ದಾವಣಗೆರೆಯ ಕಲ್ಲೇಶ್ವರ ರೈಸ್‌ಮಿಲ್ ಆವರಣದಲ್ಲಿ ಶುಕ್ರವಾರ ಹಿರಿಯ ಶಾಸಕ ದಿ. ಡಾ. ಶಾಮನೂರು ಶಿವಶಂಕರಪ್ಪ ಅವರ ಸಮಾಧಿಗೆ ಸಿಎಂ ಸಿದ್ದರಾಮಯ್ಯ ಪುಷ್ಪ ನಮನ ಸಲ್ಲಿಸಿದರು. ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಇದ್ದರು. 
ದಾವಣಗೆರೆ

ಕಾಯಕ, ದಾಸೋಹ ತತ್ವ ಪಾಲಿಸಿದ ಶಾಮನೂರು

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ
  • ನುಡಿನಮನ ಕಾರ್ಯಕ್ರಮ
  • ಕಲ್ಲೇಶ್ವರ ರೈಸ್ ಮಿಲ್ ಆವರಣ
ದಾವಣಗೆರೆ : ಡಾ. ಶಾಮನೂರು ಶಿವಶಂಕರಪ್ಪ ಅವರು ಕಾಯಕ ನಿಷ್ಠೆ ಮತ್ತು ದಾಸೋಹದ ಮೂಲಕ ಬಸವಣ್ಣನ ತತ್ವಗಳನ್ನು ಪರಿಪಾಲಿಸಿದರು ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಕಲ್ಲೇಶ್ವರ ರೈಸ್ ಮಿಲ್ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾಮನೂರು ಅವರದು ದೊಡ್ಡ ಬದುಕು. ಅವರು ‘ದಾನಶೂರ ಕರ್ಣ’ ಬಿರುದಿಗೆ ಅರ್ಹರು. ಸಾಕಷ್ಟು ದಾನ ಮಾಡಿದರೂ ಕೂಡ ಅದರ ಬಗ್ಗೆ ಹೇಳಿಕೊಂಡವರಲ್ಲ. ಸಮಯಪ್ರಜ್ಞೆ ಹೊಂದಿದ್ದ ಅವರು ಲೆಕ್ಕದಲ್ಲಿ ಬಹಳ ಪಕ್ಕಾ ಇದ್ದರು ಎಂದು ತಿಳಿಸಿದರು.
ಇನ್ನೊಬ್ಬ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿ, ಶಾಮನೂರು ಬದುಕಿದ್ದಾಗಲೂ ಇತಿಹಾಸ ನಿರ್ಮಿಸಿದರು. ಈಗ ನಡೆಯುತ್ತಿರುವ ನುಡಿನಮನ ಕಾರ್ಯಕ್ರಮವೂ ಇತಿಹಾಸ ಎಂದರು.
ವೀರಶೈವ-ಲಿಂಗಾಯತ ಉಪ ಪಂಗಡಗಳ ಮಧ್ಯೆ ರಕ್ತ ಸಂಬಂಧ ಬೆಳೆಸಿದರು. ಅವರ ಜ್ಞಾಪಕ ಶಕ್ತಿ ಅಚ್ಚರಿ ಮೂಡಿಸುತ್ತದೆ. ವೀರಶೈವ ಲಿಂಗಾಯತ ಮಹಾಸಭೆಗೆ 3 ಬಾರಿ ಅಧ್ಯಕ್ಷರಾಗಿ ಸಂಘಟನೆಗೆ ಶಕ್ತಿ ತುಂಬಿದರು ಎಂದು ಹೇಳಿದರು.
ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಮಾತನಾಡಿ, ಅವರ ತಾಳ್ಮೆ, ಮುಗುಳ್ನಗೆ ಯುವ ಜನಂಗಕ್ಕೆ ಪ್ರೇರಣೆ ನೀಡುತ್ತದೆ. ಅವರ ಜೀವನವೇ ದೊಡ್ಡ ಸಂದೇಶ. ಅವರದು ಸಾರ್ಥಕ ಬದುಕು ಎಂದರು.
ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಶಾಮನೂರು ಶಿವಶಂಕರಪ್ಪ ಅವರು ಲಿಂಗಾಯತ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ. ಸಮಾಜಕ್ಕೆ ಅನ್ಯಾಯವಾದ ಸಂದರ್ಭದಲ್ಲಿ ದಿಟ್ಟ ನಿಲುವು ತಾಳಿದರು ಎಂದು ತಿಳಿಸಿದರು.
ಮಾಜಿ ಸಚಿವರಾದ ಎಸ್.ಎ. ರವೀಂದ್ರನಾಥ್, ಎಚ್. ಆಂಜನೇಯ, ಎಂ.ಪಿ. ರೇಣುಕಾಚಾರ್ಯ, ಶಾಸಕರಾದ ಕೆ.ಎಸ್. ಬಸವಂತಪ್ಪ, ಬಿ. ದೇವೇಂದ್ರಪ್ಪ, ಶಿವಗಂಗಾ ಬಸವರಾಜ, ಡಿ.ಜಿ. ಶಾಂತನಗೌಡ, ಮಾಜಿ ಶಾಸಕರಾದ ಮಹಿಮ ಪಟೇಲ್, ವಡ್ನಾಳ್ ರಾಜಣ್ಣ ಇದ್ದರು.
ಎಐಸಿಸಿ ವೀಕ್ಷಕ ಮಯೂರ್ ಜಯಕುಮಾರ್,ಉದ್ಯಮಿಗಳಾದ ಅಥಣಿ ವೀರಣ್ಣ, ಅಣಬೇರು ರಾಜಣ್ಣ, ಜವಳಿ ವರ್ತಕ ಬಿ.ಸಿ. ಉಮಾಪತಿ, ಐಪಿಎಸ್ ಅಧಿಕಾರಿ ಡಿ. ರೂಪಾ ಪಾಲ್ಗೊಂಡಿದ್ದರು. ಸಮಿತಾ ಮುತಾಲಿಕ್ ಪ್ರಾರ್ಥಿಸಿದರು.

