ಹೊನ್ನಾಳಿ ತಾಲೂಕಿನ ಹರಳಹಳ್ಳಿ ಶನಿವಾರ ಹಮ್ಮಿಕೊಂಡಿದ್ದ ಬಡವನ ಒಡಲು ಬೆಂಕಿಯ ಸಿಡಿಲು ಗ್ರಾಮೀಣ ನಾಟಕವನ್ನು ಗ್ರಾಮದ ಹಿರಿಯ ಮುಖಂಡ ಎಚ್.ಎಸ್. ಶೇಖರಪ್ಪ ಪಾಟೀಲ್ ಉದ್ಘಾಟಿಸಿದರು. ಡಾ.ಎಚ್.ಡಿ. ಗುರುಬಸಪ್ಪ ಹರಳಹಳ್ಳಿ, ಎಚ್.ಎಸ್. ಶೇಖರಪ್ಪ, ಹಾಲೇಶಪ್ಪ, ಡಿ.ಕೆ. ಚಂದ್ರಪ್ಪ ಇತರರಿದ್ದರು.Opening of the play
- ನಿವೃತ್ತ ಪ್ರಾಂಶುಪಾಲ ಡಾ.ಎಚ್.ಡಿ. ಗುರುಬಸಪ್ಪ ಹರಳಹಳ್ಳಿ ಅನಿಸಿಕೆ
- ಬಡವನ ಒಡಲು ಬೆಂಕಿಯ ಸಿಡಿಲು ಗ್ರಾಮೀಣ ನಾಟಕ ಉದ್ಘಾಟನೆ
- ಬೀರಲಿಂಗೇಶ್ವರ ದೇವರ ಕದಳಿ ಮಹೋತ್ಸವ ಪ್ರಯುಕ್ತ ಆಯೋಜನೆ
ಹೊನ್ನಾಳಿ: ಆಧುನಿಕ ಕಾಲಘಟ್ಟದಲ್ಲಿ ನಶಿಸುತ್ತಿರುವ ಗ್ರಾಮೀಣ ನಾಟಕ ಕಲೆಯನ್ನು ಉಳಿಸಲು ಇಂದಿನ ಯುವ ಪೀಳಿಗೆ ಮುನ್ನೆಲೆಗೆ ಬಂದಿರುವುದು ಸಂತೋಷ ಎಂದು ನಿವೃತ್ತ ಪ್ರಾಂಶುಪಾಲ ಡಾ.ಎಚ್.ಡಿ. ಗುರುಬಸಪ್ಪ ಹರಳಹಳ್ಳಿ ಹೇಳಿದರು.
ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿ ಶನಿವಾರ ಶ್ರೀ ಬಸವೇಶ್ವರ, ಬೀರಲಿಂಗೇಶ್ವರ ದೇವರ ಕದಳಿ ಮಹೋತ್ಸವ ಅಂಗವಾಗಿ ಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬಡವನ ಒಡಲು ಬೆಂಕಿಯ ಸಿಡಿಲು ಗ್ರಾಮೀಣ ನಾಟಕ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಟಿವಿ, ಮೊಬೈಲ್ ಹಾವಳಿಯಿಂದ ಗ್ರಾಮೀಣ ಭಾಗಗಳಲ್ಲಿ ಸಾಮಾಜಿಕ, ಪೌರಾಣಿಕ ನಾಟಕಗಳು ನಶಿಸುತ್ತಿವೆ. ಇಂಥ ಸನ್ನಿವೇಶದಲ್ಲಿ ಎರಡು ವರ್ಷಗಳಿಂದ ನಮ್ಮೂರ ಯುವಕರು ಎರಡು ತಿಂಗಳಿಂದ ತಾಲೀಮು ನಡೆಸಿ ಪ್ರಸ್ತುತ ಪಡಿಸುತ್ತಿದ್ದಾರೆ. ಇಂತಹ ಸಾಮಾಜಿಕ ನಾಟಕಗಳನ್ನು ಉಳಿಸಿ ಬೆಳೆಸುವಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕಾಗಿದೆ ಎಂದರು.
