ದಾವಣಗೆರೆ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮವನ್ನು ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಉದ್ಘಾಟಿಸಿದರು. ಹಿರಿಯ ಸಿವಿಲ್ ನ್ಯಾಯಾಧೀಶ ಸಿ. ರಂಗೇಗೌಡ, ಡಾ. ಕೆ.ಎಸ್.ಮಧು, ಡಾ.ಮಂಜುನಾಥ ಪಾಟೀಲ್, ಡಾ. ಎಚ್.ಸಿ. ಸುದೀಪ್‌ಕುಮಾರ್, ಡಾ. ಗಂಗಾಧರ್, ತಿಪ್ಪೇಸ್ವಾಮಿ, ಪಿ.ನಾಗಪ್ಪ ಇದ್ದರು.
- ಹುದ್ದೆ ಗಳಿಸಿದ ಬಳಿಕ ಮದುವೆ ಚಿಂತನೆ ಇರಲಿ
- ಸರ್ಕಾರದ ನಿಯಮಗಳ ಪಾಲನೆ ಎಲ್ಲರ ಹೊಣೆ
- ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅನಿಸಿಕೆ
ದಾವಣಗೆರೆ: ಸಾರ್ವಜನಿಕರಲ್ಲಿ ಸ್ವಯಂ ಹೊಣೆಗಾರಿಕೆ ಮನೋಭಾವ ಬಾರದ ಹೊರತು ಜನಸಂಖ್ಯಾ ಸ್ಫೋಟ ನಿಲ್ಲಿಸಲಾಗದು ಎಂದು ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ಇಲ್ಲಿನ ಮೋತಿ ವೀರಪ್ಪ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೆಲವು ದೇಶಗಳಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸೌಲಭ್ಯ ನೀಡದಿರುವ ಕಾನೂನಿವೆ. ಭಾರತದಂತಹ ದೇಶದಲ್ಲಿ ಅಂತಹ ಒತ್ತಡ ಬಾರದು. ಆದರೆ ಅದೇ ಕಾರಣಕ್ಕೆ ಬೇಕಾಬಿಟ್ಟಿ ಮಕ್ಕಳನ್ನು ಹೊಂದುವುದು ಸರಿಯಲ್ಲ. ಹಿಂದೆಲ್ಲ ಕೆಲವು ಕುಟುಂಬಗಳಲ್ಲಿ ಹೆಚ್ಚು ಮಕ್ಕಳಿರುತ್ತಿದ್ದರು. ಈಗಲೂ ಹಾಗೆ ಇರಬೇಕು ಎಂದರೆ ಹೇಗೆ? ಎಂದು ಪ್ರಶ್ನಿಸಿದರು.
1.45 ಬಿಲಿಯನ್ ಜನಸಂಖ್ಯೆ ಹೊಂದುವ ಮೂಲಕ ಭಾರತ ದೇಶ, ಚೈನಾವನ್ನೂ ಹಿಂದಿಕ್ಕಿ ಮೊದಲ ಸ್ಥಾನದಲ್ಲಿದೆ. ಸ್ಪರ್ಧೆಯಲ್ಲಿ ಮುಂದಿರುವುದು ದುರಾದೃಷ್ಟಕರ. ಕರ್ನಾಟಕದಲ್ಲಿ 6 ಕೋಟಿ ಜನರಿದ್ದಾರೆ. ಸರ್ಕಾರ ರೂಪಿಸಿದ ಕಾನೂನು ನಿಯಮಗಳನ್ನು ಅನುಷ್ಠಾನಗೊಳಿಸುವ ಹೊಣೆ ಎಲ್ಲರ ಕರ್ತವ್ಯ. ಭಾರತಕ್ಕೆ ನಾವೇನು ಮಾಡಿದ್ದೇವೆ ಎಂಬುದನ್ನು ಗಮನಿಸದಿದ್ದರೆ ಗಂಭೀರ ಸ್ಥಿತಿ ಕಾದಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಹೆಣ್ಣುಮಕ್ಕಳ ಮದುವೆಗೆ 18 ವರ್ಷ ನಿಗದಿಗೊಳಿಸಿದ್ದಕ್ಕೆ ಸಕಾರಣವಿದೆ. ಆದರೆ ಹಣ ಮತ್ತಿತರೆ ವಿಚಾರಕ್ಕೆ 18 ವರ್ಷದೊಳಗಿನ ಅಪ್ರಾಪ್ತರಿಗೆ ಮದುವೆ ಮಾಡಲಾಗುತ್ತಿದೆ. ನವಜಾತ ಶಿಶುಗಳನ್ನು ನಾಲೆ ಅಥವಾ ಕಸದ ತಿಪ್ಪೆಗೆ ಎಸೆದ ಪ್ರಕರಣಗಳೂ ಕಣ್ಣಮುಂದಿವೆ. ಹೀಗಾಗಿ ಬಾಲಕಿಯರು ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಹುದ್ದೆಯಲ್ಲಿದ್ದು ಮದುವೆಯಾಗುವುದು ಒಳ್ಳೆಯದು. ಪಾಲಕರ ಸಹಾನೂಭೂತಿ ಅಡಿಯಲ್ಲೇ ಬೆಳೆದ ನಾವು ಜವಾಬ್ದಾರಿ ಅರಿತು ನಡೆಯಬೇಕು ಎಂದು ಹೇಳಿದರು.
