ಜಗಳೂರು ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡ್ದಿ 2025-26ನೇ ಸಾಲಿನ ಸಾಮಾನ್ಯ ಸಭೆಯಲ್ಲಿ ತಾಪಂ ಆಡಳಿತಾಧಿಕಾರಿ ಜಿ. ಕೊಟ್ರೇಶ್ ಮಾತನಾಡಿದರು. ತಾಪಂ ಇಒ ಕೆಂಚಪ್ಪ ಇದ್ದರು.Meeting
- ಅಧಿಕಾರಿಗಳಿಗೆ ಜಿ. ಕೊಟ್ರೇಶ್ ತಾಕೀತು
- 2025-26ನೇ ಸಾಲಿನ ಸಾಮಾನ್ಯ ಸಭೆ
ಜಗಳೂರು: ಸರ್ಕಾರ ಬಿಡುಗಡೆ ಮಾಡುವ ಎಸ್‌ಇಪಿ, ಟಿಎಸ್‌ಪಿ ಅನುದಾನವನ್ನು ಕಡ್ಡಾಯವಾಗಿ ಪ್ರತಿ ಇಲಾಖೆಯೂ ಬಳಕೆ ಮಾಡುವಂತೆ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಜಿ. ಕೊಟ್ರೇಶ್ ತಿಳಿಸಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ 2025-26ನೇ ಸಾಲಿನ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.
ಗ್ರಾಮೀಣ ಎಸ್ಸಿ-ಎಸ್ಟಿ ಸಮುದಾಯಗಳ ಅಭಿವೃದ್ಧಿಗೆ ವಿವಿಧ ಇಲಾಖೆಗಳಲ್ಲಿ ಅನುದಾನ ಇದ್ದರೂ ಕೆಲವು ಅಧಿಕಾರಿಗಳು ವರ್ಷವಿಡೀ ಹಣ ಖರ್ಚು ಮಾಡದೇ ಬೇಜಬ್ದಾರಿ ತೋರಿದ್ದಾರೆ ಈ ಬಾರಿ ಒಂದು ರೂಪಾಯಿ ಬಾಕಿ ಉಳಿಸಿಕೊಳ್ಳದೇ ಮಾ.30 ರೊಳಗೆ ಬಿಲ್ ಪಾಸ್ ಮಾಡಲು ತಾಕೀತು ಮಾಡಿದರು.
ಅನಗತ್ಯವಾಗಿ ವಿಳಂಬ ಮಾಡಿದರೆ ಸುಮ್ಮನಿರುವುದಿಲ್ಲ. ಅಧಿಕಾರಿಗಳು ಇಂದಿನಿಂದಲೇ ಕಾಮಗಾರಿ ಸೇರಿ ಇತರೆ ಅಭಿವೃದ್ಧಿ ಕೆಲಸಗಳನ್ನು ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.
ತಾಲೂಕಿನಲ್ಲಿ ಇತ್ತೀಚೆಗೆ ಅಡಕೆ ಬೆಳೆಗಾರರ ಸಂಖ್ಯೆ ಹೆಚ್ಚುತ್ತಿದೆ. ಎಲ್ಲರೂ ವಾಣಿಜ್ಯ ಬೆಳೆಗಳ ಕಡೆಗೆ ಮುಖ ಮಾಡಿದರೆ ಆಹಾರ ಧಾನ್ಯಗಳಿಗೆ ಹಾಹಾಕಾರ ಎದುರಾಗ ಬಹುದು. ಸಿರಿಧಾನ್ಯ ಸೇರಿ ಅಲ್ಪಾವಧಿ ಬೆಳೆ ಬೆಳೆದು ಮಾದರಿ ಕೃಷಿಕರಾಗಬೇಕು ಎಂದರು.
ಶಿವರಾತ್ರಿ ಮುಗಿಯುತ್ತಿದ್ದಂತೆ ಬೇಸಿಗೆ ಆರಂಭವಾಗಲಿದೆ. ತಾಲೂಕಿನ ಯಾವುದೇ ಹಳ್ಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಲು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಸೂಚಿಸಿದರು. ಅರಣ್ಯ ಪ್ರದೇಶದಲ್ಲಿ ಪ್ರಾಣಿ-ಪಕ್ಷಿಗಳಿಗೆ ನೀರಿನ ತೊಟ್ಟಿ ನಿರ್ಮಿಸಲು ಹಾಗೂ ಹೊಸದಾಗಿ ನೆಟ್ಟ ಗಿಡಗಳಿಗೆ ನಿಯಮಿತವಾಗಿ ನೀರು ಹಾಯಿಸಿ ಪರಿಸರ ರಕ್ಷಿಸಲು ಅರಣ್ಯ ಇಲಾಖೆಗೆ ಸಲಹೆ ನೀಡಿದರು.
