ ಗೈಡ್ಸ್ ರೇಂಜರ್ಸ್‌ಗಳಾದ ಡಾ.ಜಿ.ಎನ್. ದಾಕ್ಷಾಯಿಣಿ, ಡಾ. ಗೌರಮ್ಮ ಎಸ್.ಎಂ, ರೋವರ್ಸ್ ಲೀಡರ್ ಮನೋಹರ ಕೆ.ಎಸ್, ಐ.ಕ್ಯೂ.ಎಸ್.ಸಿ ಸಂಯೋಜಕ ಡಾ.ಎಚ್.ಪಿ.ಅನಂತನಾಗ್, ಸಹ ಸಂಯೋಜಕ ಅಬ್ದುಲ್‌ಬಷೀರ್, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ತಿಪ್ಪೇಸ್ವಾಮಿ ಎಚ್. ಇತರರಿದ್ದರು.