ದಾವಣಗೆರೆಯ ಬ್ರಾೃಂಡ್ ಅಂಬಾಸಿಡರ್

ಅಪ್ಪಾಜಿ ಅವರು ದಾವಣಗೆರೆಯ ಬ್ರಾೃಂಡ್ ಅಂಬಾಸಿಡರ್ ಆಗಿದ್ದರು. ಅವರು ಹಾಕಿಕೊಟ್ಟ ದಾರಿಯಲ್ಲಿ ನಾವು ಮುಂದೆ ಸಾಗುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.
ನಗರಸಭೆ ಸದಸ್ಯರಾಗಿ, ಅಧ್ಯಕ್ಷರಾಗಿ, ಬಾಪೂಜಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ನಂತರ ಆ ಸಂಸ್ಥೆಯನ್ನು ಬೆಳೆಸಿದ ರೀತಿಯ ಬಗ್ಗೆ ತಿಳಿಸಿದರು. 1994 ರಲ್ಲಿ ಮೊದಲ ಬಾರಿ ಶಾಸಕರಾಗಿ ನಂತರ ರಾಜಕೀಯದಲ್ಲಿ ಬೆಳೆದ ಪರಿಯನ್ನು ವಿವರಿಸಿದರು.
ಜವಳಿ ಉದ್ಯಮಗಳು ನಶಿಸಿದ ನಂತರ ದಾವಣಗೆರೆಯನ್ನು ಶಿಕ್ಷಣ ಕ್ಷೇತ್ರದಲ್ಲಿ ಗುರುತಿಸುವಂತೆ ಮಾಡಿದರು. ಕೋವಿಡ್ ಸಂದರ್ಭದಲ್ಲಿ 6 ಕೋಟಿ ವೆಚ್ಚದಲ್ಲಿ 1 ಲಕ್ಷ ಲಸಿಕೆಗಳನ್ನು ತರಿಸಿ ಸಾರ್ವಜನಿಕರಿಗೆ ಉಚಿತವಾಗಿ ನೀಡಿದರು ಎಂದು ತಂದೆಯವರು ಮಾಡಿದ ಸೇವಾ ಕಾರ್ಯಗಳನ್ನು ನೆನಪಿಸಿದರು. ದಾವಣಗೆರೆ ಸಕ್ಕರೆ ಕಾರ್ಖಾನೆಯಿಂದ ಆರಂಭಿಸಿ 6 ಸಕ್ಕರೆ ಉದ್ಯಮಗಳನ್ನು ಬೆಳೆಸಿದ್ದನ್ನು ತಿಳಿಸಿದರು.

