ದಾವಣಗೆರೆಯಲ್ಲಿ ಕುರುಬ ಸಮಾಜದಿಂದ ಹಮ್ಮಿಕೊಂಡಿದ್ದ ದಾಸಶ್ರೇಷ್ಠ ಶ್ರೀ ಕನಕದಾಸರ 538ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ವಿಧಾನ ಪರಿಷತ್‌ನ ಮುಖ್ಯ ಸಚೇತಕ ಎನ್.ರವಿಕುಮಾರ್ ಉದ್ಘಾಟಿಸಿದರು. ಮುರಳೀಧರ ಸ್ವಾಮೀಜಿ, ಜೆ.ಎನ್. ಶ್ರೀನಿವಾಸ್, ಡಾ. ಉದಯಶಂಕರ್ ಒಡೆಯರ್, ಜಿ.ಬಿ. ವಿಜಯಕುಮಾರ್ ಇತರರಿದ್ದರು. ---
- ಮೇಲ್ಮನೆ ಮುಖ್ಯ ಸಚೇತಕ ಎನ್.ರವಿಕುಮಾರ್ ಬಣ್ಣನೆ
- ದಾವಣಗೆರೆಯಲ್ಲಿ ದಾಸಶ್ರೇಷ್ಠನ ಜಯಂತ್ಯುತ್ಸವ
- ಇಡೀ ವಿಶ್ವಕ್ಕೆ ಚಿರಪರಿಚಿತರಾದ ದಾರ್ಶನಿಕ
ದಾವಣಗೆರೆ: ಕನಕದಾಸರು ಸಂತ, ಲೇಖಕ, ಸಂಗೀತಗಾರ, ದಾರ್ಶನಿಕ ಮೊದಲಾದ ಆಯಾಮಗಳಲ್ಲಿ ಕೆಲಸ ಮಾಡಿ, ಧರ್ಮ-ಶಿಕ್ಷಣ ಜಾಗೃತಿಯೊಂದಿಗೆ ಅಂಧಕಾರ ತೊಡೆದುಹಾಕಿದರು. ಅವರೊಬ್ಬ ಸಮಾನತೆಯ ಕವಿ ಎಂದು ವಿಧಾನ ಪರಿಷತ್‌ನ ಮುಖ್ಯ ಸಚೇತಕ ಎನ್.ರವಿಕುಮಾರ್ ಬಣ್ಣಿಸಿದರು.
ದಾವಣಗೆರೆ ನಗರ ಕುರುಬ ಸಮಾಜದಿಂದ ಶನಿವಾರ ಇಲ್ಲಿನ ರೇಣುಕ ಮಂದಿರದಲ್ಲಿ ಹಮ್ಮಿಕೊಂಡಿದ್ದ ದಾಸಶ್ರೇಷ್ಠ ಶ್ರೀ ಕನಕದಾಸರ 538ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಾವೇರಿ ಜಿಲ್ಲೆಯ ಸಣ್ಣ ಗ್ರಾಮ ಬಾಡಾದಲ್ಲಿ ಹುಟ್ಟಿದ ತಿಮ್ಮಪ್ಪ ನಾಯಕ ಅವರು ಕನಕದಾಸರಾಗಿ ಇಡೀ ವಿಶ್ವಕ್ಕೇ ಪರಿಚಿತರಾಗಿದ್ದಾರೆ. ಅಮೆರಿಕಕ್ಕೂ ಅವರ ಬಗ್ಗೆ ತಿಳಿದಿದೆ. ಸಾಹಿತ್ಯಕ ಅಧ್ಯಯನ ಮಾಡುವ ವಿವಿಗಳಿಗೂ ಅವರ ಉತ್ತಮ ಪರಿಚಯವಿದೆ ಎಂದರು.
