ದಾವಣಗೆರೆ ಜಿಲ್ಲಾಡಳಿತ ಭವನದಲ್ಲಿ ಬುಧವಾರ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಡಾ. ಪ್ರಭಾ ಮಲ್ಲಿಕಾರ್ಜುನ್, ಜಿ.ಎಂ. ಗಂಗಾಧರ ಸ್ವಾಮಿ, ಉಮಾ ಪ್ರಶಾಂತ್ ಇತರ ಅಧಿಕಾರಿಗಳಿದ್ದರು. 
ದಾವಣಗೆರೆ

ರಸ್ತೆ ಸುರಕ್ಷತೆ, ತುರ್ತು ಚಿಕಿತ್ಸೆಗೆ ಆದ್ಯತೆ

ರಮೇಶ ಜಹಗೀರದಾರ್

ಪ್ರಮುಖ ಮುಖ್ಯಾಂಶಗಳು

  • ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಸೂಚನೆ
  • ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ
ದಾವಣಗೆರೆ : ಜಿಲ್ಲೆಯಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿನ ಮರಣ ಪ್ರಮಾಣವನ್ನು ತಗ್ಗಿಸಲು ಮತ್ತು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳಲ್ಲಿ ಸುಸಜ್ಜಿತ ಅಸ್ಪತ್ರೆಗಳನ್ನು ಗುರುತಿಸಿ ತಕ್ಷಣ ಗಾಯಾಳುಗಳನ್ನು ಅಲ್ಲಿಗೆ ದಾಖಲಿಸಿ ಜೀವ ಉಳಿಸಬೇಕು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ಬುಧವಾರ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿದರು.
ಅಪಘಾತ ಸಂಭವಿಸಿದ ಮೊದಲ ಒಂದು ಗಂಟೆ ಅತ್ಯಂತ ನಿರ್ಣಾಯಕ. ಗಾಯಾಳುಗಳನ್ನು ಕೂಡಲೇ ಹತ್ತಿರದ ಸುಸಜ್ಜಿತ ಆಸ್ಪತ್ರೆಗೆ ದಾಖಲಿಸಲು ಆಂಬುಲೆನ್ಸ್ ಚಾಲಕರು ಮತ್ತು ಪೊಲೀಸರ ನಡುವೆ ವೇಗದ ಸಮನ್ವಯ ಇರಬೇಕು ಎಂದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೀಡಾದವರಿಗೆ ತಕ್ಷಣದ ಚಿಕಿತ್ಸೆ ನೀಡಲು ಹತ್ತಿರದ ಆಸ್ಪತ್ರೆಗಳನ್ನು ಗುರುತಿಸಿ, ಅಲ್ಲಿ ತುರ್ತು ಘಟಕಗಳು ಸದಾ ಸನ್ನದ್ಧವಾಗಿರುವಂತೆ ನೋಡಿಕೊಳ್ಳಬೇಕು.
ಯಾವುದೇ ರಸ್ತೆ ಅಪಘಾತವಾದಾಗ ಕೇಂದ್ರದ ನಗದು ರಹಿತ ಉಚಿತ ಚಿಕಿತ್ಸಾ ಸೌಲಭ್ಯವನ್ನು ಬಳಸಿಕೊಳ್ಳಲು ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳಲ್ಲಿ ಬರುವ ಆಸ್ಪತ್ರೆಗಳ ವಿವರ ಸಂಗ್ರಹಿಸಬೇಕು. ಯಾವುದೇ ಸೌಲಭ್ಯವಿಲ್ಲದ ಹತ್ತಿರದ ಆಸ್ಪತ್ರೆಗೆ ಹೋಗಿ ಅಲ್ಲಿ ಸಮಯ ವ್ಯರ್ಥ ಮಾಡುವ ಬದಲು ಈ ವ್ಯವಸ್ಥೆಯನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದಾಗ ಅನೇಕ ಜೀವಗಳನ್ನು ಉಳಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು. ಎಸ್ಪಿ ಉಮಾ ಪ್ರಶಾಂತ್ ಇನ್ನಿತರ ಅಧಿಕಾರಿಗಳು ಇದ್ದರು.