ಎಸ್‌ಐಆರ್ ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ 18 ವರ್ಷ ತುಂಬಿದ ಎಲ್ಲ ವಿದ್ಯಾರ್ಥಿಗಳು ಫಾರ್ಮ್ 6 ಸಲ್ಲಿಸಿ ಮತದಾರರ ಪಟ್ಟಿ ಸೇರ್ಪಡೆಯಾಗಬೇಕು. ಒಂದು ಮತದಿಂದ ಸಮಸ್ಯೆಯಾಗದು ಎಂಬ ಮನೋಭಾವ ಕೈಬಿಡಿ ಎಂದೂ ಕಿವಿಮಾತು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಸಿ. ರಂಗೇಗೌಡ ಮಾತನಾಡಿ ಕಾರಣಾಂತರದಿಂದ ತಡವಾಗಿ ಮದುವೆಯಾದ ಜೋಡಿಗಳಲ್ಲಿ ನೈಸರ್ಗಿಕವಾಗಿ ಮಕ್ಕಳಾಗುತ್ತಿಲ್ಲ. ಪುರುಷರಲ್ಲಿ ವೀರ‌್ಯಾಣುಗಳ ಸಂತಾನೋತ್ಪತ್ತಿ ಸಾಮರ್ಥ್ಯ ಕುಸಿದಿದ್ದರೆ ಹೆಣ್ಣುಮಕ್ಕಳಲ್ಲಿ ಆರೋಗ್ಯ ಕಾಳಜಿ ಕೊರತೆಯಿಂದಾಗಿ ಹಾರ್ಮೋನ್ ಸಮಸ್ಯೆಯಾಗಿ ಅಂಡಾಶಯದಲ್ಲಿ ಅಂಡಾಣು ಉತ್ಪತ್ತಿ ಕಡಿಮೆಯಾಗುತ್ತಿವೆ. ಇನ್ನೊಂದೆಡೆ ಕೃತಕ ಗರ್ಭಧಾರಣೆಯಲ್ಲಿ ಯಶಸ್ಸಿನ ಪ್ರಮಾಣವೂ ಕಡಿಮೆ ಇದೆ ಎಂದು ಹೇಳಿದರು.
ರಾಷ್ಟ್ರದ ಸಂಪನ್ಮೂಲಗಳಲ್ಲಿ ಖನಿಜದಂತೆಯೇ ಮಾನವ ಸಂಪನ್ಮೂಲವೂ ಅತಿಮುಖ್ಯ. ರೋಬಾಟ್ ಇತರೆ ಯಂತ್ರೋಪಕರಣಗಳಿದ್ದರೂ ನಿರ್ವಹಣೆಗೆ ಮಾನವರು ಬೇಕೇ ಬೇಕು. ಹೀಗಾಗಿ ನಮಗಿದು ಆರೋಗ್ಯಯುತ, ಸದೃಢ ಮಾನವರು ಬೇಕಾಗಿದ್ದಾರೆ. ಇದರಿಂದ ದೇಶದ ಪ್ರಗತಿಗೆ ನೆರವಾಗಲಿದೆ ಎಂದರಲ್ಲದೆ ಎಲ್ಲರೂ ಸರ್ಕಾರಿ ಉದ್ಯೋಗ ನೆಚ್ಚಿಕೊಳ್ಳದೆ ಸ್ವ ಉದ್ದಿಮೆ ಹಾಗೂ ಕೈಗಾರಿಕೆಗಳನ್ನು ನಡೆಸಬೇಕು ಎಂದೂ ತಿಳಿಸಿದರು.
