ದಾವಣಗೆರೆಯ ಸುದ್ದಿಗೋಷ್ಠಿಯಲ್ಲಿ ದಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಜಿಲ್ಲಾ ಅಭಿವೃದ್ಧಿ ಸಮಿತಿ ಸದಸ್ಯ ಇಂದೂಧರ ನಿಶಾನಿಮಠ, ವೆಂಕಟರಮಣರೆಡ್ಡಿ, ಶಿವಕುಮಾರ್, ಸುರೇಶ್ ಇದ್ದರು.
- ದಿ ಆರ್ಟ್ ಆಫ್ ಲಿವಿಂಗ್‌ನಿಂದ ಆಯೋಜನೆ
- ರವಿಶಂಕರ್ ಗುರೂಜಿ 70ನೇ ಜನ್ಮ ದಿನಾಚರಣೆ
- ಸಂಸ್ಥೆಯಿಂದ ಕೌಶಲ ಅಭಿವೃದ್ಧಿ ತರಬೇತಿ
ದಾವಣಗೆರೆ: ದಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ 45ನೇ ವಾರ್ಷಿಕೋತ್ಸವ, ರವಿಶಂಕರ್ ಗುರೂಜಿ ಅವರ 70ನೇ ವರ್ಷದ ಜನ್ಮದಿನಾಚರಣೆ ಅಂಗವಾಗಿ ಇಲ್ಲಿನ ಡಾ. ಸದ್ಯೋಜಾತ ಹಿರೇಮಠದಲ್ಲಿ ಮೇ 28ರಂದು ಬೆಳಗ್ಗೆ 10-30ಕ್ಕೆ ಅನುದಿನದ ತೆರೆಮರೆಯ ಸಾಧಕರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.
ರಾಜ್ಯದಲ್ಲೇ ಮೊದಲ ಬಾರಿಗೆ ಆಯೋಜನೆಯಾದ ಕಾರ್ಯಕ್ರಮದಲ್ಲಿ ಯಾವುದೇ ಪ್ರಚಾರವಿಲ್ಲದೆ ಸೇವೆ ಸಲ್ಲಿಸುತ್ತಿರುವ ಏಳು ಮಂದಿ ಪ್ರಮುಖರಿಗೆ ಪ್ರಶಸ್ತಿ ನೀಡಲಾಗುತ್ತಿದೆ ಎಂದು ದಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಜಿಲ್ಲಾ ಅಭಿವೃದ್ಧಿ ಸಮಿತಿ ಸದಸ್ಯ ಇಂದೂಧರ ನಿಶಾನಿಮಠ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಕ್ಕಳ ತಜ್ಞ ಡಾ.ಬಾಣಾಪುರಮಠ, ಅಂತಾರಾಷ್ಟ್ರೀಯ ಪವರ್ ಲಿಫ್ಟರ್ ಎಂ. ಮಹೇಶ್ವರಯ್ಯ, ಹಾವೇರಿಯ ಜನರಲ್ ಸರ್ಜನ್ ಡಾ. ಬಸವರಾಜು ವೀರಾಪುರ, ಗದಗ್ ಜಿಲ್ಲೆಯ ಸೌತ್ ಏಷ್ಯನ್ ಥ್ರೋಬಾಲ್ ಭಾರತ ತಂಡ ಸಂಯೋಜಕಿ ಮಾಲತಿ ಇನಾಮತಿ, ರಾಜೀವ್‌ಗಾಂಧಿ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ. ಐ.ಬಿ. ಕೊಟ್ಟೂರುಶೆಟ್ಟಿ, ವಿಜಯನಗರ ಜಿಲ್ಲೆಯ ವಿಜಯರಾಜ್, ಧಾರವಾಡ ಜಿಲ್ಲೆಯ ಎನ್‌ಜಿಎ ಸಂಸ್ಥೆಯ ಮಾರುತಿ ಪಾಟೀಲ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಡಿ ಆರ್ಟ್ ಆಫ್ ಲಿವಿಂಗ್‌ನ ಶ್ರೀ ಸ್ವಾಮಿ ಶರಣಾನಂದ ದಿವ್ಯ ಸಾನಿಧ್ಯ ವಹಿಸುವರು. ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಎಸ್ಪಿ ಎಚ್.ಟಿ. ಶೇಖರ್ ಭಾಗಿಯಾಗುವರು. ಇದೇ ವೇಳೆ ಆಶ್ರಮ ತಂಡದಿಂದ ಸತ್ಸಂಗ ಹಾಗೂ ಧ್ಯಾನ ನಡೆಯಲಿದೆ ಎಂದು ಮಾಹಿತಿ ನೀಡಿದರು.
ರೇವಣಸಿದ್ದಪ್ಪ ಮಾತನಾಡಿ ರವಿಶಂಕರ್ ಗುರೂಜಿ ಅವರ ಸೂಚನೆಯಂತೆ ದಾವಣಗೆರೆ ಅಥವಾ ಶಿವಮೊಗ್ಗ ಜಿಲ್ಲೆಯಲ್ಲಿ ಮೆಗಾ ಈವೆಂಟ್ ನಡೆಸುವ ಉದ್ದೇಶವಿದ್ದು, ಮನೆ ಮನೆಗೆ ಸಂಸ್ಥೆಯನ್ನು ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
10ನೇ ತರಗತಿ ವಿದ್ಯಾರ್ಥಿಗಳಿಗೆ ಬೆಂಗಳೂರು ಆರ್ಟ್ ಆಫ್ ಲಿವಿಂಗ್ ಮೂಲಕ ಕೌಶಲ ಅಭಿವೃದ್ಧಿ ತರಬೇತಿ ನೀಡಿ ಉದ್ಯೋಗಾವಕಾಶ ಕಲ್ಪಿಸಲಾಗುತ್ತಿದೆ. 25 ವರ್ಷದ ಹಿಂದೆ ದಾವಣಗೆರೆಯಿಂದಲೇ ಸುದರ್ಶನ ಕ್ರಿಯೆ ಆರಂಭಿಸಲಾಗಿತ್ತು. ಈಗ ಮತ್ತೆ ನಡೆಯಲಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸದಸ್ಯರಾದ ವೆಂಕಟರಮಣರೆಡ್ಡಿ, ಶಿವಕುಮಾರ್, ಸುರೇಶ್ ಇದ್ದರು.