ಟಿ. ಶ್ರೀನಿವಾಸ, ಹೊನ್ನಾಳಿ
ತಾಲೂಕು ಪಂಚಾಯಿತಿಯಲ್ಲಿ ಎಸ್‌ಟಿ ಪುರುಷರಿಗೆ ಹಾಗೂ ತಾಲೂಕಿನ ಜಿಪಂ ಕ್ಷೇತ್ರಗಳಲ್ಲಿ ಎಸ್‌ಟಿ ಸಮುದಾಯಕ್ಕೆ ಮೀಸಲಾತಿ ಸಿಕ್ಕಿಲ್ಲ ಎಂಬ ಅಸಮಾಧಾನ ತೀವ್ರವಾಗಿದ್ದು, ಆಕ್ಷೇಪಣೆ ಸಲ್ಲಿಸಲು ದಾಖಲೆಗಳನ್ನು ಹೊಂದಿಸಿಕೊಳ್ಳಲು ಆರಂಭಿಸಿದ್ದಾರೆ. ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ನೀಡಿಲ್ಲವೆಂದು ವಾಲ್ಮೀಕಿ ಹಾಗೂ ಕುರುಬ ಸಮುದಾಯದವರು ಆಕ್ಷೇಪಣೆ ಸಲ್ಲಿಸಲು ಮುಂದಾಗಿದ್ದಾರೆ.
ಜಿಲ್ಲಾ ಪಂಚಾಯಿತಿಯ ಯಾವ ಕ್ಷೇತ್ರಕ್ಕೆ ಯಾವ ವರ್ಗದ ಮೀಸಲಾತಿ ಬರಲಿದೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆಯಾದರೂ, ಪ್ರಕಟಿತ ಮೀಸಲಾತಿ ಪಟ್ಟಿಯು ಆಕಾಂಕ್ಷಿಗಳಲ್ಲಿ ಹರ್ಷಕ್ಕಿಂತ ಹೆಚ್ಚಾಗಿ ಅಸಮಾಧಾನ ಮತ್ತು ನಿರಾಸೆಯನ್ನು ತಂದೊಡ್ಡಿದೆ. ತಮ್ಮ ಅನುಕೂಲಕ್ಕೆ ತಕ್ಕಂತೆ ಮೀಸಲಾತಿ ನಿಗದಿಯಾಗದೆ ನಿರಾಶೆಗೊಂಡಿರುವ ಹಲವು ಪಕ್ಷಗಳ ಪ್ರಬಲ ಆಕಾಂಕ್ಷಿಗಳು, ತಾವು ಅಂದುಕೊಂಡ ಕ್ಷೇತ್ರದಲ್ಲೇ ಸ್ಪರ್ಧೆ ಮಾಡುವ ನಿಟ್ಟಿನಲ್ಲಿ ಸಕ್ರಿಯರಾಗುತ್ತಿದ್ದಾರೆ. ಸೂಕ್ತ ಕಾರಣಗಳೊಂದಿಗೆ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಿ, ತಮಗೆ ಅನುಕೂಲವಾಗುವ ಮೀಸಲಾತಿ ಬದಲಾವಣೆ ಮಾಡಿಸಲು ಆಕಾಂಕ್ಷಿಗಳ ಪಡೆ ಸಿದ್ಧತೆ ನಡೆಸುತ್ತಿದೆ.