40 ವರ್ಷಗಳ ಹಿಂದೆ ಪುರುಷರು ಸ್ತ್ರೀ ಪಾತ್ರಧಾರಿಗಳಾಗಿ ನಟಿಸುತ್ತಿದ್ದರು, ಅವರ ನಟನೆಗಳು ಮಹಿಳೆಯರು ನಾಚುವಂತೆ ಮಾಡುತ್ತಿತ್ತು. ಅಂಥ ನಾಟಕಗಳು ಇಂದು ಕಣ್ಮರೆಯಾಗಿವೆ. ಇವುಗಳನ್ನು ನೋಡುವುದಕ್ಕೆ ಯಾವುದೇ ಜಾತಿ ಭೇದವಿಲ್ಲದೆ ಎಲ್ಲರೂ ಸಮಾನರು ಎಂಬ ಭಾವನೆಯಿಂದ ನೆಲದ ಮೇಲೆ ಕುಳಿತು ಈ ಗ್ರಾಮೀಣ ನಾಟಕಗಳನ್ನು ವೀಕ್ಷಿಸುವುದೇ ಒಂದು ಚಂದ ಎಂದು ಹೇಳಿದರು.
ನಾಟಕ ಸಂಘದ ಖಜಾಂಚಿ ಎಚ್.ಎಸ್. ಶೇಖರಪ್ಪ ಮಾತನಾಡಿ, ನಾಟಕ ಕಲೆ ಮನುಷ್ಯನ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಮನರಂಜನೆಯ ವಿವಿಧ ವಿದ್ಯುನ್ಮಾನ ಮಾಧ್ಯಮಗಳ ಅಬ್ಬರದ ನಡುವೆಯೂ ನಾಟಕ ಕಲೆ ಜೀವಂತಿಕೆ ತೋರಿದೆ. ಭಾರತೀಯ ಸಂಸ್ಕೃತಿಯ ನಾಟಕಗಳು ಎಂತಹ ಬಿರುಗಾಳಿ ಬಂದರೂ ಬದುಕುಳಿಯುತ್ತವೆ. ಎಲ್ಲರನ್ನೂ ತನ್ನತ್ತ ಸೆಳೆಯುತ್ತದೆ. ನಗರಗಳ ಯಾಂತ್ರಿಕ ಬದುಕಿನ ಜಂಜಾಟದಲ್ಲಿ ರೋಸಿ ಹೋಗಿರುವ ಜನತೆಗೆ ಗ್ರಾಮೀಣ ನಾಟಕ ಸಂಭ್ರಮದ ಸಂಕೇವಾಗಿದೆ ಎಂದರು.
ಗ್ರಾಮದ ಹಿರಿಯ ಮುಖಂಡ ಎಚ್.ಎಸ್. ಶೇಖರಪ್ಪ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷ ಹಾಲೇಶಪ್ಪ,ನಾಟಕ ಸಂಘದ ಅಧ್ಯಕ್ಷ ಡಿ.ಕೆ. ಚಂದ್ರಪ್ಪ, ಎಚ್. ಮಲ್ಲೇಶಪ್ಪ, ಡಿ.ಕೆ. ಹನುಮಂತಪ್ಪ, ಎಚ್.ಡಿ. ಗಂಗಾಧರಪ್ಪ, ಬೆಸ್ಕಾಂ ಗುತ್ತಿಗೆದಾರ ಕೆ. ಚನ್ನಬಸಪ್ಪ, ಎ.ಕೆ. ತಿಮ್ಮೇಶ್, ಎಚ್.ಕೆ. ಬಸವರಾಜಪ್ಪ, ಹುಬ್ಬಳ್ಳಿ ಜಯಪ್ಪ, ಏಳುಬಾವಿ ಸಿದ್ದಪ್ಪ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ
ಚಂದ್ರಶೇಖರಪ್ಪ, ಎಚ್.ಎಸ್. ಫಾಲಾಕ್ಷಪ್ಪ ಇತರರಿದ್ದರು.