ದಾವಣಗೆರೆಯ ಜಿಎಂ ವಿವಿಯಲ್ಲಿ ನಡೆದ ‘ಬಯೋವಿಜನ್’ ರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಡಾ. ಬದ್ರಿನಾಥ ದುಬೆ, ಡಾ. ಬಸವರಾಜ ಎಸ್. ಹುನಗುಂದ, ಡಾ. ಎಸ್.ಆರ್. ಶಂಕಪಾಲ್, ಡಾ. ಪ್ರಕಾಶ್ ಕೆ.ಕೆ, ಡಾ. ಪ್ರವೀಣ್ ಜೆ, ಡಾ. ಸ್ವರೂಪ್ ಕೆ. ಇದ್ದರು.
- ಪ್ರಾಧ್ಯಾಪಕ ಡಾ. ಬದ್ರಿನಾಥ ದುಬೆ ಪ್ರತಿಪಾದನೆ
- ಜಿಎಂಯುನಲ್ಲಿ ರಾಷ್ಟ್ರೀಯ ಸಮ್ಮೇಳನ ಉದ್ಘಾಟನೆ
ದಾವಣಗೆರೆ : ನಾವು ಮಾಡುವ ಸಂಶೋಧನೆಯು ಸಮಾಜಕ್ಕೆ ಉಪಯುಕ್ತವಾಗಿರಬೇಕು. ಸಮಾಜ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಪ್ರತಿಯೊಬ್ಬ ವಿಜ್ಞಾನಿಯ ಜವಾಬ್ದಾರಿಯಾಗಿದೆ ಎಂದು ಧಾರವಾಡದ ಐಐಟಿ ಬಯೋಸೈನ್ಸಸ್ ಮತ್ತು ಬಯೋ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ. ಬದ್ರಿನಾಥ ದುಬೆ ಹೇಳಿದರು.
ನಗರದ ಜಿಎಂ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗವು ಜಿಎಂ ವೈಜ್ಞಾನಿಕ ನವೋದ್ಯಮ ಮತ್ತು ಸಂಶೋಧನಾ ಎಲ್‌ಎಲ್‌ಪಿ ಸಹಯೋಗದಲ್ಲಿ ಆಯೋಜಿಸಿರುವ ‘ಬಯೋವಿಷನ್ 2026: ಹವಾಮಾನ ಸ್ಥಿತಿಸ್ಥಾಪಕತೆ, ಆಹಾರ ಭದ್ರತೆ ಮತ್ತು ಮಾನವ ಆರೋಗ್ಯಕ್ಕಾಗಿ ಜೈವಿಕ ತಂತ್ರಜ್ಞಾನದಲ್ಲಿನ ನವೋದ್ಯಮಗಳು’ ಎಂಬ ವಿಷಯ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೇವಲ ಬುದ್ಧಿವಂತಿಕೆಯಿಂದ ದೊಡ್ಡ ಆವಿಷ್ಕಾರಗಳು ಸಾಧ್ಯವಾಗುವುದಿಲ್ಲ, ಜಿಜ್ಞಾಸೆ, ನಿರಂತರ ಪ್ರಯತ್ನ ಹಾಗೂ ಸಮಾಜ ಮತ್ತು ಮಾನವ ಕುಲಕ್ಕೆ ಸೇವೆ ಸಲ್ಲಿಸುವ ಮನೋಭಾವದಿಂದ ಉತ್ತಮ ಸಂಶೋಧನೆಗಳು ಹೊರಬರುತ್ತವೆ ಎಂದು ಅಭಿಪ್ರಾಯಪಟ್ಟರು.
ಪ್ರತ್ಯೇಕ ವಿಷಯಗಳ ಗಡಿಗಳನ್ನು ಮೀರಿ, ಹವಾಮಾನ ಸ್ಥಿತಿಸ್ಥಾಪಕತ್ವ, ಆಹಾರ ಭದ್ರತೆ, ಮಾನವ ಆರೋಗ್ಯ ಮತ್ತು ಆ್ಯಂಟಿ ಮೈಕ್ರೋಬಿಯಲ್ ರೆಸಿಸ್ಟೆನ್ಸ್ ಸವಾಲುಗಳಿಗೆ ಜೈವಿಕ ತಂತ್ರಜ್ಞಾನದ ನಾವೀನ್ಯತೆಗಳ ಮೂಲಕ ಪರಿಹಾರ ಕಂಡುಕೊಳ್ಳಲು ಒಟ್ಟಾಗಿ ಶ್ರಮಿಸಬೇಕೆಂದು ತಿಳಿಸಿದರು.
