ದಾವಣಗೆರೆ ದುರ್ಗಾಂಬಿಕಾ ದೇಗುಲದೆದುರು ಭಾನುವಾರ ಶುರುವಾದ ವಾರದ ಸಂತೆಯಲ್ಲಿ ಜಮಾಯಿಸಿದ್ದ ತರಕಾರಿ- ಹಣ್ಣು ವ್ಯಾಪಾರಿಗಳು.  
ದಾವಣಗೆರೆ

ದುಗ್ಗಮ್ಮನ ಸನ್ನಿಧಿಯಲ್ಲಿ ಸರಣಿ ಸಂತೆ ಶುರು

ಪ್ರಮುಖ ಮುಖ್ಯಾಂಶಗಳು

  • ವಾಡಿಕೆ ಕರೆಗೆ ಸ್ಪಂದಿಸಿದ ವ್ಯಾಪಾರಸ್ಥರು
  • ಸಮೃದ್ಧ ಮಳೆಗಾಗಿ ಮೊರೆ ಇಟ್ಟ ಭಕ್ತರು
  • ವಿರಕ್ತಮಠದವರೆಗೂ ವಿಸ್ತರಿಸಿದ್ದ ವಹಿವಾಟು
ದಾವಣಗೆರೆ: ಮುಂಗಾರು ಮಳೆ ಈ ಬಾರಿ ಕೈಕೊಟ್ಟಿದ್ದು, ಕೃಷಿ ಕಾರ್ಯಕ್ಕೆ ತಣ್ಣೀರೆರೆಚಿದೆ. ವ್ಯಾಪಾರೋದ್ಯಮದಲ್ಲಿ ಗರ ಬಡಿದಿದೆ. ಚಂಚಲಚಿತ್ತ ವರುಣದೇವನನ್ನು ಒಲಿಸಿಕೊಳ್ಳಲು ಜಿಲ್ಲಾದ್ಯಂತ ನಾನಾ ಕಸರತ್ತು ನಡೆದಿವೆ. ಇದರ ಸಾಲಿಗೆ ಮತ್ತೊಂದು ಸೇರ್ಪಡೆ ನಗರದೇವತೆ ದುರ್ಗಾಂಬಿಕೆ ಸನ್ನಿಧಿಯಲ್ಲಿ ಸರಣಿ ಸಂತೆ.
ನಗರದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನ ಆವರಣದಲ್ಲಿ ಐದು ಭಾನುವಾರಗಳಂದು ಸರಣಿ ವಾರದ ಸಂತೆಗೆ ಚಾಲನೆ ದೊರೆತಿದೆ. ದೇವಸ್ಥಾನ ಟ್ರಸ್ಟ್ ತೀರ್ಮಾನದಂತೆ ವ್ಯಾಪಾರಸ್ಥರು ಸ್ಪಂದಿಸಿದರು. ಬೆಳಗ್ಗೆ 7ರಿಂದಲೇ ತರಕಾರಿ-ಹಣ್ಣು, ಸೊಪ್ಪು, ದಿನಸಿ ಸಾಮಗ್ರಿಗಳನ್ನು ವರ್ತಕರು ಹರವಿಕೊಂಡು ವ್ಯಾಪಾರ ನಡೆಸಿದರು. ಸಮೃದ್ಧ ಮಳೆಗಾಗಿ ದುಗ್ಗಮ್ಮನತ್ತ ಮೊರೆ ಇಟ್ಟರು.
ಬರಗಾಲ ಬಂದಾಗೆಲ್ಲ, ಸುಮಾರು 35ಕ್ಕೂ ಹೆಚ್ಚು ವರ್ಷದಿಂದಲೂ ಮಳೆಗಾಗಿ ನಿವೇದಿಸಿ, ಐದು ವಾರಗಳ ಸಂತೆ ನಡೆಸುವ ಪ್ರತೀತಿ ನಡೆದುಕೊಂಡು ಬಂದಿದೆ. ಟ್ರಸ್ಟ್ ಕೂಡ ಪಾಲಿಸುತ್ತಲೇ ಇದೆ. ವಹಿವಾಟಾಗಲಿ, ಆಗದಿರಲಿ ವ್ಯಾಪಾರಿಗಳು ಕಿವಿಗೊಡುವ ಜತೆಗೆ ಗ್ರಾಹಕರೂ ಸ್ಪಂದಿಸಿದ್ದಾರೆ. ನಂಬಿಕೆಗೆ ತಕ್ಕಂತೆ ಕಾಕತಾಳೀಯವಾಗಿ ಕೆಲವು ಬಾರಿ ಮಳೆಯಾದ ಉದಾಹರಣೆ ಇದೆ.