ಕಾನೂನು ಸೇವಾ ಪ್ರಾಧಿಕಾರದ ಮೂಲಕ ಕೆಳ ಹಂತದ ನ್ಯಾಯಾಲಯದಿಂದ ಸುಪ್ರೀಂಕೋರ್ಟ್‌ವರೆಗೆ ಬಡ ಮಹಿಳೆಯರು, ಮಕ್ಕಳಿಗೆ ಉಚಿತ ಕಾನೂನು ನೆರವು ಸಿಗಲಿದೆ. ಅಗತ್ಯವಿದ್ದ ಸಂದರ್ಭದಲ್ಲಿ ನ್ಯಾಯಾಲಯದಿಂದಲೇ ಕೇಸ್ ನಡೆಸಲು ಉಚಿತವಾಗಿ ವಕೀಲರನ್ನು ನೇಮಿಸಲಾಗುತ್ತದೆ. ಇದರ ಲಾಭ ಪಡೆಯಬೇಕು ಎಂದೂ ಮನವಿ ಮಾಡಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕೆ.ಎಸ್. ಮಧು ಮಾತನಾಡಿ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತೀಯ ಮಹಿಳೆಯರಲ್ಲಿ ಮೊದಲೆಲ್ಲ ಬಂಜೆತನದ ಸಮಸ್ಯೆ ಇರಲಿಲ್ಲ. ಹೀಗಾಗಿ ಜನಸಂಖ್ಯೆ ಹೆಚ್ಚಿದೆ. ಮೊದಲೆಲ್ಲ ತಲಾ ಮನೆಯಲ್ಲಿ 6-7 ಮಕ್ಕಳು ಇರುತ್ತಿದ್ದರು. ಎಲ್ಲರಿಗೂ ರೋಗನಿರೋಧಕ ಚಿಕಿತ್ಸೆ ಇಲ್ಲದ್ದರಿಂದ ಕೆಲವು ಮರಣ ಹೊಂದುತ್ತಿದ್ದರು. ಹೀಗಾಗಿ ಜನಸಂಖ್ಯಾ ನಿಯಂತ್ರಣ ಕಾಯ್ದೆ ಜಾರಿಗೆ ಬಂದಿದೆ. ಇದರಿಂದ ಸೀಮಿತ ಮಕ್ಕಳಿಗೆ ಸಮರ್ಪಕ ಆರೋಗ್ಯ ನೀಡಲು ಸಾಧ್ಯವಾಗಿದೆ ಎಂದು ಹೇಳಿದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ ಪಾಟೀಲ್ ಮಾತನಾಡಿ ದಾವಣಗೆರೆ ಜಿಲ್ಲೆಯಲ್ಲಿ ಅಂದಾಜು 20 ಲಕ್ಷ ಜನಸಂಖ್ಯೆ ಇದೆ. ಇದರಲ್ಲಿ ಶೇ.60ರಷ್ಟು ಗ್ರಾಮೀಣ ಭಾಗದಲ್ಲಿದೆ. ಪ್ರತಿ 1 ಸಾವಿರ ಪುರುಷರಿಗೆ 966 ಮಹಿಳೆಯರ ಅನುಪಾತವಿದೆ. ಉಡುಪಿ, ಮಂಗಳೂರು ಜಿಲ್ಲೆಗಳಲ್ಲಿ ಇದರ ಪ್ರಮಾಣ ಹೆಚ್ಚಿದೆ. ಹೀಗಾಗಿ ಜಿಲ್ಲೆಯ ಶೈಕ್ಷಣಿಕ ಪ್ರಗತಿಯಾದಲ್ಲಿ ಈ ಅನುಪಾತ ಸರಿದೂಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಗಂಗಾಧರ್, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಪ್ರಭಾರ ಅಧೀಕ್ಷಕ ಡಾ. ಎಚ್.ಸಿ. ಸುದೀಪ್‌ಕುಮಾರ್, ಉಪನ್ಯಾಸಕರ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಮೋತಿ ವೀರಪ್ಪ ಕಾಲೇಜಿನ ಪ್ರಾಚಾರ್ಯ ಪಿ.ನಾಗಪ್ಪ, ಉಮಾಪತಿ ಇದ್ದರು.