ಜಾನುವಾರುಗಳಿಗೆ ಕಾಲುಬಾಯಿ ರೋಗ ಹರಡದಂತೆ ಲಸಿಕೆ ಹಾಗೂ ಔಷಧೋಪಚಾರ ಸಿದ್ಧತೆ ಮಾಡಿಕೊಳ್ಳಲು ಪಶು ಇಲಾಖೆಗೆ ಸೂಚಿಸಿದರು.
ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಸಾದಿಕ್‌ಉಲ್ಲಾ ಮಾತನಾಡಿ, ತಾಲೂಕಿನ ಯಾವುದೇ ಹಳ್ಳಿಗಳಲ್ಲೂ ಈವರೆಗೂ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿಲ್ಲ. ಮುಂಜಾಗ್ರತಾ ಕ್ರಮವಾಗಿ ಎಚ್ಚರಿಕೆ ವಹಿಸಲಾಗಿದೆ. ಜೆಜೆಎಂ ಯೋಜನೆಯ ಕಾಮಗಾರಿಗಳು ಮುಕ್ತಾಯ ಹಂತದಲ್ಲಿದೆ. ಆರಂಭವಾದರೆ ಯಾವ ಸಮಸ್ಯೆಯಾಗುವುದಿಲ್ಲ. ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿಗೆ ಸಾಕಷ್ಟು ಹಣಬೇಕಾಗಿದೆ. ಹಾಗಾಗಿ ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದರು.
ತಾಪಂ ಕೆಂಚಪ್ಪ ಮಾತನಾಡಿ, ತಾಪಂ ಅನುದಾನ ಸೇರಿ ಎಸ್‌ಇಪಿ ಮತ್ತು ಟಿಎಸ್‌ಪಿ ಅನುದಾನಗಳು ಮಾರ್ಚ್ ಅಂತ್ಯಕ್ಕೆ ಬಳಕೆಯಾಗಿ ಬಿಲ್ ಮಂಡಿಸಲು ತಡಮಾಡಬೇಡಿ, ಶೀಘ್ರವೇ ಬಿಲ್ ಮಾಡಿಸಿಕೊಂಡು ಅನುದಾನ ಬಳಕೆ ಮಾಡಬೇಕು. ವಾರ್ಷಿಕ ನಿಗದಿತ ಗುರಿ ತಲುಪಿ ಎಂದು ಹೇಳಿದರು.
ತಾಪಂ ಇಒ ಕೆಂಚಪ್ಪ, ಪಪಂ ಮುಖ್ಯಾಧಿಕಾರಿ ಲೋಕ್ಯಾ ನಾಯ್ಕ, ಪಿಡಬ್ಲುೃಡಿ ರಾಜ್, ಜಿಪಂ ಎಇಇ ಶಿವಮೂರ್ತಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಶ್ವೇತಾ, ತೋಟಗಾರಿಕಾ ಸಹಾಯಕ ನಿರ್ದೇಶಕ ಪ್ರಭುಶಂಕರ್ ಮತ್ತಿತರರಿದ್ದರು.
ಎಸ್‌ಎಸ್‌ಎಲ್‌ಸಿ ಉತ್ತಮ ಫಲಿತಾಂಶಕ್ಕೆ ಶ್ರಮ
ಜಗಳೂರು ಈ ಹಿಂದೆ ಸತತ ನಾಲ್ಕು ಬಾರಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿತ್ತು. ಈ ವರ್ಷವೂ ಅದು ಮರುಕಳಿಸಬೇಕು ಎಂದು ಬಿಇಒ ಹಾಲಮೂರ್ತಿ ಸೂಚಿಸಿದರು. ತಾಲೂಕಿನ 2672 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದು, ಪ್ರತಿ ವಿದ್ಯಾರ್ಥಿಯೂ ಶೇ. 80ಕ್ಕೂ ಹೆಚ್ಚು ಅಂಕ ಪಡೆಯುವಂತೆ ವಿಶೇಷ ತರಗತಿಗಳನ್ನು ಆಯೋಜಿಸಲು ತಿಳಿಸಿದರು. ಪರೀಕ್ಷಾ ಸಮಯದಲ್ಲಿ ವಿದ್ಯುತ್ ವ್ಯತ್ಯಯ ಮಾಡದಂತೆ ಬೆಸ್ಕಾಂ ಇಲಾಖೆಗೆ ಸೂಚನೆ ನೀಡಲಾಯಿತು.