ನ್ಯಾಮತಿ ತಾಲೂಕಿನ ಸುರಹೊನ್ನೆ ಗ್ರಾಮದ ಪಿಎಂಶ್ರೀ ಉನ್ನತೀಕರಿಸಿದ ಸ.ಹಿ.ಪ್ರಾ. ಶಾಲೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಕೊಠಡಿಗಳನ್ನು ಶಾಸಕ ಡಿ.ಜಿ. ಶಾಂತನಗೌಡ ಗುರುವಾರ ಉದ್ಘಾಟಿಸಿ ಮಾತನಾಡಿದರು. ಕೃಷ್ಣಪ್ರಸಾದ್ ಬಿ.ಎಚ್, ಗೀತಾ ಎಸ್, ಕೆ.ಟಿ. ನಿಂಗಪ್ಪ ಇತರರು ಇದ್ದರು. inauguration
- ಶಾಸಕ ಡಿ.ಜಿ. ಶಾಂತನಗೌಡ ಹೇಳಿಕೆ
- ಸುರಹೊನ್ನೆ ಸರ್ಕಾರಿ ಶಾಲೆಯ ವಿವಿಧ ಕೊಠಡಿಗಳ ಉದ್ಘಾಟನೆ
ನ್ಯಾಮತಿ: ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಿದಲ್ಲಿ ಶಾಲೆಗಳು ಅಭಿವೃದ್ಧಿ ಪಥದತ್ತ ಸಾಗುತ್ತಿವೆ ಎಂದರ್ಥ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಅಗತ್ಯ ಸೌಕರ್ಯ ನೀಡಲು ಸರ್ಕಾರ ಸದಾ ಸಿದ್ಧವಿದೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು. inauguration
ತಾಲೂಕಿನ ಸುರಹೊನ್ನೆ ಗ್ರಾಮದ ಪಿಎಂಶ್ರೀ ಉನ್ನತೀಕರಿಸಿದ ಸ.ಹಿ.ಪ್ರಾ. ಶಾಲೆಯಲ್ಲಿ ಗುರುವಾರ ಪಿಎಂಶ್ರೀ ಯೋಜನೆಯ 17.70 ಲಕ್ಷ ರೂ. ಅನುದಾನದಲ್ಲಿ ನೂತನವಾಗಿ ನಿರ್ಮಿಸಿದ ಕೊಠಡಿ, ರಂಗಮಂಟಪ, ಶೌಚಗೃಹ ಉದ್ಘಾಟಿಸಿ ನೆರವೇರಿಸಿ ಮಾತನಾಡಿದರು.
ಶಾಲೆಗೆ ಅಗತ್ಯ ಸೌಲಭ್ಯವನ್ನು ಸರ್ಕಾರ ನೀಡಬಹುದು, ಆದರೆ ಅದನ್ನು ಸದ್ಬಳಕೆ ಮಾಡಿಕೊಂಡಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ. ಶಿಕ್ಷಕರ ತಂಡದ ಪರಿಶ್ರಮದಿಂದ ದಾಖಲಾತಿ, ಹಾಜರಾತಿ ಸಾಧ್ಯವಾಗಿದೆ ಎಂದರು.
ಶಾಲಾ ಶಿಕ್ಷಣ ಇಲಾಖೆ (ಆಡಳಿತ) ಉಪನಿರ್ದೇಶಕ ಕೃಷ್ಣಪ್ರಸಾದ್ ಬಿ.ಎಚ್. ಮಾತನಾಡಿ, ವಿದ್ಯಾರ್ಥಿಗಳ ಕಲಿಕೆ ಉತ್ತಮವಾಗಿದ್ದು ಹೆಚ್ಚುವರಿ ಕೊಠಡಿ, ರಂಗಮಂಟಪ, ಶೌಚಗೃಹ ಕಾಮಗಾರಿ ಹಾಗೂ ನಿರ್ವಹಣೆ ಉತ್ತಮವಾಗಿದೆ. ಪಿಎಂಶ್ರೀ ಯೋಜನೆಯಡಿ ಅಗತ್ಯ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು.
ಉಪನಿರ್ದೇಶಕಿ (ಅಭಿವೃದ್ಧಿ) ಗೀತಾ ಎಸ್. ಮಾತನಾಡಿ, ಶಾಲೆಯ ಮಕ್ಕಳೊಂದಿಗೆ ಸಂವಹನ ನಡೆಸಿದ್ದು ಮಕ್ಕಳ ಕಲಿಕೆ ಚೆನ್ನಾಗಿದೆ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಮರಿಗೌಡ ಎಸ್.ಬಿ. ಮಾತನಾಡಿ, ಶಿಕ್ಷಕರ ಸಹಕಾರದಿಂದಾಗಿ ಶಾಲೆ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸುವುದರಿಂದ ಕಲಿಕೆ ಉತ್ತಮವಾಗಿದೆ ಎಂದರು.
ಗ್ಯಾರಂಟಿ ಸಮಿತಿ ಅಧ್ಯಕ್ಷ ಶಿವರಾಂ ನಾಯ್ಕ, ಬಿಇಒ ಕೆ.ಟಿ. ನಿಂಗಪ್ಪ, ಡಯಟ್ ಹಿರಿಯ ಉಪನ್ಯಾಸಕಿ ಲೋಲಾಕ್ಷಿ, ಬಿಆರ್‌ಸಿ ತಿಪ್ಪೇಸ್ವಾಮಿ, ಅದಾಕಾ ನಾಗೇಂದ್ರಪ್ಪ, ಉಪಪ್ರಾಚಾರ್ಯ ಮಂಜಪ್ಪ ಬಿ.ಕೆ, ಕಿರಿಯ ಇಂಜಿನಿಯರ್ ನಾಗರಾಜ್, ಮಂಜುನಾಥ ಇತರರು ಇದ್ದರು.