ಹೊನ್ನಾಳಿಯ ಎಸ್‌ಎಂಎಸ್‌ಎಫ್‌ಸಿ ಕಾಲೇಜು ಆವರಣದಲ್ಲಿ ನಿರ್ಮಿಸಿದ ಇಂದಿರಾ ಕ್ಯಾಂಟಿನ್‌ನ್ನು ಶಾಸಕ ಡಿ.ಜಿ. ಶಾಂತನಗೌಡ ಲ್ಲಿ ಬುಧವಾರ ಉದ್ಘಾಟಿಸಿದರು. ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಎಚ್.ಬಿ. ಮಂಜಪ್ಪ, ಎ.ಕೆ. ಮೈಲಪ್ಪ, ಸಾವಿತ್ರಮ್ಮ ವಿಜಯೇಂದ್ರಪ್ಪ ಮತ್ತಿತರರಿದ್ದರು.
- ಶಾಸಕ ಡಿ.ಜಿ. ಶಾಂತನಗೌಡ ಮಾಹಿತಿ
- ಇಂದಿರಾ ಕ್ಯಾಂಟಿನ್ ಉದ್ಘಾಟನೆ
- ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ
ಹೊನ್ನಾಳಿ: ಮುಖ್ಯರಸ್ತೆಯಿಂದ ಇಂದಿರಾ ಕ್ಯಾಂಟಿನ್, ನ್ಯಾಯಾಲಯ, ಅಗ್ನಿ ಶಾಮಕದಳ ಕಚೇರಿಗೆ ಬರಲು ಸೇತುವೆ ನಿರ್ಮಾಣ ಅತ್ಯವಶ್ಯಕವಾಗಿದ್ದು, ಇದಕ್ಕಾಗಿ 1.25 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ, ಟೆಂಡರ್ ಬಾಕಿ ಇದೆ ಎಂದು ಶಾಸಕ ಡಿ.ಜಿ. ಶಾಂತನಗೌಡ ತಿಳಿಸಿದರು.
ಪಟ್ಟಣದಲ್ಲಿ ಬುಧವಾರ ಎಸ್‌ಎಂಎಫ್‌ಸಿ ಕಾಲೇಜು ಆವರಣದಲ್ಲಿ ನಿರ್ಮಾಣಗೊಂಡಿರುವ ನೂತನ ಇಂದಿರಾ ಕ್ಯಾಂಟಿನ್ ಉದ್ಘಾಟಿಸಿ ಮಾತನಾಡಿದರು.
ಆರಂಭದಲ್ಲಿ ಕ್ಯಾಂಟಿನ್ ನಿರ್ಮಾಣಕ್ಕೆ ಪಟ್ಟಣದಲ್ಲಿ ಜಾಗ ಸರಿ ಹೊಂದದ ಕಾರಣ ಸ್ಥಳೀಯ ಹಿರೇಕಲ್ಮಠದ ಶ್ರೀ ಚನ್ನಪ್ಪ ಸ್ವಾಮಿ ವಿದ್ಯಾಪೀಠದಡಿಯಲ್ಲಿ ನಡೆಯುತ್ತಿರುವ ಕಾಲೇಜು ಆವರಣ ಸೂಕ್ತ ಎಂದು ತೀರ್ಮಾನಿಸಿ ಶ್ರೀಗಳ ಮನವಿ ಪಡೆದು ಪ್ರಸ್ತುತ ಸುಮಾರು 129.29 ಲಕ್ಷ ರೂ. ವೆಚ್ಚದಲ್ಲಿ ಕ್ಯಾಂಟಿನ್ ಲೋಕಾರ್ಪನೆಗೊಂಡಿದೆ ಎಂದರು.
ಇಂದಿರಾ ಕ್ಯಾಂಟೀನ್ ಸುತ್ತಮುತ್ತ ಸರ್ಕಾರಿ ಆಸ್ಪತ್ರೆ, ನ್ಯಾಯಾಲಯ, ಕಾಲೇಜು, ಕುರಿ ಸಂತೆ ಮಾರುಕಟ್ಟೆ ಇರುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗಿದೆ ಎಂದು ಹೇಳಿದರು.
ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಚ್.ಬಿ. ಮಂಜಪ್ಪ ಮಾತನಾಡಿ, 2013 ರಲ್ಲಿ ಸಿದ್ದರಾಮಯ್ಯನವರ ಅಧಿಕಾರವಧಿಯಲ್ಲಿ ಜನರ ಹಸಿವು ನೀಗಿಸಲು ಕಡಿಮೆ ದರದಲ್ಲಿ ಉಪಾಹಾರ, ಊಟದ ವ್ಯವಸ್ಥೆಗಾಗಿ ಈ ಕ್ಯಾಂಟಿನ್ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಇದು ಕಡು ಬಡವರಿಗೆ ಹಸಿವು ನೀಗಿಸಿಕೊಳ್ಳುವ ಉತ್ತಮ ಯೋಜನೆಯಾಗಿದೆ ಎಂದರು.
ಪುರಸಭೆ ಅಧ್ಯಕ್ಷ ಎ.ಕೆ. ಮೈಲಪ್ಪ ಮಾತನಾಡಿದರು. ಉಪಾಧ್ಯಕ್ಷೆ ಸಾವಿತ್ರಮ್ಮ ವಿಜಯೇಂದ್ರಪ್ಪ, ಕಾಂಗ್ರೆಸ್ ತಾಲೂಕಾಧ್ಯಕ್ಷ ಸಣ್ಣಕ್ಕಿ ಬಸವನಗೌಡ, ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಎಚ್.ಎ. ಉಮಾಪತಿ, ಯುವ ಮುಖಂಡ ಮಧುಗೌಡ, ನ್ಯಾಮತಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಶಿವರಾಮ್ ನಾಯ್ಕ, ಪುರಸಭೆ ಮುಖ್ಯಾಧಿಕಾರಿ ಟಿ. ಲೀಲಾವತಿ, ಇಂಜಿನಿಯರ್ ದೇವರಾಜ್ ಇತರರಿದ್ದರು.