ಕನಕರು ಅಸ್ಪಶ್ಯತೆ, ಅಸಮಾನತೆ, ದಾಸ್ಯತೆ ವಿರುದ್ಧ ಧ್ವನಿ ಎತ್ತಿದರು. ಮಡಿವಂತಿಕೆ ಹಾಗೂ ಮೂಢನಂಬಿಕೆ ವಿರುದ್ಧವೂ ಸಾಹಿತಿ, ಬರಹಗಾರರಾಗಿಯೂ ಕೆಲಸ ಮಾಡಿದರು. ಇದರ ಮೂಲಕ ದಾಸಶ್ರೇಷ್ಠರಾದರು. ಹೀಗಾಗಿ ಅವರ ಜಯಂತ್ಯುತ್ಸವವನ್ನು ಜಾಗೃತವಾಗಿಯೇ ಆಚರಿಸುವ ಅನಿವಾರ್ಯತೆ ಇದೆ ಎಂದು ಹೇಳಿದರು.
ಸಮಾಜಮುಖಿಯಾಗಲಿ ಕನಕರ ವಿಚಾರಗಳು
ಮುದೇಗೌಡ್ರ ಪದವಿ ಕಾಲೇಜಿನ ಪ್ರಾಚಾರ್ಯ ಮಾರುತಿ ಶಾಲೆಮನೆ ಮಾತನಾಡಿ ಕನಕದಾಸರು ವೈಚಾರಿಕ ಪ್ರಜ್ಞೆಯ ಸಾಕಾರಮೂರ್ತಿ. ಯುದ್ಧಭೂಮಿಯಲ್ಲಿ ಅರಳಿದ ಸಿದ್ಧಿಪುರುಷ. ಜೀವನದಲ್ಲಿ ಎದುರಾದ ಅನಾದರ, ಅಲಕ್ಷೃಗಳನ್ನು ಮೆಟ್ಟಿನಿಂತು ಕುಲವನ್ನು ಮೀರಿದ ಮಹಾನ್ ಸಂತರಾದರು ಎಂದು ತಿಳಿಸಿದರು.
16ನೇ ಶತಮಾನದಲ್ಲಿದ್ದ 300 ಮಂದಿ ದಾಸರ ಪೈಕಿ ಕನಕರು ಜ್ಞಾನದ ಕಾರಣಕ್ಕೆ ಶ್ರೇಷ್ಠರಾದರು. ಅವರು ಸ್ವಾಭಿಮಾನದ ಬೆಂಕಿ ಕಿಡಿಯಾಗಿದ್ದರು. ಅವರ ಮೂರ್ತಿಯನ್ನು ಹೆಗಲ ಮೇಲೆ ಕೂರಿಸಿಕೊಂಡ ನಾವು ಅವರ ವಿಚಾರಗಳನ್ನು ಮೂಲೆಗುಂಪು ಮಾಡಿದ್ದೇವೆ. ಅವರ ವಿಚಾರಗಳು ಸಮಾಜಮುಖಿ ಆಗಿಸಬೇಕು. ಅದರ ಬೆಳಕು ಎಲ್ಲರ ಮನೆಗಳ ಕುಡಿಗಳಲ್ಲಿ ಬೆಳಗಬೇಕು ಎಂದು ಆಶಿಸಿದರು.
ಉಡುಪಿಯಲ್ಲಿ ಸಾಕ್ಷಾತ್ ಶ್ರೀಕೃಷ್ಣನೇ ತಿರುಗಿದ ಗೋಡೆಯಲ್ಲಿ ಕಿಟಕಿ ಮೂಡಿದೆಯೇ ಹೊರತಾಗಿ ಬಾಗಿಲು ತೆರೆಯಲೇ ಇಲ್ಲ. ದೇವರ ಆದೇಶವನ್ನೂ ಮೀರಿದ ಕೆಲಸಗಳು ಈ ನೆಲದಲ್ಲಿ ನಡೆಯುತ್ತಿವೆ. ಆ ವಿಚಾರವಾಗಿ ಸೈದ್ಧಾಂತಿಕ ಸಂಘರ್ಷಗಳು ನಡೆಯುತ್ತಿವೆ. ಕನಕರ ಸ್ಥಾನದಲ್ಲಿ ಬೇರೊಬ್ಬರಿದ್ದಲ್ಲಿ, ಶ್ರೀಕೃಷ್ಣನು ತಿರುಗಿದ್ದರ ಬಗ್ಗೆ ಮೂಡುತ್ತಿರುವ ಪ್ರಶ್ನೆಗಳು ಏಳುತ್ತಿರಲಿಲ್ಲ ಎಂದರು.