ಜವಾಬ್ದಾರಿಯುತ ರಾಜಕಾರಣಿ

ನಮ್ಮ ಮಾವನವರಾದ ಡಾ. ಶಾಮನೂರು ಶಿವಶಂಕರಪ್ಪ ಅವರು ಕೊಟ್ಟ ಮಾತಿನಂತೆ ನಡೆಯುವ ಮೂಲಕ ಜವಾಬ್ದಾರಿಯುತ ರಾಜಕಾರಣಿಯಾಗಿ ಸೇವೆ ಸಲ್ಲಿಸಿದರು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ನಮ್ಮ ಅತ್ತೆಯವರು ನಿಧನರಾದ ನೋವಿನ ಸಂದರ್ಭದಲ್ಲೂ ಕೂಡಾ, ಕೆಲ ದಿನಗಳ ಹಿಂದೆ ತಾವು ಮಾತು ಕೊಟ್ಟಿದ್ದ ಪ್ರಕಾರ ಮಗುವೊಂದರ ಹೃದಯ ಶಸ್ತ್ರಚಿಕಿತ್ಸೆಗೆ ಆರ್ಥಿಕ ನೆರವು ನೀಡಿದರು ಎಂದು ನೆನಪು ಮಾಡಿಕೊಂಡರು.
ಬಡವರಿಗೆ ಕೇವಲ ನಿವೇಶನ ಸಿಕ್ಕರೆ ಸಾಲದು, ಸೂರು ಕಲ್ಪಿಸಬೇಕು ಎಂಬುದು ಅವರ ಚಿಂತನೆಯಾಗಿತ್ತು. ಅದಕ್ಕಾಗಿ ಅವರು ವಸತಿ ಸಚಿವರ ಬಳಿಗೂ ಹೋಗುತ್ತಿದ್ದರು ಎಂದು ಹೇಳಿದರು.
ಅವರಲ್ಲಿ ಮಾನವೀಯ ಮೌಲ್ಯಗಳಿದ್ದವು. ಅವರು ಕಾಯಕಕ್ಕೆ ಮಹತ್ವ ನೀಡಿದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದಿನಗಳಲ್ಲೂ ವ್ಯವಹಾರದ ಬಗ್ಗೆ ಕಾಳಜಿ ವಹಿಸುತ್ತಿದ್ದರು. ಅವರು ಜ್ಞಾನದ ನಿಧಿಯಾಗಿದ್ದರು ಎಂದು ಬಣ್ಣಿಸಿದರು.
ಎಸ್‌ಎಸ್ ಕೇರ್ ಟ್ರಸ್ಟ್, ಎಸ್‌ಎಸ್ ಜನಕಲ್ಯಾಣ ಟ್ರಸ್ಟ್, ಸಂಕಲ್ಪ ಐಎಎಸ್ ಕೋಚಿಂಗ್ ಕೇಂದ್ರ ಹೀಗೆ ಅವರ ಅವಧಿಯಲ್ಲಿ ಆಗಿರುವ ಸಮಾಜಮುಖಿ ಕಾರ್ಯಗಳ ಕುರಿತು ತಿಳಿಸಿದರು.