ದಾವಣಗೆರೆಯಲ್ಲಿ ಎಸ್‌ಐಆರ್ ಸಂಬಂಧ ಆರಂಭಿಸಲಾದ ಮತದಾರರ ಸಹಾಯ ಕೇಂದ್ರಕ್ಕೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಭೇಟಿ ನೀಡಿ ನಿರ್ವಹಣೆ ಬಗ್ಗೆ ಮಾಹಿತಿ ಪಡೆದರು. ಪಾಲಿಕೆ ಸಿಬ್ಬಂದಿ, ಸಾರ್ವಜನಿಕರಿದ್ದರು.  
ದಾವಣಗೆರೆ

ಮತದಾರರ ಕೇಂದ್ರಗಳಲ್ಲಿ ಗೊಂದಲ ಪರಿಹರಿಸಿಕೊಳ್ಳಿ

ಡಿ. ಎಂ. ಮಹೇಶ್

ಪ್ರಮುಖ ಮುಖ್ಯಾಂಶಗಳು

  • ನಕಲಿ ವೋಟರ್‌ಗಳಿದ್ದಲ್ಲಿ ಮಾಹಿತಿ ನೀಡಿ
  • ಕ್ಷೇತ್ರದಲ್ಲಿ ಮನೆ ಬದಲಿಸಿದ್ದರೆ ನಮೂನೆ 8 ಅರ್ಜಿ ಸಲ್ಲಿಸಿ
  • ನಾಗರಿಕರಿಗೆ ಡಿಸಿ ಜಿ.ಎಂ.ಗಂಗಾಧರಸ್ವಾಮಿ ಮನವಿ
ದಾವಣಗೆರೆ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆೆ (ಎಸ್‌ಐಆರ್) ಪ್ರಕ್ರಿಯೆ ಸುಗಮವಾಗಿ ನಡೆಯುತ್ತಿದ್ದು ಮತದಾರರ ಸಹಾಯಕ್ಕಾಗಿ ಸೌಲಭ್ಯ ಕೇಂದ್ರಗಳನ್ನು ಒದಗಿಸಲಾಗಿದೆ. ಇಲ್ಲಿ ಹೆಚ್ಚಿನ ಮಾಹಿತಿ ಪಡೆಯುವ ಹಾಗೂ ಸಂಶಯಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಸಂಬಂಧ ತೆರೆಯಲಾದ ಮತದಾರರ ನೋಂದಣಿ ಸೌಲಭ್ಯ ಕೇಂದ್ರಗಳಾದ ಎಂ.ಸಿ.ಸಿ ಎ. ಬ್ಲಾಕ್‌ನ ಮಹಾನಗರ ಪಾಲಿಕೆ ಕಚೇರಿ, ವಿನಾಯಕ ಬಡಾವಣೆ ಸರ್ಕಾರಿ ಪ್ರಾಥಮಿಕ ಶಾಲೆ, ದೂಡಾ ಕಚೇರಿ ಮತ್ತು ದೇವರಾಜ ಅರಸು ಬಡಾವಣೆ ಬಿ. ಬ್ಲಾಕ್‌ನ ಅಂಧರ ಶಾಲೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಎಸ್‌ಪಿಎಸ್ ನಗರದ ಸರ್ಕಾರಿ ಪ್ರಾಥಮಿಕ ಶಾಲಾ ಕೇಂದ್ರಗಳಿಗೆ ಭೇಟಿ ನೀಡಿ ಸಾರ್ವಜನಿಕರು ಮತ್ತು ಬಿ.ಎಲ್.ಒಗಳನ್ನು ಉದ್ದೇಶಿಸಿ ಗುರುವಾರ ಮಾತನಾಡಿದರು.
ಪ್ರತಿ ಮತದಾರರ ಮನೆಗೆ ಕಡ್ಡಾಯವಾಗಿ 3 ಬಾರಿ ಮತಗಟ್ಟೆ ಅಧಿಕಾರಿ ಬಿ.ಎಲ್.ಒ ಭೇಟಿ ನೀಡುವರು. ಮತದಾರರು ಸ್ಥಳದಲ್ಲಿ ಲಭ್ಯವಿಲ್ಲದಿದ್ದರೆ, ಅವರ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ ಮಾಹಿತಿ ನೀಡಿ, ಮನೆಯಲ್ಲಿ ಇಲ್ಲದಿರುವ ಸಂದರ್ಭದಲ್ಲಿ ಮನೆಯ ಬಾಗಿಲಿನ ಮೇಲೆ ಕಡ್ಡಾಯವಾಗಿ ಸ್ಟಿಕ್ಕರ್ ಅಂಟಿಸಬೇಕು.
ಮತಗಟ್ಟೆ ಅಧಿಕಾರಿ ಯಾವ ಕಚೇರಿಯಲ್ಲಿ ಲಭ್ಯವಿರುತ್ತಾರೆ ಎಂಬ ಮಾಹಿತಿಯನ್ನು ಮತದಾರರಿಗೆ ಕಡ್ಡಾಯವಾಗಿ ನೀಡಬೇಕು. ಮತದಾರರು ನಿಯೋಜಿತ ಸ್ಥಳದಲ್ಲಿ ವಾಸಿಸುತ್ತಿಲ್ಲ ಎಂಬುದು ದೃಢಪಟ್ಟರೆ, ಅಂತಹವರನ್ನು ‘ಅಲಭ್ಯ’ ಎಂದು ಗುರುತಿಸಿ ವರದಿಯಲ್ಲಿ ದಾಖಲಿಸಿ ಎಂದು ಮತಗಟ್ಟೆ ಅಧಿಕಾರಿಗಳಿಗೆ ತಿಳಿಸಿದರು.
ಒಂದೇ ಕ್ಷೇತ್ರದ ವ್ಯಾಪ್ತಿಯಲ್ಲಿ ಮನೆ ಬದಲಾಯಿಸಿರುವ ಮತದಾರರು ತಮ್ಮ ಹೆಸರು ಕೈಬಿಟ್ಟು ಹೋಗುವ ಆತಂಕ ಪಡಬೇಕಿಲ್ಲ. ಅಂತಹ ಮತದಾರರು ನಮೂನೆ-8 ಸಲ್ಲಿಸುವ ಮೂಲಕ ಸುಲಭವಾಗಿ ತಮ್ಮ ಹೊಸ ವಿಳಾಸ ನವೀಕರಿಸಿಕೊಳ್ಳಬಹುದು ಎಂದು ಸಾರ್ವಜನಿಕರಿಗೆ ತಿಳಿಸಿದರು.
ನಗರದಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ನಕಲಿ ಮತದಾರರ ಗುರುತಿನ ಚೀಟಿಗಳನ್ನು ಹೊಂದಿರುವುದು ಕಂಡುಬಂದಲಿ,್ಲ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಬೇಕು. ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆಗೆ ಧಕ್ಕೆ ತರುವ ಯಾವುದೇ ಅಕ್ರಮ ಚಟುವಟಿಕೆಗಳನ್ನು ಜಿಲ್ಲಾಡಳಿತ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ನಗರ ಪ್ರದೇಶಗಳಲ್ಲಿ ಫಲಾನುಭವಿಗಳ ನಿಖರ ವಿಳಾಸ ಪತ್ತೆ ಹಚ್ಚುವುದು ಸವಾಲಿನ ಕೆಲಸ. ಆದಾಗ್ಯೂ, ಬಿ.ಎಲ್‌ಒಗಳು ಈ ಸವಾಲನ್ನು ಸಮರ್ಥವಾಗಿ ಎದುರಿಸಿ, ಅರ್ಹರೆಲ್ಲರಿಗೂ ಶೇ. 100ರಷ್ಟು ಗಣತಿ ನಮೂನೆಗಳನ್ನು ತಲುಪಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ನಿರ್ದೇಶನ ನೀಡಿದರು.
ಈ ವೇಳೆ ಮಹಾನಗರ ಪಾಲಿಕೆ ಆಯುಕ್ತ ಮಹಾಂತೇಶ್, ಜಿಪಂ ಉಪ ಕಾರ್ಯದರ್ಶಿ ಮಮತಾ ಹೊಸಗೌಡರ್ ಇದ್ದರು.
3,78,421 ನಮೂನೆ ಗಣಕೀಕರಣ
ಜಿಲ್ಲಾದ್ಯಂತ ಎಸ್‌ಐಆರ್ ಪ್ರಕ್ರಿಯೆಯಡಿ ಬಿಎಲ್‌ಒಗಳ ಮನೆ ಮನೆ ಭೇಟಿ ಕಾರ್ಯ ಮುಂದುವರಿದಿದೆ. ಇದುವರೆಗೆ ವಿತರಿಸಲಾದ 14,91,918 ನಮೂನೆಗಳ ಪೈಕಿ 3,78,421 ಗಣಕೀಕರಣಗೊಂಡಿವೆ.
4,327 ಮತದಾರರನ್ನು ಸ್ಥಳಾಂತರ, ಮರಣ, ದ್ವಿಪ್ರತಿ ಅಥವಾ ಇತರೆ ಕಾರಣಗಳಿಗಾಗಿ ಗುರುತಿಸಲಾಗಿದೆ. 58 ಸಂಗ್ರಹವಾಗದ / ಗೈರು ಮತದಾರರಿದ್ಧಾರೆ. ಜಿಲ್ಲೆಯಲ್ಲಿ ಒಟ್ಟು 1,546 ಶಾಶ್ವತ ವಲಸೆ, 2,023 ಮರಣ, 668 ದ್ವಿಪ್ರತಿ ಹಾಗೂ 32 ಇತರೆ ಪ್ರಕರಣಗಳು ಪತ್ತೆಯಾಗಿವೆ.
ಜಗಳೂರು ಕ್ಷೇತ್ರದಲ್ಲಿ 2,00,818 ಅರ್ಜಿಗಳು ವಿತರಿಸಲ್ಪಟ್ಟು 47,270 ನಮೂನೆ ಗಣಕೀಕರಿಸಲಾಗಿದೆ. ಉಳಿದಂತೆ ಹರಿಹರ ಕ್ಷೇತ್ರದಲ್ಲಿ 2,10, 977 ನಮೂನೆ ಪೈಕಿ 77,125, ದಾವಣಗೆರೆ ಉತ್ತರ ಕ್ಷೇತ್ರದಲ್ಲಿ 2,57,124 ನಮೂನೆ ಪೈಕಿ 19,526, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ 2,27,774 ಅರ್ಜಿಗಳಲ್ಲಿ 17,323 ಕಂಪ್ಯೂಟರೀಕರಿಸಲಾಗಿದೆ.
ಮಾಯಕೊಂಡ ಕ್ಷೇತ್ರದಲ್ಲಿ 1,97,047 ನಮೂನೆಗಳ ಪೈಕಿ 91,971, ಚನ್ನಗಿರಿ ಕ್ಷೇತ್ರದಲ್ಲಿ 203612 ನಮೂನೆಗಳ ಪೈಕಿ 75,180, ಹೊನ್ನಾಳಿ ಕ್ಷೇತ್ರದಲ್ಲಿ 1,94,566 ವಿತರಿಸಲಾದ ನಮೂನೆಗಳಲ್ಲಿ 50,026 ನಮೂನೆ ಗಣಕೀಕರಣ ಕಾರ್ಯ ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದ್ದಾರೆ.