ಮರುಕಳಿಸಲಿ ಕುರುಬ ಸಮಾಜದ ಗತವೈಭವ
ಇನ್‌ಸೈಟ್ಸ್ ಸಂಸ್ಥೆ ಸಂಸ್ಥಾಪಕ ಜಿ.ಬಿ. ವಿನಯಕುಮಾರ್ ಮಾತನಾಡಿ ದಾವಣಗೆರೆ ಎಂದರೆ ಒಂದು ಕಾಲದಲ್ಲಿ ಕೆ. ಮಲ್ಲಪ್ಪ, ಚನ್ನಯ್ಯ ಒಡೆಯರ್, ಡಾ.ವೈ.ನಾಗಪ್ಪ, ಕೃಷ್ಣಮೂರ್ತಿ ಅವರಿದ್ದರು. ಈ ವೈಭವ ಮರುಕಳಿಸುವಂತಾದರೆ ಅದುವೇ ಕನಕರಿಗೆ ನಾವು ಸಲ್ಲಿಸುವ ನಿಜವಾದ ಗೌರವವಾಗಲಿದೆ. ಸಮಾಜದ ಸಂಘಟನೆ, ಸ್ವಾಭಿಮಾನ ಬೆಳೆಯಲು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದರು.
ಸಮಾಜದವರು ಯಾರದೋ ಕೈಗೊಂಬೆಯಾಗದೆ, ಅವರ ಆಶೀರ್ವಾದ ಅಥವಾ ನಿವೇಶನಕ್ಕಾಗಿ ಕಾದು ಕೂರಬೇಕಿಲ್ಲ. ನಾವು ಒಗ್ಗಟಾದರೆ ಮತ್ತೊಮ್ಮೆ ಚಂದ್ರಗುಪ್ತಮೌರ್ಯನ ರೀತಿಯಲ್ಲಿ ಸಾಮ್ರಾಜ್ಯ ಸ್ಥಾಪಿಸಬೇಕು. ಶ್ರೀಸಾಮಾನ್ಯರು ಸಮಯ ಬಂದಾಗ ಗಟ್ಟಿಯಾದ ಮತ್ತು ಒಗ್ಗಟ್ಟಿನ ನಿರ್ಧಾರ ಕೈಗೊಳ್ಳಬೇಕು ಎಂದು ಸೂಕ್ಷ್ಮವಾಗಿ ತಿಳಿಸಿದರು.
ಹಿಂದುಳಿದ ಸಮಾಜದವರು ಸಿಎಂ ಆಗುವ ಜತೆಗೆ 16 ಬಾರಿ ಆರ್ಥಿಕ ಸಚಿವರಾಗಬಹುದು ಎಂಬುದನ್ನು ತೋರಿಸುವ ಮೂಲಕ ಸಿದ್ದರಾಮಯ್ಯ ಅವರು ನಮ್ಮ ಸಮಾಜಕ್ಕೆ ಘನತೆ ತಂದುಕೊಟ್ಟಿದ್ದಾರೆ. ಮುಂಬರುವ ದಿನಗಳಲ್ಲಿ ಸಮಾಜದ ಮುಖಂಡರು ಸ್ವಂತ ಬಲದೊಂದಿಗೆ ಪ್ರಧಾನಿ ಸ್ಥಾನ ಪಡೆಯಬಹುದಾಗಿದೆ. ಈ ಸಾಮರ್ಥ್ಯ ನಮ್ಮ ಸಮಾಜದಲ್ಲಿದೆ.
ಡರು ಸ್ವಂತ ಬಲದೊಂದಿಗೆ ಪ್ರಧಾನಿ ಸ್ಥಾನ ಪಡೆಯಬಹುದಾಗಿದೆ.