ದಾವಣಗೆರೆಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದ ಪ್ರಾಧಿಕಾರದ ಸದಸ್ಯಕಾರ್ಯದರ್ಶಿ ಮಹಾವೀರ ಕರೆಣ್ಣವರ. 
ದಾವಣಗೆರೆ

ರಾಜಿ ಮೂಲಕ ಸುಪ್ರೀಂ ಪ್ರಕರಣಗಳ ಇತ್ಯರ್ಥ

ಪ್ರಮುಖ ಮುಖ್ಯಾಂಶಗಳು

  • ವಿಶೇಷ ಲೋಕ ಅದಾಲತ್ ಆಯೋಜನೆ
  • ಕಾನೂನು ಸೇವೆಗಳ ಪ್ರಾಧಿಕಾರ
ದಾವಣಗೆರೆ : ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಲು ವಿಶೇಷ ಲೋಕ ಅದಾಲತ್ ಆಯೋಜನೆ ಮಾಡಲಾಗಿದ್ದು, ಜಿಲ್ಲೆಯ ಸಾರ್ವಜನಿಕರು ಇದರ ಪ್ರಯೋಜನ ಪಡೆಯಬಹುದು.
ವಿಶೇಷ ಲೋಕ ಅದಾಲತ್ ಕುರಿತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಡಿಯೋ ಸಂವಾದದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯಕಾರ್ಯದರ್ಶಿ ಮಹಾವೀರ ಕರೆಣ್ಣವರ ಮಾಹಿತಿ ನೀಡಿದರು.
ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ರಾಜ್ಯದ 4328 ಪ್ರಕರಣಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ದಾವಣಗೆರೆ ಜಿಲ್ಲೆಯ 36 ಕೇಸ್‌ಗಳಿವೆ. ಇವುಗಳಲ್ಲದೆ ಸುಪ್ರೀಂ ಕೋರ್ಟ್‌ನಲ್ಲಿರುವ ಬೇರೆ ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥ ಮಾಡಿಕೊಳ್ಳಲು ಬಯಸಿದರೆ ಅವುಗಳನ್ನೂ ವಿಶೇಷ ಲೋಕ ಅದಾಲತ್‌ನಲ್ಲಿ ಬಗೆಹರಿಸಿಕೊಳ್ಳಲು ಅವಕಾಶವಿದೆ ಎಂದು ಹೇಳಿದರು.
ಸಂಬಂಧಪಟ್ಟ ಕಕ್ಷಿದಾರರು ತಾಲೂಕು ಕಾನೂನು ಸೇವಾ ಸಮಿತಿಗಳಲ್ಲಿ ಅಥವಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವನ್ನು ಈ ವಿಚಾರವಾಗಿ ಸಂಪರ್ಕಿಸಬಹುದು ಎಂದು ತಿಳಿಸಿದರು.
ವಿಶೇಷ ಲೋಕ ಅದಾಲತ್ ಆ. 21ರಿಂದ 23ರ ವರೆಗೆ ನಡೆಯಲಿದೆ. ಅಷ್ಟರೊಳಗಾಗಿ ಸ್ಥಳೀಯವಾಗಿ ರಾಜಿ ಸಂಧಾನ ಮಾಡಿಸಿ, ಒಪ್ಪಂದ ಪತ್ರವನ್ನು ಸಿದ್ಧಪಡಿಸಿ ಕಳಿಸಲಾಗುವುದು ಎಂದರು.
ವಿಶೇಷ ಲೋಕ ಅದಾಲತ್‌ನಲ್ಲಿ ಚೆಕ್ ಅಮಾನ್ಯ ಪ್ರಕರಣಗಳು, ಬ್ಯಾಂಕ್ ವಸೂಲಾತಿ, ಭೂಸ್ವಾಧೀನ ದಾವೆಗಳು, ಜೀವನಾಂಶ, ವಿಚ್ಛೇದನ ಸೇರಿ ವೈವಾಹಿಕ ಪ್ರಕರಣಗಳು, ಕಾರ್ಮಿಕ ವಿವಾದಗಳು, ಕೈಗಾರಿಕಾ ಕಾರ್ಮಿಕರ ವೇತನ ಕ್ಲೇಮುಗಳು, ವಿದ್ಯುತ್ ಮತ್ತು ನೀರಿನ ಶುಲ್ಕದ ಬಾಕಿ ಹಾಗೂ ರಾಜಿಯಾಗಬಲ್ಲ ಕ್ರಿಮಿನಲ್ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದೆ. ವಿಶೇಷವಾಗಿ ಅಪಘಾತದ ಪ್ರಕರಣಗಳಲ್ಲಿ ಇಲ್ಲಿ ಶೀಘ್ರ ಪರಿಹಾರ ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದರು.
ಉಪ ಮುಖ್ಯ ಕಾನೂನು ಅಧೀಕ್ಷಕ ವೆಂಕಟೇಶ್, ವಕೀಲೆ ವನ್ಯಶ್ರೀ ಇದ್ದರು.