ಸ್ಕೂಲ್ ಆಫ್ ಇಂಜಿನಿಯರಿಂಗ್‌ನ ನಿರ್ದೇಶಕ ಡಾ. ಪ್ರವೀಣ್ ಜೆ, ಸಂಶೋಧನಾ ಮತ್ತು ನಾವೀನ್ಯತೆಯ ಸಹ ಡೀನ್ ಡಾ. ಸ್ವರೂಪ್ ಕೆ, ಸಂಶೋಧನಾ ಸಲಹೆಗಾರ ಡಾ. ಸಿ.ಎಸ್. ರಮೇಶ್ ಸೇರಿ ಜಿಎಂ ಶೈಕ್ಷಣಿಕ ಸಂಸ್ಥೆಗಳ ಡೀನ್‌ಗಳು, ನಿರ್ದೇಶಕರು, ಮುಖ್ಯಸ್ಥರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಉದ್ಯಮ ತಜ್ಞರು, ವಿಜ್ಞಾನಿಗಳು ಹಾಜರಿದ್ದರು.
ಜಿಎಂಯು ಸ್ಕೂಲ್ ಆಫ್ ಅಪ್ಲೈಡ್ ಸೈನ್ಸಸ್‌ನ ನಿರ್ದೇಶಕ ಡಾ. ಗುರುಮೂರ್ತಿ ಎಚ್. ಸ್ವಾಗತಿಸಿದರು. ಜೈವಿಕ ತಂತ್ರಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ಡಾ. ಪವನ್ ಕೆ.ಜೆ ಅತಿಥಿಗಳನ್ನು ಪರಿಚಯಿಸಿದರು. ಜೈವಿಕ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಗಣೇಶ್ ಜಿ. ಟಿಲ್ವೆ ನಿರೂಪಿಸಿದರು. ಜೈವಿಕ ತಂತ್ರಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ಡಾ. ಪ್ರದೀಪ್ ಎಂ.ಜೆ ವಂದಿಸಿದರು.
ಬೆಳೆ ಉಳಿಸಿಕೊಳ್ಳಲು ಪರಿಹಾರ ಸೂಚಿಸಿ
ಎಲ್ ನಿನೋ ಪರಿಣಾಮ ಹಾಗೂ ಮಳೆಯ ಅಭಾವದಿಂದಾಗಿ ರಾಜ್ಯಾದ್ಯಂತ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಕನಿಷ್ಠ 2-3 ತಿಂಗಳು ಮಳೆಯಾಗದಿದ್ದರೂ ಬೆಳೆಗಳನ್ನು ಉಳಿಸಿಕೊಳ್ಳಬಲ್ಲ ‘ಹವಾಮಾನ ಸ್ಥಿತಿಸ್ಥಾಪಕ’ ತಂತ್ರಜ್ಞಾನಗಳನ್ನು ಜೈವಿಕ ತಂತ್ರಜ್ಞರು ಅಭಿವೃದ್ಧಿಪಡಿಸುವ ತುರ್ತು ಅಗತ್ಯವಿದೆ ಎಂದು ಜಿ.ಎಂ. ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ಆರ್. ಶಂಕಪಾಲ್ ಪ್ರತಿಪಾದಿಸಿದರು.
ಕೀಟನಾಶಕಗಳು ಹಾಗೂ ರಾಸಾಯನಿಕಗಳ ಅತಿಯಾದ ಬಳಕೆಯಿಂದ ಹಣ್ಣು-ಹಂಪಲು ಕಲುಷಿತಗೊಳ್ಳುತ್ತಿದ್ದು, ಇದಕ್ಕೆ ಪರ್ಯಾಯವಾಗಿ ಸುರಕ್ಷಿತ ಜೈವಿಕ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ಕಂಡುಕೊಳ್ಳಲು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕೃಷಿ ಕ್ಷೇತ್ರದಲ್ಲಿ ಬೆಳೆಗಳಿಗೆ ಎದುರಾಗುವ ರೋಗ ಬಾಧೆಗಳನ್ನು ಪತ್ತೆಹಚ್ಚಲು ಮತ್ತು ಸಕಾಲದಲ್ಲಿ ಚಿಕಿತ್ಸೆ ನೀಡಲು ಕೃತಕ ಬುದ್ಧಿಮತ್ತೆ, ಡ್ರೋನ್, ಸೆನ್ಸಾರ್ ತಂತ್ರಜ್ಞಾನಗಳನ್ನು ಬಳಸಿ ಪ್ಲಾಂಟ್ ಡಾಕ್ಟರ್ ಪರಿಕಲ್ಪನೆಯನ್ನು ರೂಪಿಸಲು ಬಯೋಟೆಕ್ನಾಲಜಿ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ತಿಳಿಸಿದರು.