ದುಗ್ಗಮ್ಮನ ದೇವಸ್ಥಾನದ ಆವರಣದ ತುದಿಯಿಂದ ವಿನಾಯಕ ದೇವಸ್ಥಾನ ದಾಟಿ ವಿರಕ್ತಮಠದವರೆಗೂ ಸಂತೆ ಮಾರುಕಟ್ಟೆ ವಿಸ್ತರಿಸಿತ್ತು. ಕೆಲ ವರ್ತಕರು ಬಿಸಿಲಿನ ಧಗೆ ಲೆಕ್ಕಿಸದೆ ತಲೆ ಮೇಲೆ ಸೀರೆ, ಟವೆಲ್ ಹೊದ್ದು ವ್ಯಾಪಾರ ಮಾಡಿದರು. ಕೆಲವೆಡೆ ದೊಡ್ಡ ಛತ್ರಿಗಳನ್ನು ಬಳಸಿದ್ದರು. ಬೆಳಗ್ಗೆ ಟೊಮ್ಯಾಟೋ ಸೇರಿ ಕೆಲವು ತರಕಾರಿಗಳ ಬೆಲೆ ಝಳ ಹೆಚ್ಚಿದಂತೆಲ್ಲ ಇಳಿಕೆಯಾಗಿದ್ದು ಕಂಡುಬಂದಿತು.
ಬೆಳಗ್ಗೆ ಕಾಯಿಪೇಟೆ ಸುತ್ತ ತರಕಾರಿ ಹಾಕಲು ಬರುತ್ತಿದ್ದವರನ್ನು ನಗರಪಾಲಿಕೆ ವಿಶೇಷ ವಾಹನದ ಸಿಬ್ಬಂದಿ ಮೈಕ್‌ನಲ್ಲಿ ಕೂಗಿ ದೇವಸ್ಥಾನದತ್ತ ಕಳುಹಿಸುತ್ತಿದ್ದುದು ಸಾಮಾನ್ಯವಾಗಿತ್ತು. ಬಾಳೆಹಣ್ಣು-ತೆಂಗಿನಕಾಯಿ ಮೊದಲಾದ ಪೂಜಾ ಸಾಮಗ್ರಿಗಳೇ ಕಾಣುತ್ತಿದ್ದ ದೇಗುಲದ ಆವರಣದಲ್ಲಿ ತರಕಾರಿ-ಸೊಪ್ಪಿನ ಟ್ರೇಗಳು, ಹಣ್ಣಿನ ತಳ್ಳುಗಾಡಿಗಳು ಹರಿದಾಡಿದವು. ಮುಂಜಾನೆ ಕಂಡುಬಂದ ‘ಮೋಡ ಕವಿದ ವಾತಾವರಣ’ ಕೆಲವೆಡೆ ಕಾಣಿಸಿಕೊಂಡಿದ್ದ ಅದೇ ಹೆಸರಿನ ಸಿನಿಮಾ ಪೋಸ್ಟರ್‌ಗಳಲ್ಲೇ ಉಳಿದುಕೊಂಡಿತು!
ಮುಂಗಾರು ಮಳೆ ಮಾಯವಾಗಿದೆ. ದಾವಣಗೆರೆ ಜನರಿಗೆ ದುಗ್ಗಮ್ಮನ ಆಶೀರ್ವಾದ ಬೇಕೇ ಬೇಕು. ಮಳೆ ಇಲ್ಲಾಂದ್ರೆ ಬದುಕು ನಡೆಸೋದೇ ಕಷ್ಟ. ಮಳೆಗಾಗಿ ವಾರದ ಸಂತೆ ಹಚ್ಚಿದ್ದೇವೆ, ವ್ಯಾಪಾರ ಆಗಲಿ, ಬಿಡಲಿ ಸಂತೆ ಮಾಡಲಿಕ್ಕೆ ಬಂದಿದ್ದೇವೆ ಎಂದು ವ್ಯಾಪಾರಿ ಕಾಳಿಬಾಯಿ ಹೇಳಿಕೊಂಡರು.
ಮಳೆ ಬಾರದಿದಿದ್ದಾಗ ದುಗ್ಗಮ್ಮನ ದೇವಸ್ಥಾನದ ಬಳಿ ಪುರಾತನ ಕಾಲದಿಂದಲೂ ಸಂಪ್ರದಾಯದಂತೆ ಐದು ವಾರಗಳ ಸಂತೆ ನಡೆಸಲಾಗಿದೆ. ಕೆಲವು ಬಾರಿ 2-3 ವಾರಕ್ಕೆ ಮಳೆ ಸುರಿದಿದೆ. ಈ ಬಾರಿ ಮಳೆಯಾದಲ್ಲಿ ರೈತರ ಜನತೆ ನಮ್ಮ ಹೊಟ್ಟೆಪಾಡು ನಡೆಯುತ್ತದೆ ಎಂದು ಹೇಳಿದರು ವ್ಯಾಪಾರಿ ಶೋಭಾ.