ಕಿತ್ತೂರು ಚನ್ನಮ್ಮ ಜಯಂತಿ ಕಾರ್ಯಕ್ರಮವನ್ನು ಶಾಸಕ ಡಿ.ಜಿ. ಶಾಂತನಗೌಡ ಉದ್ಘಾಟಿಸಿದರು. ಸುರೇಶ್, ಗಿರೀಶ್ ನಾಡಿಗ್, ವೀರಣ್ಣ ಇತರರಿದ್ದರು. Jayanthi
ದಾವಣಗೆರೆ

ಸಮಾಜದಲ್ಲಿ ಹೆಚ್ಚುತ್ತಿದೆ ಸ್ವಾರ್ಥ

ಜಾತಿಗೊಂದು ಮಠ, ಗುರುಗಳಿಂದ ಸಮಾಜದಲ್ಲಿ ಸೌಹಾರ್ದತೆ ಕಡಿಮೆ

ಹೊನ್ನಾಳಿ: ಇತ್ತೀಚಿನ ದಿನಗಳಲ್ಲಿ ಜಾತಿಗೊಂದು ಮಠ, ಗುರುಗಳು ಆಗುವ ಮೂಲಕ ಸಮಾಜದಲ್ಲಿ ಸೌಹಾರ್ದ ವಾತಾವರಣ ಕಡಿಮೆ ಯಾಗುತ್ತಿದೆ ಹಾಗೂ ಜನರಲ್ಲಿ ಸ್ವಾರ್ಥ ಗುಣ ಹೆಚ್ಚಾಗುತ್ತಿದೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಕಳವಳ ವ್ಯಕ್ತಪಡಿಸಿದರು.

ತಾಲೂಕು ರಾಷ್ಟ್ರೀಯ ಹಬ್ಬಗಳ ಸಮಿತಿ ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇಶದ ಇತಿಹಾಸದಲ್ಲಿ ಬ್ರಿಟಿಷರ ವಿರುದ್ಧ ಧೈರ್ಯವಾಗಿ ಹೋರಾಟ ನಡೆಸಿ ಅವರಿಗೆ ತಕ್ಕ ಪಾಠ ಕಲಿಸಿದ ವೀರತ್ವ ಹಾಗೂ ಸ್ವಾಭಿಮಾನದ ಸಂಕೇತ ಎಂದರೆ ಅದು ಕಿತ್ತೂರು ರಾಣಿ ಚನ್ನಮ್ಮ. 12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣ ಸಮಾಜದಲ್ಲಿದ್ದ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿದರೆ, ಕಿತ್ತೂರು ರಾಣಿ ಚನ್ನಮ್ಮ ತಮ್ಮ ವೀರಾವೇಶದ ಹೋರಾಟದ ಮೂಲಕ ದೇಶದ ಪ್ರತಿಯೊಬ್ಬ ಪ್ರಜೆಗೂ ಸ್ಫೂರ್ತಿದಾಯಕರಾಗಿದ್ದಾರೆ ಎಂದರು.

ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ವೀರಣ್ಣ ಮಾತನಾಡಿ, ಸೂರ್ಯ ಮುಳುಗದ ಸಾಮ್ರಾಜ್ಯ ಎಂದು ಬೀಗುತ್ತಿದ್ದ ಬ್ರಿಟಿಷರ ಹುಟ್ಟಡಗಿಸಿ ಪ್ರಥಮ ಜಯ ಸಾಧಿಸಿದ ಕೀರ್ತಿ ವೀರವನಿತೆ ಕಿತ್ತೂರು ರಾಣಿ ಚನ್ನಮ್ಮಗೆ ಸಲ್ಲುತ್ತದೆ ಎಂದರು. ಪಂಚಮಸಾಲಿ ಸಮಾಜದ ಮುಖಂಡರು ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಕಿತ್ತೂರು ರಾಣಿ ಚನ್ನಮ್ಮ ಅವರ ಹೆಸರು ಮರುನಾಮಕರಣ ಮಾಡಬೇಕೆಂದು ಶಾಸಕರಿಗೆ ಮನವಿ ಸಲ್ಲಿಸಿದರು.

ಶಿಕ್ಷಕ ಗಿರೀಶ್ ನಾಡಿಗ್ ಅವರು ವಿಶೇಷ ಉಪನ್ಯಾಸ ನೀಡಿದರು. ಗ್ರೇಡ್-2 ತಹಸೀಲ್ದಾರ್ ಸುರೇಶ್, ಸಮಾಜದ ಮುಖಂಡರಾದ ಸಾಯಿ ಹಾಲೇಶ್, ಸುಮಾ ರವಿಕುಮಾರ್, ಎಚ್.ಬಿ. ಅಶೋಕ್, ಸುರೇಶ್, ಬನಶಂಕರಿ, ಹರೀಶ್, ರಾಜು ಕೋಟೆಮಲ್ಲೂರು, ಕೆ.ಸಿ. ಕವಿತಾ, ಹಾಲಮ್ಮ, ಗಿರಿಜಮ್ಮ, ಗಿರೀಶ್, ಪ್ರಶಾಂತ್ ಇತರರಿದ್ದರು.