ಪ್ರಸ್ತುತ ಬೆಳೆ ಇಳುವರಿ ಕೇವಲ ಶೇ. 40-45ರಷ್ಟಿದೆ. ಇದನ್ನು ಶೇ. 75-80ಕ್ಕೆ ಹೆಚ್ಚಿಸಲು ಸೂಕ್ತ ಜೈವಿಕ ಪರಿಹಾರಗಳನ್ನು ಕಂಡುಕೊಳ್ಳುವುದು ಅಗತ್ಯವಾಗಿದೆ. ಸಂಶೋಧನೆಯು ಕೇವಲ ಪ್ರಬಂಧ ಪ್ರಕಟಣೆಗೆ ಸೀಮಿತವಾಗದೆ, ರೈತರ ನೈಜ ಸಮಸ್ಯೆಗಳನ್ನು ಬಗೆಹರಿಸಲು ಬಳಕೆಯಾಗಬೇಕು ಎಂದರು.
ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ. ಪ್ರಕಾಶ್ ಕೆ.ಕೆ ಪ್ರಾಸ್ತವಿಕವಾಗಿ ಮಾತನಾಡಿ, ಜೈವಿಕ ತಂತ್ರಜ್ಞಾನ ಕ್ಷೇತ್ರದ ಸಂಶೋಧಕರು, ಪ್ರಾಧ್ಯಾಪಕರು, ಉದ್ಯಮ ತಜ್ಞರು, ವಿಜ್ಞಾನಿಗಳು ಹಾಗೂ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಗೆ ತಂದು, ಜ್ಞಾನ ವಿನಿಮಯ ಮತ್ತು ಸಮಾಜಕ್ಕೆ ಉಪಯುಕ್ತವಾದ ವೈಜ್ಞಾನಿಕ ಪರಿಹಾರಗಳನ್ನು ಕಂಡುಕೊಳ್ಳುವುದು ಈ ಸಮ್ಮೇಳನದ ಪ್ರಮುಖ ಧ್ಯೇಯವಾಗಿದೆ ಎಂದು ತಿಳಿಸಿದರು.
ದೇಶದ ವಿವಿಧ ಪ್ರಮುಖ ಸಂಸ್ಥೆಗಳಿಂದ ಸಲ್ಲಿಕೆಯಾಗಿರುವ ಒಟ್ಟು 70 ಸಂಶೋಧನಾ ಪ್ರಬಂಧಗಳು ಸಮ್ಮೇಳನದಲ್ಲಿ ಮಂಡನೆಯಾಗಲಿವೆ. ಜೈವಿಕ ತಂತ್ರಜ್ಞಾನ, ಆಹಾರ ವಿಜ್ಞಾನ, ಕೃಷಿ, ಪರಿಸರ ಸುಸ್ಥಿರತೆ, ಬಯೋಮೆಡಿಕಲ್ ವಿಜ್ಞಾನ ಹಾಗೂ ಕೈಗಾರಿಕಾ ಜೈವಿಕ ತಂತ್ರಜ್ಞಾನ ವಿಷಯಗಳ ಕುರಿತು ಮೌಖಿಕ ಮತ್ತು ಪೋಸ್ಟರ್ ಪ್ರಸ್ತುತಿಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
ಶೈಕ್ಷಣಿಕ ಪರಿಸರವು ವಿದ್ಯಾರ್ಥಿಗಳಲ್ಲಿ ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುತ್ತದೆ. ಬಯೋಫೌಂಡ್ರೀಸ್, ಬಯೋ-ಎಐ ಹಬ್, ಬಯೋನೆಸ್ಟ್ ಮತ್ತು ಇತರ ಪೂರಕ ವೇದಿಕೆಗಳಂತಹ ಸೌಲಭ್ಯಗಳನ್ನು ಸಂಶೋಧಕರು ಅತ್ಯುತ್ತಮವಾಗಿ ಬಳಸಿಕೊಳ್ಳಬೇಕು.
— ಡಾ. ಬಸವರಾಜ ಎಸ್. ಹುನಗುಂದ, ಹುಬ್ಬಳ್ಳಿಯ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