2005ರ ಜಿಪಂ ಚುನಾವಣೆಯಲ್ಲಿ ನ್ಯಾಮತಿ ಕ್ಷೇತ್ರವನ್ನು ಪರಿಶಿಷ್ಟ ಪಂಗಡಕ್ಕೆ ಮೀಸಲಿಡಲಾಗಿತ್ತು. ಆದರೆ 2016 ಹಾಗೂ ಪ್ರಸ್ತುತ ಪ್ರಕಟವಾದ ಮೀಸಲಾತಿಯಲ್ಲೂ ಎಸ್‌ಟಿ ಅಥವಾ ಎಸ್‌ಟಿ ಮಹಿಳೆಗೆ ಅವಕಾಶ ನೀಡಿಲ್ಲ. ಇದರಿಂದ ವಾಲ್ಮೀಕಿ ಸಮುದಾಯದ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೊನ್ನಾಳಿ-ನ್ಯಾಮತಿ ತಾಲೂಕುಗಳಲ್ಲಿ ಕುರುಬ ಸಮುದಾಯಕ್ಕೆ ಒಂದೇ ಒಂದು ಕ್ಷೇತ್ರದಲ್ಲೂ ಮೀಸಲು ನಿಗದಿಪಡಿಸದಿರುವುದು ಆ ಸಮುದಾಯದ ಪ್ರಮುಖರ ಅಸಮಾಧಾನಕ್ಕೆ ಕಾರಣವಾಗಿದೆ.
ಸಾಮಾನ್ಯ ವರ್ಗದ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಸಿದ್ಧತೆ ಮಾಡಿಕೊಂಡ ಆಕಾಂಕ್ಷಿಗಳಿಗೆ ಮೀಸಲಾತಿ ಬದಲಾವಣೆ ನಿರಾಶೆ ಮೂಡಿಸಿದೆ. ತಮ್ಮ ಹಳೆಯ ಕ್ಷೇತ್ರಗಳೇ ಕೈತಪ್ಪಿ ಹೋಗಿರುವುದರಿಂದ, ಸ್ಪರ್ಧೆಯಿಂದ ಹಿಂದೆ ಸರಿಯಬೇಕಾದ ಅನಿವಾರ್ಯತೆ ಎದುರಾಗಿದೆ. ಇನ್ನು ಕೆಲವರು ತಮಗೆ ಸೂಕ್ತವಾದ ಬೇರೆ ಕ್ಷೇತ್ರಗಳತ್ತ ಕಣ್ಣಿಟ್ಟಿದ್ದು, ಟಿಕೆಟ್ ಕೊಡಿಸುವ ಸಾಮರ್ಥ್ಯ ಇರುವ ನಾಯಕರ ಮನೆಯತ್ತ ಹೊರಡಲು ಆರಂಭಿಸಿದ್ದಾರೆ.
ಕಳೆದ ಚುನಾವಣೆಯಲ್ಲಿ ಜಯಗಳಿಸಿದ್ದ ಬಹುತೇಕ ತಾಲೂಕಿನ ಎಲ್ಲ ಮಾಜಿ ಜಿಪಂ ಸದಸ್ಯರ ಕ್ಷೇತ್ರಗಳ ಮೀಸಲಾತಿ ಬದಲಾಗಿರುವುದರಿಂದ, ಈ ಬಾರಿ ಅವರು ಸ್ಪರ್ಧೆಯಿಂದ ದೂರ ಉಳಿಯುವ ಸಾಧ್ಯತೆಯೇ ಹೆಚ್ಚಾಗಿದೆ.
2016 ಹಾಗೂ ಈಗ ಪ್ರಕಟಿಸಿರುವ ಮೀಸಲಾತಿಯಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಾತಿನೀಡದೆ ನಮ್ಮ ಹಕ್ಕನ್ನು ಕಸಿದುಕೊಳ್ಳಲಾಗಿದೆ. ನಮ್ಮ ಸಮುದಾಯದ ಪ್ರಮುಖರ ಜತೆ ಚರ್ಚಿಸಿ ಆಕ್ಷೇಪಣೆ ಸಲ್ಲಿಸುತ್ತೇವೆ. ತಾಪಂ ಕ್ಷೇತ್ರಗಳಲ್ಲೂ ಪುರುಷರಿಗೆ ಅವಕಾಶ ನೀಡಿಲ್ಲ.ಶಿವಾನಂದ್ ಬೇಲಿಮಲ್ಲೂರು, ವಾಲ್ಮೀಕಿ ನಾಯಕ ಸಮಾಜದ ಮಾಜಿ ಅಧ್ಯಕ್ಷ, ಹೊನ್ನಾಳಿ ತಾಲೂಕು.