ದಾವಣಗೆರೆಯಲ್ಲಿ ಸಾದಿಕ್ ಪೈಲ್ವಾನ್ ಅವರ ಮುಂದೆ ಜಮಾಯಿಸಿದ್ದ ಮುಸ್ಲಿಂ ಮುಖಂಡರು, ಯುವಕರು.
- ಹೈಡ್ರಾಮಾಕ್ಕೆ ಸಾಕ್ಷಿಯಾದ ಅಭ್ಯರ್ಥಿ ಮನೆ
- ಕಾಂಗ್ರೆಸ್ ನಿಯೋಗದ ಸಂಧಾನ ವಿಫಲ
- ಮನವೊಲಿಸಲು ಬಾರದ ಜಮೀರ್ ಅಹ್ಮದ್
ದಾವಣಗೆರೆ: ಕಾಂಗ್ರೆಸ್‌ನ ರಾಜ್ಯ ಮುಖಂಡರ ಮನವೊಲಿಕೆಗೂ ಜಗ್ಗದೆ, ನಾಮಪತ್ರ ಹಿಂಪಡೆಯದೆ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಕಣದಲ್ಲುಳಿದ ಹಿರಿಯ ಮುಖಂಡ ಸಾದಿಕ್ ಪೈಲ್ವಾನ್, ಪಕ್ಷದ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದಾರೆ.
ಉಮೇದುವಾರಿಕೆ ಹಿಂಪಡೆಯಲು ಕಡೆಯ ದಿನವಾದ ಗುರುವಾರ, ರಾಜ್ಯ ನಾಯಕರು ಬರುವ ಮಾಹಿತಿ ತಿಳಿಯುತ್ತಿದ್ದಂತೆ
ಇಲ್ಲಿನ ವೆಂಕಾಭೋವಿ ಕಾಲನಿಯ ಸಾದಿಕ್ ಪೈಲ್ವಾನ್ ನಿವಾಸದತ್ತ ಮುಸ್ಲಿಂ ಮುಖಂಡರು, ಯುವಕರು ಜಮಾಯಿಸಿ ಸಭೆ ನಡೆಸಿದರು. ‘ಸಾದಿಕ್ ಹಮ್ ತುಮ್ಹಾರೆ ಸಾಥ್ ಹೈ’ ಎಂದು ಘೋಷಣೆ ಕೂಗಿ ನಾಮಪತ್ರ ಹಿಂಪಡೆಯದಂತೆ ಪಟ್ಟು ಹಿಡಿದರು.
ಬೆಳಗ್ಗೆ 9ಕ್ಕೆ ಪಕ್ಷದ ರಾಜ್ಯ ನಾಯಕರು ಬರುವ ಸೂಚನೆ ಇತ್ತಾದರೂ ಐದು ತಾಸು ಕಾದರೂ ಸುಳಿಯಲಿಲ್ಲ. ಕರೆ ಮಾಡಿ ಬೇರೆಡೆ ಬರಲು ಕರೆದಾಗ್ಯೂ ಸಾಧಿಕ್ ‘ನೀವೇ ಇಲ್ಲಿಗೆ ಬಂದು ಜನರ ಬಳಿ ಮಾತನಾಡಿ’ ಎಂದು ಆಹ್ವಾನ ನೀಡಿದ್ದಾರೆ. ‘ಸುರ್ಜೆವಾಲಾ ಅವರು ಅಲ್ಪಸಂಖ್ಯಾತರನ್ನು ಕಡೆಗಣಿಸಿದ್ದಕ್ಕೆ ನಾನು ಕಣಕ್ಕಿಳಿದಿದ್ದೇನೆ, ರಣರಂಗದಲ್ಲಿ ನಾನು ಉಳಿಯಲಿದ್ದೇನೆ’ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡುವ ಮೂಲಕ ಸ್ಪರ್ಧೆ ಖಚಿತಪಡಿಸಿದರು.
ಮಧ್ಯಾಹ್ನ 2-42ರ ಹೊತ್ತಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ನಿಯೋಗ ಆಗಮಿಸಿದಾಗ ಯುವಕರು ‘ಗೋಬ್ಯಾಕ್’ ಘೋಷಣೆ ಕೂಗಿದರು. ಆದಾಗ್ಯೂ ಸಾಧಿಕ್ ಜತೆ ಕೆಲ ನಿಮಿಷ ಆಂತರಿಕ ಸಭೆ ನಡೆಸಿದರು.
ಹೊರಬಂದ ಮುಖಂಡರು ‘ಸಾದಿಕ್ ಅವರು ಭಾವನೆಗೆ ಒಳಗಾಗಿದ್ದಾರೆ. ನಾವು ಬರುವುದು ತಡವಾಗಿದ್ದು ನಾಮಪತ್ರ ಸಲ್ಲಿಸುವ ಅವಧಿ ಮುಗಿದು ಹೋಗಿದೆ. ಆದರೂ ಅವರು ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬುವ ವಿಶ್ವಾಸವಿದೆ. ಮತ್ತೆ ಅವರೊಂದಿಗೆ ಕೂತು ಮನವೊಲಿಸುತ್ತೇವೆ’ ಎಂದು ಹೇಳಿದರು. ನಂತರದ ಮುಕ್ಕಾಲು ತಾಸು ಗೌಪ್ಯ ಸಭೆ ನಡೆಸಿಯೂ ಕಾಂಗ್ರೆಸ್‌ಗೆ ಬೆಂಬಲ ನೀಡಲು ಸಾಧಿಕ್ ಒಪ್ಪಲಿಲ್ಲ ಎನ್ನಲಾಗಿದೆ. ಸಂಧಾನ ಫಲ ನೀಡದ್ದರಿಂದ ಸಲೀಂ ಅಹ್ಮದ್, ರಿಜ್ವಾನ್ ಅರ್ಷದ್ ಹಿಂಬಾಗಿಲಿನಿಂದ ಕಾಲ್ಕಿತ್ತರು.
‘ವಾರದಿಂದಲೂ ಮನವೊಲಿಸಿದರೂ ನಂಬಿದ ಜನರಿಗೆ ಮೋಸ ಮಾಡುವುದಿಲ್ಲ. ನನ್ನ ಸಮಾಜದ ಬಗ್ಗೆ ವಿಶ್ವಾಸವಿದೆ. ನಾನು ಗೆದ್ದರೆ ಸಮಾಜವೇ ಗೆದ್ದಂತೆ. ಕೇಳಿದ್ದನ್ನು ಕೊಡುತ್ತೇವೆ ಎಂದು ಮುಖಂಡರು ಹೇಳಿದರು. ಆದರೆ ನನಗೆ ಜನರೇ ತೀರ್ಪು ನೀಡಿದ್ದಾರೆ. ನೀವೇನು ಕೊಡುವುದು ಬೇಡ ಎಂದು ಉತ್ತರಿಸಿದ್ದೇನೆ’ ಎಂದು ಸಾಧಿಕ್ ಹೇಳಿಕೆ ನೀಡಿದರು.